More

    ಇಂದಿರಾ ಕ್ಯಾಂಟೀನ್ ಕಮಿಷನ್ ಕುರಿತು ತನಿಖೆಗೆ ಒತ್ತಾಯ

    ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಕೂಸು ಇಂದಿರಾ ಕ್ಯಾಂಟೀನ್‌ನ ಬಿಲ್ ಪಾವತಿಗೂ ಕೆಲ ಅಧಿಕಾರಿಗಳು ಶೇ.10 ಪರ್ಸೆಂಟ್ ಕಮಿಷನ್ ಕೇಳಿರುವ ಆರೋಪದ ಕುರಿತು ಸಮಗ್ರ ತನಿಖೆ ನಡೆಸುವಂತೆ ಸಾರ್ವಜನಿಕರು, ಸಂಘ- ಸಂಸ್ಥೆಗಳಿಂದ ಒತ್ತಾಯ ಕೇಳಿ ಬಂದಿದೆ.
    ಕಮಿಷನ್ ಆರೋಪದ ಕುರಿತು ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣ ವಿ.ಬಿ. ಆಗ್ರಹಿಸಿದ್ದಾರೆ.
    ಬಡವರ ಹೊಟ್ಟೆ ತುಂಬಿಸುವ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಲ್ಲೂ ಅಧಿಕಾರಿಗಳು ಕಮಿಷನ್ ದಂಧೆಗೆ ನಿಂತಿದ್ದಾರೆ. ಹಾವೇರಿ, ಹಿರೇಕೆರೂರ ಹಾಗೂ ರಾಣೆಬೆನ್ನೂರ ಇಂದಿರಾ ಕ್ಯಾಂಟೀನ್‌ನ ಒಂದು ವರ್ಷದ ಸುಮಾರು 35 ಲಕ್ಷ ರೂ. ಬಿಲ್ ಪಾವತಿ ಮಾಡಿಲ್ಲ. ಬಿಲ್ ಕೇಳಿದರೆ ಸ್ಥಳೀಯ ಸಂಸ್ಥೆಗಳ ಕೆಲ ಅಧಿಕಾರಿಗಳು ಕಮಿಷನ್ ಕೇಳುತ್ತಿದ್ದಾರೆ ಎಂದು ಕ್ಯಾಂಟೀನ್ ಗುತ್ತಿಗೆ ಪಡೆದಿರುವ ನಿರ್ಮಲಾ ದೇವಿ ಮಹಿಳಾ ಮಂಡಳದ ಕಾರ್ಯದರ್ಶಿ ವಿಶ್ವನಾಥ ರೆಡ್ಡಿ ದರ್ಶನಾಪುರ ಆರೋಪಿಸಿದ್ದಾರೆ.
    ಈ ಕುರಿತು ‘ವಿಜಯವಾಣಿ’ ಅ.19ರಂದು ಮುಖಪುಟದಲ್ಲಿ ‘ಇಂದಿರಾ ಕ್ಯಾಂಟೀನ್‌ಗೂ ಕಮಿಷನ್ ಕಾಟ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.
    ಎರಡು ದಿನದಲ್ಲಿ ಗುತ್ತಿಗೆದಾರ- ಅಧಿಕಾರಿಗಳ ಸಭೆ
    ಗುತ್ತಿಗೆದಾರ ವಿಶ್ವನಾಥ ರೆಡ್ಡಿ ದರ್ಶನಾಪುರ ಹಾಗೂ ಹಾವೇರಿ, ರಾಣೆಬೆನ್ನೂರ ಹಾಗೂ ಹಿರೇಕೆರೂರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಮತ್ತು ನಗರಾಭಿವೃದ್ಧಿ ಕೋಶದ ಅಧಿಕಾರಿಗಳೊಂದಿಗೆ ಎರಡು ದಿನದಲ್ಲಿ ಸಭೆ ನಡೆಸುತ್ತೇನೆ. ಗುತ್ತಿಗೆದಾರ ಬಿಲ್ ಸಲ್ಲಿರುವ ಹಾಗೂ ಗುತ್ತಿಗೆದಾರ ಬಿಲ್ ಪಾವತಿಸಿಲ್ಲ ಎಂಬ ನಗರಸಭೆಯವ ಆರೋಪದ ಕುರಿತು ಕೂಲಂಕಶವಾಗಿ ಪರಿಶೀಲಿಸುತ್ತೇನೆ. ಬಿಲ್ ಪಾವತಿಸಲು ಕ್ರಮ ಕೈಗೊಳ್ಳುತ್ತೇನೆ. ಅಧಿಕಾರಿಗಳು ಕಮಿಷನ್ ಕೇಳಿರುವ ಕುರಿತು ದಾಖಲೆ ನೀಡಿದರೆ ಸ್ಥಳದಲ್ಲೇ ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
    ಕೋಟ್:
    ಇಂದಿರಾ ಕ್ಯಾಂಟೀನ್‌ನಲ್ಲಿ ಜನರಿಗೆ ಅಗತ್ಯಕ್ಕೆ ತಕ್ಕಷ್ಟು ಊಟ ಸಿಗುತ್ತಿಲ್ಲ. ಇಲ್ಲಿ ಹೊರಗೊಂದು ಒಳಗೊಂದು ನಾಟಕ ನಡೆಯುತ್ತಿದೆ. ಈ ಕ್ಯಾಂಟೀನ್‌ಗಳು ಬಡವರ ಹೊಟ್ಟೆ ತುಂಬಿಸುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ನಾಯಕರ ಜೇಬು ತುಂಬಿಸುವ ಕೇಂದ್ರಗಳಾಗಿವೆ. ಸಂಬಂಧಪಟ್ಟ ಇಲಾಖೆಯ ಸಚಿವರು, ರಾಜ್ಯಮಟ್ಟದ ಅಧಿಕಾರಿಗಳ ಮೂಲಕ ಸ್ಥಳೀಯ ಅಧಿಕಾರಿಗಳಿಂದ ಹಣ ವಸೂಲಿ ಮಾಡಿಸುತ್ತಿದ್ದಾರೆ. ಈ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕು.
    ಸಿದ್ದರಾಜ ಕಲಕೋಟಿ, ಜಿಲ್ಲಾಧ್ಯಕ್ಷ, ಬಿಜೆಪಿ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts