More

    ಅನಧಿಕೃತ ಪಟಾಕಿ ಅಂಗಡಿ, ದಾಸ್ತಾನು ಪತ್ತೆ ಹಚ್ಚಿ; ಅವಘಡಗಳ ತಡೆಗೆ ಮುನ್ನೆಚ್ಚರಿಕೆ ವಹಿಸಿ; ಜಿಲ್ಲಾಧಿಕಾರಿ ರಘುನಂದನ ಮೂರ್ತಿ

    ಹಾವೇರಿ: ಜಿಲ್ಲೆಯಲ್ಲಿ ಪರವಾನಗಿ ಇಲ್ಲದೇ ಅನಧೀಕೃತವಾಗಿ ಪಟಾಕಿಗಳ ಸಂಗ್ರಹ, ಸಾಗಣೆ, ತಯಾರಿಕೆ ಹಾಗೂ ಮಾರಾಟ ಮಾಡುವ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು. ಇಂತಹ ಚಟುವಟಿಕೆಗಳ ಪತ್ತೆಗಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತಪಾಸಣೆ ನಡೆಸಿ, ವರದಿ ನೀಡುವಂತೆ ತಹಶೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚನೆ ನೀಡಿದರು.
    ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಭವಿಷತ್ತಿನಲ್ಲಿ ಸಂಭವನೀಯ ಪಟಾಕಿ ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತಂತೆ ಅಧಿಕಾರಿಗಳ ಸಭೆ ನಡೆಸಿದ ಅವರು, ಉಪವಿಭಾಗಾಧಿಕಾರಿಗಳ ಹಂತದಲ್ಲಿ ತಾಲೂಕು ಮಟ್ಟದಲ್ಲಿ ಸಭೆ ನಡೆಸಬೇಕು. ತಹಶೀಲ್ದಾರ್ ನೇತೃತ್ವದಲ್ಲಿ ಕಂದಾಯ, ಪೊಲೀಸ್, ಆರ್.ಡಿ.ಪಿ.ಆರ್., ಸ್ಥಳೀಯ ನಗರ ಸಂಸ್ಥೆಗಳು, ಪರಿಸರ ಇಲಾಖೆ ಹಾಗೂ ಅಗ್ನಿಶಾಮಕ ಇಲಾಖೆಗಳ ಪ್ರತಿನಿಧಿಗಳನ್ನೊಳಗೊಂಡ ತಂಡ ಅಂಗಡಿವಾರು, ಗೋಡೌನ್‌ವಾರು ತಪಾಸಣೆ ನಡೆಸಿ, ಕೂಡಲೇ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
    ಪರವಾನಗಿ ಪಡೆಯದೇ ಪಟಾಕಿ ಉತ್ಪಾದನೆ, ದಾಸ್ತಾನು, ಮಾರಾಟ ಕಂಡುಬಂದಲ್ಲಿ ಅಂಥವರ ವಿರುದ್ಧ ಎಫ್.ಐ.ಆರ್.ದಾಖಲಿಸಬೇಕು. ಈಗಾಗಲೇ ಅನಧೀಕೃತವಾಗಿ ಗೋಡೌನ್‌ಗಳಲ್ಲಿ ಪಟಾಕಿಗಳನ್ನು ದಾಸ್ತಾನು ಮಾಡಿದ್ದು ಕಂಡುಬಂದರೆ ಅಂಥವರ ವಿರುದ್ಧ ನೋಟೀಸ್ ಜಾರಿಗೊಳಿಸಿ ಪಟಾಕಿಗಳನ್ನು ತೆರವುಗೊಳಿಸಬೇಕು. ಒಂದೊಮ್ಮೆ ನೋಟೀಸ್ ನೀಡಿದರೂ ಪಟಾಕಿ ತೆರವುಗೊಳಿಸಲು ತಡಮಾಡಿದರೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಪಟಾಕಿಗಳನ್ನು ನಿಷ್ಕ್ರಿಯಗೊಳಿಸುವಂತೆ ಸೂಚಿಸಿದರು.
    ಗಣೇಶ ಹಬ್ಬದ ಸಂದರ್ಭದಲ್ಲಿ ಪಟಾಕಿ ಮಾರಾಟ-ದಾಸ್ತಾನಿಗೆ ತಾತ್ಕಾಲಿಕ ಪರವಾನಿಗೆ ಪಡೆದುಕೊಂಡು ಮಾರಾಟ ಮಾಡಿದವರು, ಉಳಿಕೆ ಪಟಾಕಿಯನ್ನು ಯಾವುದೇ ಕಾರಣಕ್ಕೂ ಜಿಲ್ಲೆಯ ಗಡಿಯೊಳಗೆ ದಾಸ್ತಾನುಮಾಡಿಕೊಳ್ಳುವಂತಿಲ್ಲ. ಈ ಪಟಾಕಿಗಳನ್ನು ಖರೀದಿಸಿದ ಪ್ಯಾಕ್ಟರಿಗಳಿಗೆ ಅಥವಾ ಡೀಲರ್‌ಗಳಿಗೆ ಹಿಂತಿರುಗಿಸಬೇಕು. ಮುಂದಿನ ದಿನಗಳಲ್ಲಿ ಶಾಶ್ವತ ಹಾಗೂ ತಾತ್ಕಾಲಿಕ ಪರವಾನಿಗೆ ಪಡೆದು ಪಟಾಕಿ ದಾಸ್ತಾನು ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ತಹಶೀಲ್ದಾರಗಳಿಗೆ ಮಾಹಿತಿ ನೀಡಬೇಕು. ನಿಗದಿತ ಪ್ರಮಾಣದಲ್ಲೇ ದಾಸ್ತಾನುಮಾಡಿಕೊಳ್ಳಬೇಕು. ನಿಯೋಜಿತ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲೇ ಗೋಡೌನ್‌ನಲ್ಲಿ ಪಟಾಕಿ ದಾಸ್ತಾನು ಮಾಡಿಕೊಳ್ಳುವಂತೆ ಲೈಸನ್ಸ್‌ದಾರರಿಗೆ ಸೂಚನೆ ನೀಡಿ ಎಂದು ತಿಳಿಸಿದರು.
    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಹಾವೇರಿ ಉಪವಿಭಾಗಾಧಿಕಾರಿ ಡಾ.ಚನ್ನಪ್ಪ, ಸವಣೂರ ಉಪವಿಭಾಗಾಧಿಕಾರಿ ಮಹ್ಮದ, ಡಿವೈಎಸ್‌ಪಿ ಪಾಟೀಲ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಶ್ರೀಮತಿ ಮಮತಾ, ಎಲ್ಲ ತಾಲೂಕುಗಳ ತಹಶೀಲ್ದಾರಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

    ಚಿಲ್ಲರೆ ಮಾರಾಟ ಬಂದ್ ಮಾಡಿ
    ದಸರಾ-ದೀಪಾವಳಿ ಇತರ ವಿಶೇಷ ಸಂದರ್ಭದಲ್ಲಿ ಸಣ್ಣ-ಪುಟ್ಟ ಚಿಲ್ಲರೆ ಅಂಗಡಿಗಳಲ್ಲೂ ಪಟಾಕಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಇದಕ್ಕೆ ಕಡಿವಾಣ ಹಾಕಬೇಕು. ಈ ಕುರಿತಂತೆ ಸ್ಥಳೀಯವಾಗಿ ತಂಡಗಳನ್ನು ರಚಿಸಿಕೊಂಡು ಪ್ರತಿ ಅಂಗಡಿಗಳ ತಪಾಸಣೆ ನಡೆಸಬೇಕು. ಭವಿಷ್ಯದಲ್ಲಿ ಪಟಾಕಿ ಅವಘಡ ಸಂಭವಿಸದಂತೆ ಗರಿಷ್ಠ ಎಚ್ಚರಿಕೆ ವಹಿಸಿ ಎಂದು ಡಿಸಿ ಸೂಚಿಸಿದರು.
    ಸಿಲಿಂಡರ್ ರೀಫಿಲ್ಲಿಂಗ್ ತಡೆಯಿರಿ
    ಪಟಾಕಿ ಮಾತ್ರವಲ್ಲದೇ ಅನಧೀಕೃತವಾಗಿ ಸಿಲಿಂಡರ್‌ಗಳನ್ನು ರೀಫಿಲ್ಲಿಂಗ್ ಮಾಡುವ ಚಟುವಟಿಕೆಗಳು, ಜನ್ಮದಿನಗಳಲ್ಲಿ ಹಚ್ಚುವ ಸ್ಪಾರ್ಕಲ್ಸ್ ಒಳಗೊಂಡಂತೆ ಕಲ್ಲು ಕ್ವಾರಿಗಳಲ್ಲಿ ಬಳಕೆ ಮಾಡುವ ಜಿಲೆಟಿನ್ ದಾಸ್ತಾನು ಬಳಕೆ ಪರವಾನಗಿ, ಸುರಕ್ಷತಾ ಕ್ರಮಗಳ ಕುರಿತಂತೆ ತಪಾಸಣೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.
    ಅಧಿಕಾರಿಗಳೇ ಹೊಣೆ
    ನಿಯೋಜಿತ ಅಧಿಕಾರಿಗಳ ತಂಡ ಖುದ್ದಾಗಿ ಪರಿಶೀಲನೆ ನಡೆಸಬೇಕು. ವರದಿಯ ನಂತರವೂ ವ್ಯತಿರಿಕ್ತವಾಗಿ ಪಟಾಕಿ, ರಾಸಾಯನಿಕ ಅಗ್ನಿ ಅವಘಡಗಳು ಸಂಭವಿಸಿದರೆ ಆಯಾ ವ್ಯಾಪ್ತಿಯ ತಹಶೀಲ್ದಾರ್, ಪೊಲೀಸ್, ಆರ್.ಡಿ.ಪಿ.ಆರ್, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪರಿಸರ, ಅಗ್ನಿಶಾಮಕ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಡಿಸಿ ರಘುನಂದನ ಮೂರ್ತಿ ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts