More

    ಪೌಷ್ಠಿಕಾಂಶಗಳ ಆಗರ ಸಿರಿಧಾನ್ಯ; ಸಿರಿಧಾನ್ಯಗಳ ನಡಿಗೆ ಸುಸ್ಥಿರ ಕೃಷಿಯ ಕಡೆಗೆ ಜಾಥಾದಲ್ಲಿ ಡಿಸಿ ಹೇಳಿಕೆ

    ಹಾವೇರಿ: ಅಕ್ಕಿ, ಗೋಧಿ ತಿನ್ನುವ ಬದಲಿಗೆ ಪೋಶಕಾಂಶಗಳ ಗಣಿಗಳೇ ಆಗಿರುವ ಸಿರಿಧಾನ್ಯಗಳ ಸೇವನೆ ಆರೋಗ್ಯಕ್ಕಾಗಿ ಉತ್ತಮವಾಗಿದೆ. ಸಿರಿಧಾನ್ಯಗಳಲ್ಲಿ ಪೌಷ್ಠಿಕಾಂಶಗಳ ಸಿರಿ ಹೆಚ್ಚಾಗಿರುವುದರಿಂದ ಸಿರಿಧಾನ್ಯಗಳು ಎಲ್ಲರಿಗೂ ಅಚ್ಚುಮೆಚ್ಚಾಗಿವೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಹೇಳಿದರು. ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಬುಧವಾರ ‘ಜಿಲ್ಲಾಮಟ್ಟದ ಸಿರಿಧಾನ್ಯಗಳ ನಡಿಗೆ ಸುಸ್ಥಿರ ಕೃಷಿಯ ಕಡೆಗೆ’ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಸಿರಿಧಾನ್ಯಗಳು ಬಡವರು ಮತ್ತು ಹಳ್ಳಿ ಜನರಿಗೆ ಮಾತ್ರ ಎಂಬ ಮಾತು ಈಗ ಬದಲಾಗಿದೆ. ಗ್ರಾಮೀಣ ಪ್ರದೇಶದ ಜನರಿಗಿಂತ ಹೆಚ್ಚಾಗಿ ನಗರವಾಸಿಗಳು ಸಿರಿಧಾನ್ಯಗಳನ್ನು ಹೆಚ್ಚಾಗಿ ಬಳಸಬೇಕು ಎಂದು ಸಲಹೆ ನೀಡಿದರು.
    ಸಿರಿಧಾನ್ಯಗಳಲ್ಲಿ ನಾರು, ಕಬ್ಬಿಣದ ಅಂಶಗಳು ಹಾಗೂ ಕಾರ್ಬೋಹೈಡ್ರೇಟ್‌ಗಳು ಹೆಚ್ಚಾಗಿವೆ. ಜತೆಗೆ ಇವುಗಳಲ್ಲಿ ಶಕ್ತಿಶಾಲಿ ಆ್ಯಂಟಿ ಆಕ್ಸಿಡೆಂಟ್‌ಗಳು ಮತ್ತು ರೋಗ ನಿರೋಧಕ ಶಕ್ತಿ ಇರುವುದರಿಂದ ಪೌಷ್ಠಿಕತೆಯ ಖಣಜಗಳೇ ಆಗಿವೆ. ಅಕ್ಕಿ, ಗೋಧಿಗಿಂತ ಐದು ಪಟ್ಟು ಪ್ರೋಟಿನ್, ವಿಟಮಿನ್, ನಾರಿನಾಂಶ ಹಾಗೂ ಖನಿಜಗಳನ್ನು ಹೊಂದಿವೆ ಎಂದರು.
    ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ ಮಾತನಾಡಿ, ರಾಸಾಯನಿಕ ಗೊಬ್ಬರ ಇಲ್ಲದೇ ಬೆಳೆಯುವ ಬೆಳೆ ಅಂದರೆ ಅವು ಸಿರಿಧಾನ್ಯಗಳು. ಹೀಗಾಗಿ ಮನೆಗಳಲ್ಲಿ ಹೆಚ್ಚಾಗಿ ಸಿರಿಧಾನ್ಯಗಳನ್ನು ಉಪಯೋಗಿಸಿಬೇಕು. ಮಹಿಳೆಯರು ಇದನ್ನು ಅರಿತುಕೊಂಡರೆ ಇಡೀ ಕುಟುಂಬದವರ ಆರೋಗ್ಯ ಸುಧಾರಣೆ ಆಗಲಿದೆ. ಆರೋಗ್ಯವಂತರಾಗಿ ಬಾಳೋಣ. ಆಸ್ಪತ್ರೆಗೆ ಹೋಗುವುದನ್ನು ಕಡಿಮೆ ಮಾಡೋಣ ಎಂದರು.
    ರಾಸಾಯನಿಕಯುಕ್ತ ಆಹಾರ ಸೇವಿಸಿ ಈಗ ಮನುಷ್ಯ ರೋಗಗಳ ಗೂಡಾಗಿದ್ದಾನೆ. ಸಿರಿಧಾನ್ಯಗಳನ್ನು ಉಪಯೋಗಿಸುವುದರಿಂದ ಬಿಪಿ, ಶುಗರ್ ಬರಲ್ಲ, ಬಿಪಿ, ಶುಗರ್ ಬಂದ್ರೆ ತಂತಿ ಮೇಲಿನ ನಡಿಗೆ ಇದ್ದಂತೆ. ಸಾಮಾಜಿಕ, ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆರೋಗ್ಯ ಹಾಳು ಮಾಡಿಕೊಂಡು ಏನೇ ಸಾಧನೆ ಮಾಡಿದರೂ ಅದು ಶೂನ್ಯ. ಹೀಗಾಗಿ, ಎಲ್ಲರೂ ಆರೋಗ್ಯದ ಕಡೆ ಗಮನ ಕೊಟ್ಟು ರೋಗಗಳು ಬಾರದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ನಗರದ ಪ್ರವಾಸಿ ಮಂದಿರದಿಂದ ಹೊರಟ ಸಿರಿಧಾನ್ಯಗಳ ಜಾಥಾ ಹೊಸಮನಿ ಸಿದ್ದಪ್ಪ ವೃತ್ತ ಮಾರ್ಗವಾಗಿ ಗಾಂಧಿ ವೃತ್ತದ ಮುಖಾಂತರ ಜಿಲ್ಲಾ ಗುರುಭವನದವರೆಗೂ ಜರುಗಿತು.
    ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲಕೃಷ್ಣ, ಕೃಷಿ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಕೃಷಿಕ ಸಮಾಜದ ಸದಸ್ಯರು ಮತ್ತು ಕೃಷಿ ಪರಿಕರ ಮಾರಾಟಗಾರರು ಭಾಗವಹಿಸಿದ್ದರು.
    ಉಪ ಕೃಷಿ ನಿರ್ದೇಶಕ ಹುಲಿರಾಜ ಸ್ವಾಗತಿಸಿದರು. ಉಪ ಕೃಷಿ ನಿರ್ದೇಶಕ ಕರಿಯಲ್ಲಪ್ಪ ಕೊರಚರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts