More

    ಮನುಷ್ಯರಾಗಿ ಬದುಕುವುದೇ ಭಾವೈಕ್ಯತೆ; ಸಮಾಜ ಸೇವಕರು ಜಾತಿ, ಧರ್ಮ ನೋಡಬಾರದು; ಕನಕ ಜಯಂತ್ಯುತ್ಸವದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

    ಹಾವೇರಿ: ಇದೇ ಜಾತಿಯಲ್ಲಿ ಹುಟ್ಟಬೇಕು ಎಂದು ನಾವ್ಯಾರೂ ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. ನಮ್ಮ ಸ್ವಾರ್ಥಕ್ಕಾಗಿ ಈ ಜಾತಿ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಅದನ್ನೆಲ್ಲ ಬದಿಗಿಟ್ಟು, ಯಾರನ್ನೂ ದ್ವೇಷಿಸದೇ, ಮನುಷ್ಯರಾಗಿ ಬದುಕುವುದೇ ಭಾವೈಕ್ಯತೆ ಸಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
    ಜಾತಿ, ಅನಕ್ಷರತೆಯಿಂದ ಅಸಮಾನತೆ ಬಂದಿವೆ. ಶೂದ್ರ ವರ್ಗದ ಜನ ಶತಮಾನಗಳ ಕಾಲ ಅಕ್ಷರದಿಂದ ವಂಚಿತರಾಗಿದ್ದಾರೆ. ಇದಕ್ಕಾಗಿ ಕನಕದಾಸರು ಹೋರಾಡಿದರು. ಅವರು ಕೇವಲ ದಾಸ ಶ್ರೇಷ್ಠರಷ್ಟೇ ಅಲ್ಲ. ಇಡೀ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಹೋರಾಡಿದವರು ಎಂದರು.
    ನಾವು ಸಮಾಜ ಸೇವೆ ಮಾಡಲು ಬಂದಿದ್ದೇವೆ. ಸೇವೆ ಮಾಡುವಾಗ ಯಾವುದೇ ಜಾತಿ, ಧರ್ಮ ನೋಡಬಾರದು. ಈ ಮಠವೂ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಮಠಕ್ಕೆ ನಮ್ಮ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ಕೊಡುತ್ತೇನೆ ಎಂದರು.
    ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ ಮಾತನಾಡಿ, ಭಾವೈಕ್ಯತೆ ಮಾಯವಾಗುತ್ತಿರುವ ಈ ದಿನಗಳಲ್ಲಿ ಜಾತಿ, ಧರ್ಮ, ಪಕ್ಷಗಳ ಆಧಾರದಲ್ಲಿ ನಮ್ಮ ನಮ್ಮಲ್ಲೇ ತುಳಿತಕ್ಕೆ ಒಳಗಾಗುತ್ತಿದ್ದೇವೆ. ಜನರ ಭಾವನೆ ಅರಳಿಸುವ ಒಂದು ಗುಂಪು, ಕೆರಳಿಸುವ ಮತ್ತೊಂದು ಗುಂಪು ಇದೆ. ಇದನ್ನೆಲ್ಲ ಮೆಟ್ಟಿ ನಿಲ್ಲಬೇಕಿದೆ ಎಂದರು.
    ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಮೊಹಮ್ಮದ್ ಪೈಗಂಬರರು, ಯೇಸು ಕ್ರಿಸ್ತರಿಬ್ಬರೂ ಹುಟ್ಟಿದ್ದು ಕುರುಬರ ಮನೆಯಲ್ಲಿ. ಇದು ಭಾವೈಕ್ಯತೆ. ಕನಕದಾಸರು ಕುಲ ಕುಲ ಎಂದು ಹೊಡೆದಾಡದಿರಿ.. ಎಂದು ಸಾರಿದರು. ಕುಲ ಎಂದರೆ ಅವರ ಆಲೋಚನೆಯಲ್ಲಿ ರಕ್ತ. ಈ ರಕ್ತ ಕುಲ ಯಾವುದೆಂದು ನೋಡುವುದಿಲ್ಲ. ಅದಕ್ಕೆ ಎಲ್ಲರೂ ಒಂದೇ ಎಂದರು.
    ಶಾಸಕ ಬಸವರಾಜ ಶಿವಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಜಮಾತೆ ಅಹಲೆ ಸುನ್ನತ್ ರಾಜ್ಯಾಧ್ಯಕ್ಷ ಹಾಗೂ ವಿಜಯಪುರದ ಹಜರತ್ ಹಾಶಿಮ್ ಪೀರ್ ದರ್ಗಾದ ಸೈಯದ್ ಮೊಹಮ್ಮದ್ ತನ್ವೀರ್ ಹಾಶ್ಮಿ, ಕ್ಯಾಥೋಲಿಕ್ ಧರ್ಮಗುರು ಡಾ.ಅಲ್ಫೋನ್ಸ್ ಫರ್ನಾಂಡೀಸ್ ಯೇಸ ಮಾತನಾಡಿದರು.
    ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಸಂಸದ ಮಂಜುನಾಥ ಕುನ್ನೂರ, ಶಾಸಕರಾದ ಬಿ.ಜಿ.ಗೋವಿಂದಪ್ಪ, ಯು.ಬಿ.ಬಣಕಾರ, ಪ್ರಕಾಶ ಕೋಳಿವಾಡ, ಶ್ರೀನಿವಾಸ ಮಾನೆ, ಮತ್ತಿತರರು ಉಪಸ್ಥಿತರಿದ್ದರು.
    ಜಾತಿಗೆ ವ್ಯವಸ್ಥೆಗೆ ಚಲನೆ ಇಲ್ಲ
    ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯಗಳು ಆಡು ಭಾಷೆಯಲ್ಲಿ ಜನರಿಗೆ ನೀತಿ ಬೋಧಿಸಿದವು. ಆದರೂ ಜಾತಿ ವ್ಯವಸ್ಥೆ ಹೋಗಿಲ್ಲ. ಇದಕ್ಕೆ ಚಲನೆ ಇಲ್ಲ. ಚಲನೆ ಸಿಗಬೇಕಾದರೆ ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸೌಲಭ್ಯ ಸಿಗಬೇಕು. ಬಸವಾದಿ ಶರಣರು ಮೌಢ್ಯಗಳನ್ನು, ಕಂದಾಚಾರಗಳನ್ನು ಬಿಡಿ ಎಂದರೂ ವಿದ್ಯಾವಂತರೇ ಆಚರಿಸುತ್ತಿದ್ದಾರೆ. ನಮ್ಮ ಮನೆಯಲ್ಲಿ ನಾವು ನಾಲ್ವರು ಸಹೋದರರು. ಇಬ್ಬರು ವಿದ್ಯಾವಂತರು. ಮತ್ತಿಬ್ಬರು ಅವಿದ್ಯಾವಂತರು. ಹೀಗೆ ಆಗಲಿ ಎಂದು ದೇವರು ಬರೆದು ಕಳುಹಿಸಿರಲಿಲ್ಲ. ಇದಕ್ಕೆಲ್ಲ ಸಮಾಜವೇ ಕಾರಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
    ಸಿಎಂ ಹಾಡಿಹೊಗಳಿದ ಮೂಜಗು
    ಬದಾಮಿ ಕ್ಷೇತ್ರದಿಂದ ಸಿದ್ದರಾಮಯ್ಯನವರು ಕಳೆದ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದಾಗ, ಸ್ಥಳೀಯ ಕಾಂಗ್ರೆಸ್ ಮುಖಂಡ ಹಂಗರಗಿ ಮುಚಕಂಡಯ್ಯ ಎಂಬುವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಲು ತೀವ್ರ ಒತ್ತಡ ಉಂಟಾಗಿತ್ತು. ಮುಚಕಂಡಯ್ಯನವರು ನನ್ನ ಅಭಿಪ್ರಾಯ ಕೇಳಿದ್ದರು. ‘ಯಾವ ಕಾರಣಕ್ಕೂ ಬಿಜೆಪಿಗೆ ಸೇರಬೇಡ. ಸಿದ್ದರಾಮಯ್ಯನವರಂಥ ಅನುಭವಿ, ಸಮಾಜವಾದಿಗಳು ವಿಧಾನಸಭೆಯಲ್ಲಿ ಇರಬೇಕು. ಅದಕ್ಕಾಗಿ ಅವರನ್ನೇ ಬೆಂಬಲಿಸು’ ಎಂದಿದ್ದೆ. ಯಾಕಂದರೆ ಬಿ.ಎಸ್.ಯಡಿಯೂರಪ್ಪನವರು, ಸಿದ್ದರಾಮಯ್ಯನಂಥವರು ಬದುಕಿರುವರೆಗೂ ವಿಧಾನಸಭೆಯಲ್ಲಿ ಇರಬೇಕು ಎಂದು ನಾನು ಭಾವಿಸಿದ್ದೇನೆ. ಇದೇ ಭಾವೈಕ್ಯತೆ ಎಂದು ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
    ಕಾಗಿನೆಲೆ ಶ್ರೀಗಳಿಗೆ ಸನ್ಮಾನ
    ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಕಾಗಿನೆಲೆ ಗುರುಪೀಠ ಅಲಂಕರಿಸಿ 17 ವರ್ಷ ಪೂರೈಸಿದ ಸುಸಂದರ್ಭದಲ್ಲಿ ಶ್ರೀಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷವಾಗಿ ಸನ್ಮಾನಿಸಿದರು. ಶ್ರೀಗಳು ನಡೆದುಬಂದ ದಾರಿ ಕುರಿತ ವಿಡಿಯೋ ಟೀಸರ್ ಬಿಡುಗಡೆಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts