More

    ಮೆಡಿಕಲ್ ಕಾಲೇಜ್‌ಗೆ 25 ಕೋಟಿ ರೂ. ಬಿಡುಗಡೆ; ಶೀಘ್ರವೇ ಸಿಎಂ ಅವರಿಂದ ಉದ್ಘಾಟನೆ; ಸಚಿವ ಶಿವಾನಂದ ಪಾಟೀಲ

    ಹಾವೇರಿ: ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಹಿಮ್ಸ್)ಯ ಹೊಸ ಕಟ್ಟಡ ಕಾಮಗಾರಿಗೆ ಅಗತ್ಯವಾಗಿರುವ 25 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದೆ. ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಹಿಮ್ಸ್ ಹೊಸ ಕಟ್ಟಡ ಉದ್ಘಾಟನೆಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
    ನಗರದಲ್ಲಿ ಮಂಗಳವಾರ ಸ್ವಾತಂತ್ರೊೃೀತ್ಸವ ಸಮಾರಂಭದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಮ್ಸ್ ಕಟ್ಟಡ ಕಾಮಗಾರಿ ಭರದಿಂದ ಸಾಗಿದ್ದು, ಬಾಕಿ ಕಾಮಗಾರಿಗಾಗಿ ನಮ್ಮ ಮನವಿಗೆ ಸ್ಪಂದಿಸಿ ಸಿಎಂ 25 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಅಕ್ಟೋಬರ್ ಒಳಗಾಗಿ ಎ ಮತ್ತು ಬಿ ಬ್ಲಾಕ್ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲಾಗುವುದು. ಇದೇ ವರ್ಷದಿಂದಲೇ ಹೊಸ ಕಟ್ಟಡದಲ್ಲಿ ತರಗತಿಗಳನ್ನು ಆರಂಭಿಸಲಾಗುವುದು ಎಂದರು.
    ಹಾವೇರಿ ನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪೈಪ್‌ಲೈನ್ ಕಾಮಗಾರಿಗಾಗಿ ಟೆಂಡರ್ ಕರೆಯಲಾಗಿದೆ. ನಾವು ಕೊಟ್ಟ ಭರವಸೆ ಈಡೇರಿಸಿಯೇ ತೀರುತ್ತೇವೆ. ಹೆಗ್ಗೇರಿ ಕೆರೆಗೆ ನೀರು ಹರಿಸಲಾಗುತ್ತಿದ್ದು, ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಾಗುವುದು. ಜಿಲ್ಲೆಗೆ ಆಗಸ್ಟ್‌ನಲ್ಲಿ ಶೇ.87ರಷ್ಟು ಮಳೆ ಕೊರತೆ ಉಂಟಾಗಿದೆ. ನಮ್ಮ ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು ಬೆಳೆ ವಿಮೆ ನೋಂದಣಿ ಮಾಡಿಸಿದ್ದಾರೆ. ಸದ್ಯಕ್ಕೆ ಬಿತ್ತನೆ ಚೆನ್ನಾಗಿ ಆಗಿದೆ. ಮಳೆಯ ನಿರೀಕ್ಷೆಯನ್ನು ನಾವೂ ಮಾಡುತ್ತಿದ್ದೇವೆ. ಮಳೆ ಬಾರದಿದ್ದಲ್ಲಿ ಬರಗಾಲ ಘೋಷಣೆಗೆ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ ಎಂದರು.
    ಪ್ರತಿಯೊಂದು ಜಿಲ್ಲೆಯವರೂ ಶಾಲಾ ಕಟ್ಟಡಗಳ ದುರಸ್ತಿಗೆ ಸಿಎಂ ಬಳಿ ಬೇಡಿಕೆ ಇಟ್ಟಿದ್ದಾರೆ. ಈ ವರ್ಷ ಆಗದಿದ್ದರೂ ಮುಂದಿನ ವರ್ಷವಾದರೂ ಆದ್ಯತೆಯ ಮೇರೆಗೆ ಅನುದಾನ ನೀಡುವುದಾಗಿ ಅವರು ತಿಳಿಸಿದ್ದಾರೆ. ಮೃತ ರೈತರ ಕುಟುಂಬದವರಿಗೆ ಬೆಳೆ ವಿಮೆ ನೀಡುವ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗುವುದು ಎಂದರು.
    ಎಸ್‌ಐಟಿ ತನಿಖೆ ಆರಂಭ
    ಹಾವೇರಿ ವೈದ್ಯಕೀಯ ಕಾಲೇಜ್ ಸೇರಿದಂತೆ ರಾಜ್ಯದ ನಾಲ್ಕು ಕಾಲೇಜುಗಳ ಎಸ್.ಐ.ಟಿ. ತನಿಖೆ ನಡೆಯುತ್ತಿದೆ. ತನಿಖೆ ಬಗ್ಗೆ ನಾವು ಚಿಂತನೆ ಮಾಡಲ್ಲ. ಕಟ್ಟಡ ಕಾಮಗಾರಿ ಪೂರ್ಣಗೊಳಿಸುವುದು ನಮ್ಮ ಮೊದಲ ಗುರಿ. ಕಾಲೇಜಿನ ಎಸ್‌ಸಿಎಸ್‌ಟಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಸಮಸ್ಯೆ ಕುರಿತು ಚರ್ಚಿಸುತ್ತೇನೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

    ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು 25 ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಆದಷ್ಟು ಬೇಗ ಸರ್ಕಾರ ಬೀಳುತ್ತದೆ ಎಂದಿದ್ದಾರೆ. ಅವರ ಜಿಲ್ಲೆಯಲ್ಲೇ ಯಾವೊಬ್ಬ ಶಾಸಕ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬುದನ್ನು ಅವರು ಮೊದಲು ಸ್ಪಷ್ಟಪಡಿಸಲಿ.
    ಶಿವಾನಂದ ಪಾಟೀಲ, ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts