More

    ಗಡಿ ರಕ್ಷಣೆಗೆ ಯೋಧರು, ಸಮಾಜ ರಕ್ಷಣೆಗೆ ಪೊಲೀಸರು; ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ನ್ಯಾಯಾಧೀಶೆ ಯಾದವ ವನಮಾಲಾ ಆನಂದರಾವ್ ಹೇಳಿಕೆ

    ಹಾವೇರಿ: ದೇಶದ ಗಡಿ ರಕ್ಷಣೆಗಾಗಿ ಯೋಧರು ತಮ್ಮ ಸೇವೆಯನ್ನು ಸಲ್ಲಿಸುತ್ತಿರುವ ಮಾದರಿಯಲ್ಲಿ ನಾಗರಿಕ ಸಮಾಜದ ರಕ್ಷಣೆಗಾಗಿ ಪೊಲೀಸರು ತಮ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಸೇವೆಯನ್ನು ಸಮಾಜ ಎಂದಿಗೂ ಮರೆಯಬಾರದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಯಾದವ ವನಮಾಲಾ ಆನಂದರಾವ್ ಹೇಳಿದರು.
    ಇಲ್ಲಿನ ಕೆರಿಮತ್ತಿಹಳ್ಳಿ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ‘ಪೊಲೀಸ್ ಹುತಾತ್ಮರ ದಿನಾಚರಣೆ’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ದೇಶಾದ್ಯಂತ ಕರ್ತವ್ಯ ಪಾಲನೆಯಲ್ಲಿ ಪ್ರಾಣಾರ್ಪಣೆ ಮಾಡಿದ ಪೊಲೀಸ್ ಪಡೆಯ ನೆನಪಿಗಾಗಿ ಮತ್ತು ಗೌರವಾರ್ಥವಾಗಿ ಇಂದು ನಾವು ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.
    1959ರಲ್ಲಿ ಭಾರತ ಮತ್ತು ಟಿಬೆಟ್ ಗಡಿಯಲ್ಲಿ ಚೀನಿಯರ ದಾಳಿಯಿಂದ ನಮ್ಮ ದೇಶ ಆಘಾತಕ್ಕೆ ಒಳಗಾಗಿತ್ತು. ಆಗ ನಮ್ಮ ದೇಶದ ಲಡಾಕ್ ಪ್ರಾಂತ್ಯದ ಅಕ್ಷಯ್ ಚಿನ್ ಹಾಟ್ ಸ್ಟ್ರಿಂಗ್ ಪ್ರದೇಶದಲ್ಲಿ ಗಡಿ ರಕ್ಷಣೆಗಾಗಿ ನಮ್ಮ ದೇಶದ ಯೋಧರನ್ನು ಮೂರು ಘಟಕಗಳನ್ನಾಗಿ ನೇಮಿಸಲಾಗಿತ್ತು. ಕಾರ್ಯಾಚರಣೆ ಮುಗಿದ ನಂತರ ಎರಡು ಘಟಕಗಳು ವಾಪಸಾದವು. ಮೂರನೇ ಘಟಕವಾದ ಇಂಡಿಯನ್ ಪೊಲೀಸ್ ವಿಂಗ್ ಸಿಆರ್‌ಪಿಎಫ್ ಘಟಕ ಮರಳಿ ಬರಲಿಲ್ಲ. ಅಕ್ಟೋಬರ್ 21, 1959ರಲ್ಲಿ ಹಾಟ್ ಸ್ಟ್ರಿಂಗ್ ಪ್ರದೇಶದಲ್ಲಿ ಸಿಆರ್‌ಪಿಎಫ್‌ನ ಹತ್ತು ಜನ ಯೋಧರು ಹುತಾತ್ಮರಾಗಿರುವುದು ನಂತರ ಗೊತ್ತಾಯಿತು. ಅವರ ಗೌರವಾರ್ಥವಾಗಿ ಈ ದಿನಾಚರಣೆ ಮಾಡಲಾಗುತ್ತಿದೆ ಎಂದು ಸ್ಮರಿಸಿದರು.
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ ಮಾತನಾಡಿ, 1959ರ ಅಕ್ಟೋಬರ್ 21ರಂದು ಕೇಂದ್ರ ಮೀಸಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿವೈಎಸ್‌ಪಿ ಕರಣಸಿಂಗ್ ಲಡಾಕ್ ಗಡಿಯಲ್ಲಿ ಅತಿ ಕಡಿಮೆ ಸೈನಿಕರೊಂದಿಗೆ ಚೈನಾ ಸೈನಿಕರ ವಿರುದ್ಧ ಹೋರಾಡಿ ಮಡಿದರು. ರಾಷ್ಟ್ರದ ರಕ್ಷಣೆ ಮಾಡಿ ಕರ್ತವ್ಯ ನಿಷ್ಠೆ ತೋರಿದ ಈ ಮಹಾನ್ ವ್ಯಕ್ತಿ ಹಾಗೂ ಸಿಬ್ಬಂದಿಯ ಸೇವೆ ಸದಾ ಸ್ಮರಣೀಯ ಎಂದು ಹೇಳಿದರು.
    ವೇದಿಕೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಡಿವೈಎಸ್‌ಪಿಗಳು, ವಿವಿಧ ಠಾಣೆಗಳ ವೃತ್ತಗಳ ಪೊಲೀಸ್ ಅಧಿಕಾರಿಗಳು, ಮಾಜಿ ಸೈನಿಕರು, ಗಣ್ಯರು ಉಪಸ್ಥಿತರಿದ್ದರು.
    189 ಅಧಿಕಾರಿ, ಸಿಬ್ಬಂದಿ ಪ್ರಾಣಾರ್ಪಣೆ
    ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶಾದ್ಯಂತ ವಿವಿಧ ದರ್ಜೆಗಳ 189 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲಸದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಕರ್ನಾಟಕದಲ್ಲಿ 16 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಕರ್ತವ್ಯದಲ್ಲಿದ್ದಾಗ ಮೃತಪಟ್ಟಿದ್ದಾರೆ ಎಂದು ಎಸ್‌ಪಿ ಶಿವಕುಮಾರ ಗುಣಾರೆ ತಿಳಿಸಿದರು.
    ಪುಷ್ಪಗುಚ್ಛ ಸಮರ್ಪಣೆ
    ಕಾರ್ಯಕ್ರಮಕ್ಕೂ ಮುನ್ನ ಹುತಾತ್ಮರಾದ ಪೊಲೀಸರ ಸ್ಮರಣಾರ್ಥ ಪೊಲೀಸ್ ಹುತಾತ್ಮ ಸ್ಮಾರಕಕ್ಕೆ ಗಣ್ಯರಿಂದ ಪುಷ್ಪಗುಚ್ಛ ಸಮರ್ಪಣೆ ಮಾಡಲಾಯಿತು. ಪೊಲೀಸ್ ತುಕಡಿಗಳ ಕವಾಯತು ಸಮಾದೇಷ್ಟರಿಂದ ವಂದನೆ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts