More

    ಕುತೂಹಲ ಕೆರಳಿಸಿದ ಗ್ರಂಥಾಲಯ ಭೇಟಿ; ಮೊಬೈಲ್ ಮರೆತು ಅಕ್ಷರದ ಜತೆಗೆ ಕಾಲ ಕಳೆದ ಚಿಣ್ಣರು

    ಹಾವೇರಿ: ಮೊಬೈಲ್, ಕಂಪ್ಯೂಟರ್, ಇಂಟರ್‌ನೆಟ್ ಲೋಕದಲ್ಲಿ ಕಳೆದು ಹೋಗುತ್ತಿರುವ ಮಕ್ಕಳಿಗೆ ಪುಸ್ತಕಗಳ ಮಹತ್ವ ತಿಳಿಸುವ ಉದ್ದೇಶದಿಂದ ನಗರದ ಗೆಳೆಯರ ಬಳಗದ ವತಿಯಿಂದ ಇತ್ತೀಚೆಗೆ ಇಲ್ಲಿನ ದಿ.ಮಹಾದೇವ ಬಣಕಾರ ಜಿಲ್ಲಾ ಗ್ರಂಥಾಲಯದ ಭೇಟಿ ಎಂಬ ಕಾರ್ಯಕ್ರಮ ಮಕ್ಕಳಿಗೆ ವಿಶಿಷ್ಟ ಅನುಭವ ನೀಡಿತು. ಬಗೆ ಬಗೆಯ ಪುಸ್ತಕಗಳನ್ನು ಕಂಡು ಮಕ್ಕಳ ಕುತೂಹಲ ಕೆರಳಿಸಿತು.
    ಗೆಳೆಯರ ಬಳಗದ ಜ್ಞಾನಗಂಗಾ ಶಿಕ್ಷಣ ಸಮಿತಿಯ ಹಿರಿಯ ಕನ್ನಡ ಪ್ರಾಥಮಿಕ ಶಾಲೆ, ಮಾಗಾವಿ ಚನಬಸಪ್ಪ ಪ್ರೌಢಶಾಲೆ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳನ್ನು ಜಿಲ್ಲಾ ಗ್ರಂಥಾಲಯ ಪರಿಚಯಕ್ಕಾಗಿ ಕರೆತರಲಾಗಿತ್ತು. ಮಕ್ಕಳು ಮೊದಲ ಬಾರಿಗೆ ಗ್ರಂಥ ದೇಗುಲಕ್ಕೆ ಪ್ರವೇಶಿಸಿ ಪುಸ್ತಕಗಳನ್ನು ಸ್ಪರ್ಷಿಸಿದರು. ಕಬ್ಬಿಣ ರ‌್ಯಾಕ್‌ಗಳಲ್ಲಿ ಇದ್ದ ತಮಗಿಷ್ಟವಾದ ಪುಸ್ತಕಗಳನ್ನು ತೆಗೆದುಕೊಂಡು ಕೆಲಕಾಲ ಓದಿದರು.
    ಗ್ರಂಥಪಾಲಕ ಮಾಲತೇಶ ಲಿಂಗಾಪೂರ, ಎಂ. ಬಚ್ಚಾರೆಡ್ಡಿ ಗ್ರಂಥಾಲಯದಲ್ಲಿನ ಡಿಜಿಟಲ್ ಪುಸ್ತಕೀಕರಣ, ಉನ್ನತ ಅಧ್ಯಯನ ವಿಭಾಗ, ಕತೆ-ಕಾದಂಬರಿ ವಿಂಗಡಣ ವಿಭಾಗ ಹಾಗೂ ದಿನಪತ್ರಿಕೆಗಳ ವಿಭಾಗಗಳನ್ನು ಮಕ್ಕಳಿಗೆ ಪರಿಚಯಿಸಿದರು. ಲೈಬ್ರರಿಯಲ್ಲಿ 40 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಪ್ರತಿನಿತ್ಯ 42 ದಿನಪತ್ರಿಕೆಗಳು, ಸ್ಪರ್ಧಾ ಪುಸ್ತಕಗಳು ಲಭ್ಯವಿರುವುದಾಗಿ ತಿಳಿಸಿದರು.
    ಕೊನೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಗೆಳೆಯರ ಬಳಗದ ವತಿಯಿಂದ ಕಳೆದ ತಿಂಗಳು ಏರ್ಪಡಿಸಿದ್ದ ಚಂದ್ರಯಾನ- 3 ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ‘ನಾನೂ ಚಂದ್ರಯಾನ ನೋಡಿದೆ’ ಎನ್ನುವ ಪ್ರಮಾಣ ಪತ್ರ ವಿತರಿಸಲಾಯಿತು. ಡಾ.ವಿ.ಪಿ.ದ್ಯಾಮಣ್ಣನವರ 15 ಕ್ಕೂ ಹೆಚ್ಚು ಅಮೂಲ್ಯ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಉಚಿತವಾಗಿ ನೀಡಿದರು.
    ಹಿರಿಯ ಲೇಖಕ ಸತೀಶ ಕುಲಕರ್ಣಿ, ಮುಖ್ಯೋಪಾಧ್ಯಾಯರಾದ ಉಮಾ ಹೊರಡಿ, ಅನಿತಾ ನಂದಿಗೇರಿ, ಪುಷ್ಪಾವತಿ ಕೆರೂಡಿ, ಕುಸುಮಾ ಮಲ್ಲಾಡದ, ಪಿ.ಬಿ.ಮುದ್ದಿ, ಚಂದ್ರಶೇಖರ ಮಾಳಗಿ, ಅನಿತಾ ಮಂಜುನಾಥ, ನೇತ್ರಾ ಅಂಗಡಿ, ರಾಜೇಂದ್ರ ಹೆಗಡೆ, ಸುಭಾಸ ಮಡಿವಾಳರ ಹಾಗೂ ಹನುಮಂತಸಿಂಗ್ ರಜಪೂತ, ನೀಲಮ್ಮ ಪಟ್ಟೇದ, ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts