More

    ನೌಕರರ ಸಮಸ್ಯೆಗಳ ಚರ್ಚೆಗೆ ಸದಾಸಿದ್ಧ; ಜಿಲ್ಲಾಧಿಕಾರಿ ರಘುನಂದನ

    ಹಾವೇರಿ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ನೌಕರರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸುವ ನಿಟ್ಟಿನಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ನಿಯಮಿತವಾಗಿ ಸಭೆ ಆಯೋಜಿಸಬೇಕು. ತುರ್ತಾಗಿ ಗಮನಸೆಳೆಯಬೇಕಾದ ನೌಕರರ ಸಮಸ್ಯೆಗಳ ಚರ್ಚೆಗೆ ಯಾವುದೇ ಸಂದರ್ಭದಲ್ಲಿ ಬಂದು ನನ್ನೊಂದಿಗೆ ಮುಕ್ತವಾಗಿ ಚರ್ಚಿಸಿ ಎಂದು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸಲಹೆ ನೀಡಿದರು.
    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಅಧಿಕಾರಿಗಳೊಂದಿಗೆ ಜಂಟಿ ಸಮಾಲೋಚನೆ ಸಭೆ ನಡೆಸಿದ ಅವರು, ನೌಕರರ ಸಂಘದ ಅಧ್ಯಕ್ಷ ಅಮೃತಗೌಡ ಪಾಟೀಲ ಅವರು ಸಲ್ಲಿಸಿದ 16 ಅಂಶದ ವಿಷಯಗಳ ಕುರಿತಂತೆ ಚರ್ಚಿಸಿದರು.
    ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಯಾವುದೇ ನೌಕರ ಒತ್ತಡ ರಹಿತವಾಗಿ ಕೆಲಸಮಾಡಬೇಕು. ಕೆಲಸಮಾಡುವ ಸ್ಥಳದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಬೇಕು. ಕೆಲಸದ ಒತ್ತಡದಿಂದ ರಿಲ್ಯಾಕ್ಸ್ ಆಗಲು ಮೆಡಿಟೇಷನ್, ಆರೋಗ್ಯ ತಪಾಸಣೆ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ನೌಕರರ ಸಂಘದಿಂದ ಆಯೋಜಿಸಿ ಕುಟುಂಬ ಸಹಿತ ಪಾಲ್ಗೊಳ್ಳುವ ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದರು.
    ಪ್ರಧಾನ ಮಂತ್ರಿ ಜೀವ ವಿಮಾ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆಯಡಿ ಈವರೆಗೂ ಯೋಜನೆಯನ್ನು ಅನುಷ್ಠಾನಗೊಳಿಸದೇ ಇರುವ ಇಲಾಖೆಗಳು ಕಡ್ಡಾಯವಾಗಿ ನೌಕರರು ಹಾಗೂ ಹೊರಗುತ್ತಿಗೆ ನೌಕರರಿಗೆ ವಿಮೆ ಮಾಡಿಸುವಂತೆ ಬಟವಾಡೆ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ತಿಳಿಸಿದರು.
    ಜಿಲ್ಲಾ ಕೇಂದ್ರದಲ್ಲಿ ಅಧಿಕಾರಿಗಳಿಗೆ ವಸತಿ ಸಮಸ್ಯೆ ಕುರಿತಂತೆ ಚರ್ಚಿಸಿದ ಅವರು, ಲೋಕೋಪಯೋಗಿ ಇಲಾಖೆಯ ವಸತಿಗೃಹಗಳ ಸ್ಥಿತಿಗತಿ ಹಾಗೂ ದುರಸ್ತಿಯ ವಿವರ ಹಾಗೂ ಹೊಸ ವಸತಿ ಗೃಹ ನಿರ್ಮಾಣ ಕುರಿತಂತೆ ಪ್ರಸ್ತಾವನೆ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರಿಗೆ ನಿರ್ದೇಶನ ನೀಡಿದರು.
    ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲೆ ನಡೆಯುವ ಹಲ್ಲೆ, ಒತ್ತಡಗಳನ್ನು ಕಡಿಮೆಗೊಳಿಸುವಂತೆ ನೌಕರರ ಸಂಘದ ಬೇಡಿಕೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಇಂತಹ ಯಾವುದಾದರೂ ನಿರ್ಧಿಷ್ಟ ಪ್ರಕರಣಗಳನ್ನು ನನ್ನ ಗಮನಕ್ಕೆ ತಂದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
    ಗ್ರಾಮ ಆಡಳಿತ ಅಧಿಕಾರಿ ಹಾಗೂ ಕಂದಾಯ ಇಲಾಖೆಯ ನೌಕರರು ರಜೆ ದಿನಗಳಲ್ಲಿ ಕರ್ತವ್ಯ ನಿರ್ವಹಣೆ, ನೌಕರರ ಸಂಘಕ್ಕೆ ನಿವೇಶನ ಮಂಜೂರು, ತಹಶೀಲ್ದಾರ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳಿಗೆ ವಸತಿ ಗೃಹ ನಿರ್ಮಾಣ, ನೌಕರರ ಸಂಘಕ್ಕೆ ನಿವೇಶನ ಮಂಜೂರಾತಿ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
    ನೌಕರರಿಗೆ ಮೂಲ ಸೌಲಭ್ಯ…
    ಜಿಲ್ಲಾ ಆಡಳಿತ ಭವನದ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆ ಅಧಿಕಾರಿ, ನೌಕರರಿಗೆ ಕರ್ತವ್ಯದ ಅವಧಿಯಲ್ಲಿ ಆರೋಗ್ಯ, ಶುಚಿತ್ವ, ಸಾರಿಗೆ ಸೌಕರ್ಯಗಳ ಗುಣಮಟ್ಟದ ಸುಧಾರಣೆಗೆ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಬೆಳಗ್ಗೆ ಹಾಗೂ ಸಂಜೆ ನೌಕರರ ಪ್ರಯಾಣಕ್ಕೆ ಅನುಕೂಲವಾಗುವಂತೆ ಸಾರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ತಕ್ಷಣವೇ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡುವುದಾಗಿ ತಿಳಿಸಿದರು.
    ಜಿಲ್ಲಾಡಳಿತ ಭವನದಲ್ಲಿರುವ ಉಪಹಾರ ಮಂದಿರದಲ್ಲಿ ಆಹಾರದ ಗುಣಮಟ್ಟ ಹಾಗೂ ಶುಚಿತ್ವ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕ್ಯಾಂಟಿನ್ ಮಾಲೀಕನನ್ನು ಸಭೆಗೆ ಕರೆಸಿ ನಿರ್ದೇಶನ ನೀಡಿದರು. ಒಂದು ತಿಂಗಳ ಗಡುವು ನೀಡಿ, ಗುಣಮಟ್ಟದ ಸುಧಾರಿಸದಿದ್ದರೆ ಟೆಂಡರ್ ರದ್ದುಪಡಿಸುವುದಾಗಿ ಎಚ್ಚರಿಸಿದರು. ಆಹಾರ ಗುಣಮಟ್ಟ ಕುರಿತಂತೆ ಪರಿಶೀಲನೆಗೆ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು ನಿರ್ದೇಶನ ನೀಡಿದರು.
    ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಗೋಪಾಲ, ಉಪವಿಭಾಗಾಧಿಕಾರಿ ಚೆನ್ನಪ್ಪ, ನೌಕರರ ಸಂಘದ ಜಿಲ್ಲಾಧ್ಯಕ್ಷ ಅಮೃತಗೌಡ ಪಾಟೀಲ, ಜಿಲ್ಲಾ ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾಧಿಕಾರಿ ಮಮತಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts