More

    ವಿಜ್ಞಾನ ಪ್ರಯೋಗಗಳಿಂದ ಮಕ್ಕಳಲ್ಲಿ ಸೃಜನಶೀಲತೆ ವೃದ್ಧಿ; ವಿಜ್ಞಾನ ಪ್ರಯೋಗಗಳ ಶಿಬಿರದಲ್ಲಿ ಹುಕ್ಕೇರಿ ಮಠದ ಶ್ರೀ

    ಹಾವೇರಿ: ವಿಜ್ಞಾನಗಳ ಪ್ರಯೋಗಗಳು ಮಕ್ಕಳಲ್ಲಿ ಕುತೂಹಲ ಹುಟ್ಟು ಹಾಕಿ, ಸೃಜನಶೀಲತೆಯ ಬೆಳವಣೆಗೆಗೆ ಸಹಾಯಕವಾಗುತ್ತದೆ. ಇದರಿಂದ ಕಲಿಕೆಯಲ್ಲಿ ಆತ್ಮವಿಶ್ವಾಸ ಹೆಚ್ಚಾಗಿ ವೈಜ್ಞಾನಿಕ ಮನೋಭಾವ ಬೆಳೆಯುತ್ತದೆ ಎಂದು ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
    ನಗರದ ಹುಕ್ಕೇರಿ ಮಠ ಶಿವಬಸವೇಶ್ವರ ಪ್ರೌಢಶಾಲೆಯಲ್ಲಿ ಶುಕ್ರವಾರ ಶಾಲಾ ಶಿಕ್ಷಣ ಇಲಾಖೆ ಮತ್ತು ಅಗಸ್ತ್ಯ ಅಂತಾರಾಷ್ಟ್ರೀಯ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ದಸರಾ ರಜೆಯ ವಿಜ್ಞಾನ ಪ್ರಯೋಗಗಳ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
    ವಿದ್ಯಾರ್ಥಿಗಳಲ್ಲಿ ಇತ್ತೀಚೆಗೆ ಇಂಜನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ಮೂಡುತ್ತಿದೆ. ಆದರೆ, ಮೂಲ ವಿಜ್ಞಾನದ ಬಗ್ಗೆ ಕುತೂಹಲ ಮತ್ತು ಆಸಕ್ತಿ ಕಡಿಮೆಯಾಗುತ್ತಿದೆ. ಇಂತಹ ಶಿಬಿರಗಳನ್ನು ಹೆಚ್ಚಾಗಿ ಆಯೋಜಿಸುವುದರಿಂದ ಮೂಲ ವಿಜ್ಞಾನದ ಕಡೆಗೆ ಆಸಕ್ತಿ ಹೊಂದಿ, ಉನ್ನತ ಸಂಶೋಧನೆ ಮಾಡಲು ಸಹಕಾರಿಯಾಗುತ್ತದೆ. ಚಂದ್ರಯಾನ-3 ಯಶಸ್ಸು ಇಂತಹ ಮೂಲ ವಿಜ್ಞಾನ ಅಧ್ಯಯನದ ಫಲವೇ ಆಗಿದೆ ಎಂದು ಹೇಳಿದರು.
    ಅಗಸ್ತ್ಯ ಫೌಂಡೇಶನ್ ಸಂಯೋಜಕ ವೀರನಗೌಡ ಫಕೀರಗೌಡ ಮಾತನಾಡಿ, ವಿಜ್ಞಾನಿ ರಾಮಜಿ ರಾಘವನ್ ನೇತೃತ್ವದಲ್ಲಿ ಈ ಫೌಂಡೇಶನ್ 1999ರಲ್ಲಿ ಪ್ರಾರಂಭವಾಗಿದೆ. ನಮ್ಮ ಸಂಸ್ಥೆ 190 ತೆರೆದ ವಾಯು ಪರಿಸರ ಪ್ರಯೋಗಾಲಯ, ತಾರಾಲಯಗಳ ಮೂಲಕ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದೆ ಎಂದರು.
    ವಿದ್ಯಾಪೀಠದ ಚೇರ್ಮನ್ ಎಸ್.ಎಸ್.ಮುಷ್ಠಿ ಅಧ್ಯಕ್ಷತೆ ವಹಿಸಿದ್ದರು. ವೀರಣ್ಣ ಅಂಗಡಿ, ಶಿಕ್ಷಕ ಎಸ್.ಎನ್.ಮಳೆಪ್ಪನವರ, ಮಲ್ಲಿಕಾರ್ಜುನ ಬಡಿಗೇರ, ರುದ್ರೇಶ ಹಳ್ಳಿಕೇರಿ, ಮಧುಮತಿ ಅರಳೇಶ್ವರ, ಮದಿನಾ ನದಾಫ್, ಚಿನ್ನು ಧಾರವಾಡ, ಶಿವಲಿಂಗಯ್ಯ ಮಠಪತಿ, ಉಮಾ ಗುಡಗೂರ, ಮೇಘಾ ರಾಚಪ್ಪನವರ, ಮತ್ತಿತರರು ಭಾಗವಹಿಸಿದ್ದರು. ಎಚ್.ಕೆ.ಆಡಿನ ಸ್ವಾಗತಿಸಿದರು. ಶಿವಬಸವ ಮರಳಿಹಳ್ಳಿ ನಿರೂಪಿಸಿದರು. ರವಿ ಕರಲಿಂಗಣ್ಣವರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts