More

    ಹಾವೇರಿ ಟಿಕೆಟ್‌ಗಾಗಿ ಕೈ-ಕಮಲ ಪಡೆ ಸರ್ಕಸ್; ಮೀಸಲು ಕ್ಷೇತ್ರದಲ್ಲಿ ಹೆಚ್ಚಿದ ಆಕಾಂಕ್ಷಿಗಳ ದಂಡು

    ಕೇಶವಮೂರ್ತಿ ವಿ.ಬಿ. ಹಾವೇರಿ
    ಪರಿಶಿಷ್ಟ ಜಾತಿಗೆ (ಎಸ್‌ಸಿ) ಮೀಸಲು ಆಗಿರುವ ಯಾಲಕ್ಕಿ ಕಂಪಿನ ಹಾವೇರಿ ವಿಧಾನಸಭೆ ಕ್ಷೇತ್ರದಲ್ಲಿ ಈಗಾಗಲೇ ಚುನಾವಣೆಯ ಕಾವು ಏರತೊಡಗಿದೆ. ಈ ಕ್ಷೇತ್ರದಲ್ಲಿ ಪ್ರಬಲ ಎದುರಾಳಿಗಳಾದ ಬಿಜೆಪಿ, ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಉಂಟಾಗಿದ್ದು, ಶಾಸಕ ನೆಹರು ಓಲೇಕಾರ ಬದಲು ಬೇರೆಯವರಿಗೆ ಟಿಕೆಟ್ ನೀಡುವಂತೆ ಹಲವು ಬಿಜೆಪಿ ಮುಖಂಡರು ದುಂಬಾಲು ಬಿದ್ದಿರುವುದು ಕುತೂಹಲ ಕೆರಳಿಸಿದೆ.
    2008ರ ಕ್ಷೇತ್ರ ಮರು ವಿಂಗಡಣೆ ಬಳಿಕ ಹಾವೇರಿ ವಿಧಾನಸಭಾ ಕ್ಷೇತ್ರ ಎಸ್‌ಸಿ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿತು. ನಂತರ ನಡೆದ ಮೂರು ಚುನಾವಣೆಯಲ್ಲಿ 2008 ಮತ್ತು 2018ರಲ್ಲಿ ಬಿಜೆಪಿಯಿಂದ ನೆಹರು ಓಲೇಕಾರ ಶಾಸಕರಾಗಿ ಹೊರಹೊಮ್ಮಿದರು. 2013ರಲ್ಲಿ ಕಾಂಗ್ರೆಸ್‌ನಿಂದ ರುದ್ರಪ್ಪ ಲಮಾಣಿ ಗೆಲುವು ತಮ್ಮದಾಗಿಸಿಕೊಂಡಿದ್ದರು.
    2008ಕ್ಕಿಂತ ಮುಂಚೆ ಇವರಿಬ್ಬರು ಬ್ಯಾಡಗಿ ಕ್ಷೇತ್ರದಲ್ಲಿ ತಲಾ ಒಂದು ಬಾರಿ ಗೆಲುವು ಸಾಧಿಸಿದ್ದರು. ನಂತರ ಹಾವೇರಿಯಲ್ಲೂ ಇವರಿಬ್ಬರೇ ಪ್ರಬಲ ಎದುರಾಳಿಗಳಾಗಿದ್ದರು. ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಹಳೇ ಮುಖಗಳಿಗೆ ಮಣೆ ಹಾಕದೇ, ಹೊಸ ಮುಖಗಳಿಗೆ ಟಿಕೆಟ್ ಕೊಡುವಂತೆ ಪಕ್ಷದ ಕಾರ್ಯಕರ್ತರು ಹೈಕಮಾಂಡ್‌ಗೆ ಒತ್ತಡ ಹೇರುತ್ತಿದ್ದಾರೆ.
    ಕಾಂಗ್ರೆಸ್‌ನಲ್ಲಿ 10 ಆಕಾಂಕ್ಷಿಗಳು
    ಸಿದ್ದರಾಮಯ್ಯ ಸರ್ಕಾರದಲ್ಲಿ ಜವಳಿ ಮತ್ತು ಮುಜರಾಯಿ ಖಾತೆ ಸಚಿವರಾಗಿದ್ದ ರುದ್ರಪ್ಪ ಲಮಾಣಿ ಈ ಬಾರಿಯೂ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಕಳೆದ ಬಾರಿ ಸೋಲುಂಡಿದ್ದರೂ ಈ ಬಾರಿ ಟಿಕೆಟ್ ತಮಗೇ ಪಕ್ಕಾ ಎಂದು ಕ್ಷೇತ್ರದ ತುಂಬ ಓಡಾಡುತ್ತಿದ್ದಾರೆ. ಮೀಸಲು ಕ್ಷೇತ್ರದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ.ಹಿರೇಮಠ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವುದು ಕುತೂಹಲ ಮೂಡಿಸಿದೆ. ನಿವೃತ್ತ ಪೊಲೀಸ್ ಅಧಿಕಾರಿ ಶಿವಕುಮಾರ ತಾವರಗಿ, ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಡಾ.ಸಂಜಯ ಡಾಂಗೆ, ಕಳೆದ ಬಾರಿ ಬಿಜೆಪಿ ಟಿಕೆಟ್ ಕೇಳಿದ್ದ ಈರಪ್ಪ ಲಮಾಣಿ ಈ ಬಾರಿ ಕಾಂಗ್ರೆಸ್ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಜಗದೀಶ ಬೆಟಗೇರಿ, ಚಂದನರಾಣಿ ದೊಡ್ಡಮನಿ, ಪುಟ್ಟಪ್ಪ ಮರಿಯಮ್ಮನವರ ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.
    ಬಿಜೆಪಿ ಟಿಕೆಟ್ ಆಕಾಂಕ್ಷಿಗಳು
    ಶಾಸಕ ನೆಹರು ಓಲೇಕಾರ ನಾನೇ ಗೆಲ್ಲುವ ಕುದುರೆಯಾಗಿದ್ದು, ನನಗಲ್ಲದೇ ಮತ್ಯಾರಿಗೆ ಟಿಕೆಟ್ ಎಂಬ ಭರವಸೆಯಿಂದ ಕ್ಷೇತ್ರದಾದ್ಯಂತ ಚಟುವಟಿಕೆಯಿಂದ ಓಡಾಡುತ್ತಿದ್ದಾರೆ. ಆದರೆ, ಪರಿಸ್ಥಿತಿ ಹಾಗಿಲ್ಲ. ಹೇಗಾದರೂ ಮಾಡಿ ಓಲೇಕಾರಗೆ ಟಿಕೆಟ್ ತಪ್ಪಿಸಬೇಕು ಎಂದು ಸ್ವಪಕ್ಷೀಯರಲ್ಲೇ ಹಲವರು ಕಸರತ್ತು ನಡೆಸಿದ್ದಾರೆ. ಉಳಿದಂತೆ ಕೆ.ಬಿ.ಮಲ್ಲಿಕಾರ್ಜುನ, ವೆಂಕಟೇಶ ನಾರಾಯಣಿ, ಪರಮೇಶ್ವರಪ್ಪ ಮೇಗಳಮನಿ, ರಾಮು ಮಾಳಗಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ನಡುವೆ ಬ್ಯಾಡಗಿ ಉಪ ತಹಸೀಲ್ದಾರ್ ಗವಿಸಿದ್ದಪ್ಪ ದ್ಯಾಮಣ್ಣವರ ಹಾವೇರಿ ಮೀಸಲು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ.
    ಬಾಕ್ಸ್
    ಕ್ಷೇತ್ರದ ಮೇಲೆ ಅಧಿಕಾರಿಗಳ ಕಣ್ಣು

    ಸಂಘ ಪರಿವಾರದೊಂದಿಗೆ ನಿಕಟ ಸಂಪರ್ಕ ಹೊಂದಿರುವ ಬ್ಯಾಡಗಿ ಉಪ ತಹಸೀಲ್ದಾರ ಗವಿಸಿದ್ದಪ್ಪ ದ್ಯಾಮಣ್ಣವರ ಹೆಸರು ಕಳೆದ ಬಾರಿಯೂ ಗಟ್ಟಿಯಾಗಿ ಕೇಳಿ ಬಂದಿತ್ತು. ಈ ಬಾರಿಯೂ ಇವರ ಹೆಸರು ಮುನ್ನೆಲೆಗೆ ಬಂದಿದ್ದು, ಸಂಘದ ಬೆಂಬಲದೊಂದಿಗೆ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸುತ್ತಾರೆಂಬ ಮಾತುಗಳೂ ಕೇಳಿ ಬರುತ್ತಿವೆ. ಕಾಂಗ್ರೆಸ್ ಟಿಕೆಟ್‌ಗಾಗಿ ನಿವೃತ್ತ ಪೊಲೀಸ್ ಅಧಿಕಾರಿ ಶಿವಕುಮಾರ ತಾವರಗಿ ಹೈಕಮಾಂಡ್ ಮಟ್ಟದಲ್ಲಿ ಯತ್ನ ನಡೆಸಿದ್ದಾರೆ. ಬಾಕ್ಸ್
    ನೇರ ಹಣಾಹಣಿ ಸಾಧ್ಯತೆ
    ಕಳೆದ ಬಾರಿಯಂತೆ ಈ ಬಾರಿಯೂ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ಸಾಧ್ಯತೆ ದಟ್ಟವಾಗಿದೆ. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಉಂಟಾಗಿದ್ದ ವಿರೋಧಿ ಅಲೆ ಹಾಗೂ ಸ್ವಜನ ಪಕ್ಷಪಾತದಿಂದ ರುದ್ರಪ್ಪ ಲಮಾಣಿ ಪರಾಭವಗೊಂಡಿದ್ದರು. ಈ ಬಾರಿ ಅದೇ ಪರಿಸ್ಥಿತಿ ಶಾಸಕ ನೆಹರು ಓಲೇಕಾರಗೆ ಎದುರಾಗಿದೆ.
    ಜೆಡಿಎಸ್ ಆಟಕ್ಕುಂಟು…
    ಈ ಕ್ಷೇತ್ರದಲ್ಲಿ ಜೆಡಿಎಸ್ ಮೊದಲಿನಿಂದಲೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. ಈಗಾಗಲೇ ತುಕಾರಾಮ ಮಾಳಗಿ ಹೆಸರು ಈಗಾಗಲೇ ಘೋಷಣೆಯಾಗಿದ್ದು, ಕ್ಷೇತ್ರದಲ್ಲಿ ಓಡಾಟ ನಡೆಸಿದ್ದಾರೆ. ಕೊನೆಯ ಕ್ಷಣದಲ್ಲಿ ಬದಲಾವಣೆ ಆದರೂ ಅಚ್ಚರಿ ಇಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts