More

    ಆಕರ್ಷಕ ಜಾಹೀರಾತಿಗೆ ಮೋಸ ಹೋಗಬೇಡಿ; ಆನ್‌ಲೈನ್ ವಂಚನೆಗೂ ಆಯೋಗದಿಂದ ಪರಿಹಾರ ಸಿಗುತ್ತದೆ; ನ್ಯಾಯಾಧೀಶ ಪುಟ್ಟರಾಜು

    ಹಾವೇರಿ: ಆಕರ್ಷಕ ಜಾಹೀರಾತಿಗೆ ಮರುಳಾಗಿ ಖರೀದಿಯಲ್ಲಿ ಮೋಸ ಹೋಗಬಾರದು. ಆನ್‌ಲೈನ್ ಖರೀದಿ ಅಥವಾ ನೇರ ಖರೀದಿಯ ಸಂದರ್ಭದಲ್ಲಿ ಸೇವಾ ನ್ಯೂನ್ಯತೆ ಅಥವಾ ಮೋಸ ಉಂಟಾದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಟ್ಟರಾಜು ಹೇಳಿದರು.
    ತಾಲೂಕಿನ ದೇವಗಿರಿ ಸರ್ಕಾರಿ ಇಂಜನಿಯರಿಂಗ್ ಕಾಲೇಜಿನಲ್ಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಮತ್ತಿತರ ಸಂಘಗಳ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಖರೀದಿ ಮಾಡಿದರೂ ಕಡ್ಡಾಯವಾಗಿ ರಶೀದಿ ಪಡೆಯಬೇಕು. ಖರೀದಿಸಿದ ವಸ್ತು ಅಥವಾ ಸೇವೆಯಲ್ಲಿ ಲೋಪ ಕಂಡುಬಂದಲ್ಲಿ ಅಥವಾ ಮೋಸ ಉಂಟಾದಲ್ಲಿ ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದೂರು ಸಲ್ಲಿದಾಗ ನ್ಯಾಯ ಪಡೆಯಬಹುದು ಎಂದರು.
    ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಈಶ್ವರಪ್ಪ ಬಿ.ಎಸ್. ಮಾತನಾಡಿ, ಒಂದು ವಸ್ತು ಅಥವಾ ಸೇವೆಯನ್ನು ಹಣ ಕೊಟ್ಟು ಪಡೆಯುವ ಪ್ರತಿಯೊಬ್ಬರೂ ಗ್ರಾಹಕರಾಗಿರುತ್ತಾರೆ. ವಸ್ತುಗಳನ್ನು ಖರೀದಿಸುವಾಗ ಆತುರ ಮಾಡದೇ ಯೋಚನೆ ಮಾಡಿ ಖರೀದಿಸಿ, ಐಎಸ್‌ಐ ಮಾರ್ಕಿನ ವಸ್ತುಗಳನ್ನು ಖರೀದಿಸಬೇಕು. ಹಾಲ್ ಮಾರ್ಕ್ ಇರುವ ಚಿನ್ನವನ್ನು ಖರೀದಿಸಬೇಕು ಎಂದು ಸಲಹೆ ನೀಡಿದರು.
    ಸರ್ಕಾರಿ ಇಂಜನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಜಗದೀಶ ಕೋರಿ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಚ್.ಜತ್ತಿ ಮಾತನಾಡಿದರು.
    ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಉಮಾದೇವಿ ಹಿರೇಮಠ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಎಚ್.ಮಜೀದ್ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಡಿ.ಆರ್.ಚೌಗಲಾ ಉಪಸ್ಥಿತರಿದ್ದರು.
    ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಎಂ.ಎಸ್.ರಮೇಶ ಪ್ರಾಸ್ತಾವಿಕವಾಗಿ ಮಾತನಾಡಿದರು.
    2.30 ಕೋಟಿ ಪರಿಹಾರ
    ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಸಕ್ತ ಸಾಲಿನಲ್ಲಿ ಈವರೆಗೆ 160 ಪ್ರಕರಣಗಳು ದಾಖಲಾಗಿದ್ದು, 140 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಕಳೆದ ಎರಡು ವರ್ಷದಲ್ಲಿ 2.30 ಕೋಟಿಗೂ ಅಧಿಕ ಪರಿಹಾರ ಮೊತ್ತವನ್ನು ಗ್ರಾಹಕರಿಗೆ ಕೊಡಿಸಲಾಗಿದೆ ಎಂದು ನ್ಯಾಯಾಧೀಶ ಪುಟ್ಟರಾಜು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts