More

    ಹಿರಿಯರನ್ನು ಪ್ರೀತಿ, ಗೌರವದಿಂದ ನೋಡಿಕೊಳ್ಳಿ; ನ್ಯಾಯಾಧೀಶ ಪುಟ್ಟರಾಜು

    ಹಾವೇರಿ: ಮಕ್ಕಳು ಹಿರಿಯ ನಾಗರಿಕರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಹಾಗೂ ಗೌರವದಿಂದ ಕಾಣಬೇಕು. ಇತ್ತೀಚಿನ ದಿನಗಳಲ್ಲಿ ತಂದೆ- ತಾಯಿಯನ್ನು ವೃದ್ದಾಶ್ರಮಕ್ಕೆ ದಾಖಲಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ವಿಷಾದಕರ ಸಂಗತಿ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಟ್ಟರಾಜು ಹೇಳಿದರು.
    ನಗರದ ಕೆಎಲ್‌ಇ ಸಂಸ್ಥೆಯ ಜಿ.ಎಚ್. ಕಾಲೇಜಿನಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ನಿವೃತ್ತ ನೌಕರರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ನೈಟಿಂಗೇಲ್ಸ್ ಮೆಟಿಕಲ್ ಟ್ರಸ್ಟ್ ಹಾಗೂ ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ 14567ರ ಸಹಯೋಗದಲ್ಲಿ ‘ವಿಶ್ವ ಹಿರಿಯ ನಾಗರಿಕರ ಶೋಷಣೆ ಜಾಗೃತಿ ದಿನಾಚರಣೆ’ ಅಂಗವಾಗಿ ಆಯೋಜಿಸಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ, ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
    ಮಕ್ಕಳು ಪೋಷಕರನ್ನು ವೃದ್ಧಾಶ್ರಮಕ್ಕೆ ದಾಖಲಿಸಿದರೆ ದಂಡ ಹಾಗೂ ಶಿಕ್ಷೆ ವಿಧಿಸಬಹುದಾಗಿದೆ. ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಹಿರಿಯ ನಾಗರಿಕರು ಶೋಷಣೆಗೆ ಒಳಗಾಗುತ್ತಿದ್ದರೆ ಸಹಾಯವಾಣಿಗೆ ಅಥವಾ ಸಂಬಂಧಿಸಿದ ಇಲಾಖೆ ಮಾಹಿತಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
    ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ ಮಾತನಾಡಿ, ಪ್ರಥಮ ಬಾರಿಗೆ 1997ರಲ್ಲಿ ಬೆಂಗಳೂರಿನಲ್ಲಿ ರೇವಣಸಿದ್ದಯ್ಯ ಹಿರಿಯರ ಸಹಾಯವಾಣಿ 14567 ಪ್ರಾರಂಭಿಸಿದರು. ಈ ಸಹಾಯವಾಣಿ ಸಹಾಯದಿಂದ ದೊಡ್ಡ ದೊಡ್ಡ ನಗರಗಳಲ್ಲಿ ಹಿರಿಯರ ಮೇಲೆ ನಡೆಯುವ ಹಲ್ಲೆ, ಮನೆಯಿಂದ ಹೊರಗೆ ಹಾಕುವುದು ಹೀಗೆ ಹಿರಿಯರ ಮೇಲೆ ನಡೆಯುವ ಶೋಷಣೆಗಳನ್ನು ತಡೆಯಲು ಸಾಧ್ಯವಾಗುತ್ತಿದೆ ಎಂದರು.
    ನಿವೃತ್ತ ಪ್ರಾಚಾರ್ಯ ಬಿ.ಸಿ.ಬನ್ನೂರ, ನಿವೃತ್ತ ಡಿಡಿಪಿಯು ಇ.ಎಂ.ಬಾಳಿಕಾಯಿ, ನಿವೃತ್ತ ಪ್ರಾಧ್ಯಾಪಕ ಎಸ್.ಎಂ.ತಿಪ್ಪನಗೌಡ, ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಡಿ.ಅಣ್ಣಿಗೇರಿ, ಆಕಾಶ ಯಡಹಳ್ಳಿ, ಜಿ.ಎಚ್. ಪಿಯು ಕಾಲೇಜು ಪ್ರಾಂಶುಪಾಲ ಜೆ.ಆರ್.ಶಿಂಧೆ, ಮತ್ತಿತರರು ಉಪಸ್ಥಿತರಿದ್ದರು.
    ಜಾಗೃತಿ ಜಾಥಾ:
    ನಗರದ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜು ಆವರಣದಲ್ಲಿ ಜಾಗೃತಿ ಜಾಥಾಕ್ಕೆ ಹಿರಿಯ ದಿವಾಣಿ ನ್ಯಾಯಾಧೀಶ ಪುಟ್ಟರಾಜು ಚಾಲನೆ ನೀಡಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ, ನಿವೃತ್ತ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು. ಜಾಗೃತಿ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts