More

    ವಿದ್ಯಾರ್ಥಿಗಳಿಗಾಗಿ ವಿಶೇಷ ತರಬೇತಿ ನೀಡುವ ಶಿಕ್ಷಕ; ಚಿಕ್ಕಲಿಂಗದಹಳ್ಳಿ ಸರ್ಕಾರಿ ಶಾಲೆಯಲ್ಲೊಬ್ಬರು ಮಾದರಿ ಟೀಚರ್

    ಹಾವೇರಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಪಣತೊಟ್ಟಿರುವ ಸರ್ಕಾರಿ ಪ್ರೌಢಶಾಲೆಯೊಂದರ ಶಿಕ್ಷಕರೊಬ್ಬರು ವಿದ್ಯಾರ್ಥಿಗಳಿಗಾಗಿ ವಿಶೇಷ ತರಗತಿ ಹಾಗೂ ರಾತ್ರಿ ಬಿಸಿಯೂಟ ವ್ಯವಸ್ಥೆ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
    ತಾಲೂಕಿನ ಚಿಕ್ಕಲಿಂಗದಹಳ್ಳಿಯ ಶ್ರೀ ಬಸವೇಶ್ವರ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಪ್ರಭಾಕರ ರಿತ್ತಿ ಅವರು ವಿಶೇಷ ಮುತುವರ್ಜಿ ವಹಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಅಗತ್ಯ ತರಬೇತಿ ನೀಡುತ್ತಿದ್ದಾರೆ.
    ಕಳೆದ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ವಿಶೇಷ ಅಂಕ ಪಡೆದಿದ್ದರು. ಈ ಬಾರಿ ಅದಕ್ಕೂ ಉತ್ತಮವಾದ ಫಲಿತಾಂಶವನ್ನು ಪಡೆಯುವ ಕುರಿತು ಕಳೆದ ಹತ್ತು ದಿನಗಳಿಂದ ವಿಶೇಷ ತರಬೇತಿಯನ್ನು ಆರಂಭಿಸಿದ್ದಾರೆ.
    ಚಿಕ್ಕಲಿಂಗದಹಳ್ಳಿ ಸೇರಿದಂತೆ ಕೋಡಿಹಳ್ಳಿ, ಕನಕಾಪುರ, ಚಿಕ್ಕಲಿಂಗದಹಳ್ಳಿ, ಕಲ್ಲಾಪುರ, ಸುತ್ತಮುತ್ತಲಿನ ಏಳೆಂಟು ಕಿಮೀ. ದೂರದ ಊರಿನಿಂದ ವಿದ್ಯಾರ್ಥಿಗಳು ಬರುತ್ತಾರೆ. ವಿಶೇಷ ತರಗತಿ ಮುಗಿದ ಬಳಿಕ ಪಾಲಕರು ಶಾಲೆಗೆ ಬಂದು ಮಕ್ಕಳನ್ನು ಮನೆಗೆ ಕರೆದೊಯ್ಯುತ್ತಾರೆ.
    ಹೀಗಿದೆ ಟೈಮ್ ಟೇಬಲ್
    ಬೆಳಗ್ಗೆ 8.30ಕ್ಕೆ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುತ್ತಾರೆ. ಬಂದ ಕೂಡಲೇ ಬಿಸಿ ಹಾಲು ವಿತರಿಸಲಾಗುತ್ತದೆ. ಬೆಳಗ್ಗೆ 9.30ರವರೆಗೆ ಒಂದು ವಿಶೇಷ ತರಗತಿ ನಡೆಯುತ್ತದೆ. 10 ನಿಮಿಷ ವಿಶ್ರಾಂತಿ ಬಳಿಕ ಬೆಳಗ್ಗೆ 9.45 ಪ್ರಾರ್ಥನೆ ನಂತರ ಎಂದಿನಂತೆ ತರಗತಿಗಳು ನಡೆಯುತ್ತವೆ.
    ಸಂಜೆ 4.30ಕ್ಕೆ ಶಾಲೆ ಅವಧಿ ಮುಗಿದ ನಂತರ ವಿಶೇಷ ತರಗತಿ ಶುರುವಾಗುತ್ತದೆ. ಇಂಗ್ಲೀಷ್, ಗಣಿತ ಹೀಗೆ ಪ್ರತಿದಿನ ಒಂದೊಂದು ವಿಷಯದ ಮೇಲೆ ತರಗತಿ ನಡೆಯುತ್ತದೆ. ತರಗತಿ ಬಳಿಕ ಪ್ರಶ್ನೋತ್ತರ ಬಿಡಿಸುವ ಟೆಸ್ಟ್ ನಡೆಯುತ್ತದೆ. ಸಂಜೆ 6.30ಕ್ಕೆ ಪ್ರಭಾಕರ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಬಿಸಿಯೂಟ ವಿತರಿಸುತ್ತಾರೆ. ಅನ್ನ, ಸಾಂಬಾರು, ಪಲಾವ್, ಚಿತ್ರಾನ್ನ, ಹೀಗೆ ಪ್ರತಿದಿನ ಒಂದು ತಯಾರಿಸುತ್ತಾರೆ.

    ಕೋಟ್:
    ವಿದ್ಯಾರ್ಥಿಗಳಿಗೆ ಏನಾದರೂ ವಿಶೇಷ ಸೇವೆ ಮಾಡಬೇಕು ಎಂದು ಯೋಚಿಸಿದಾಗ ಅವರಿಗೆ ಅಗತ್ಯವಿದ್ದ ಈ ವಿಶೇಷ ತರಬೇತಿ ಆರಂಭಿಸಿದ್ದೇನೆ. ಇದಕ್ಕೆ ಶಾಲೆಯ ಮುಖ್ಯೋಪಾಧ್ಯಾಯರಾದ ಡಿ.ಎಚ್.ಹೆಬ್ಬಾಳ, ಸಹ ಶಿಕ್ಷಕರಾದ ಪಂಚಾಕ್ಷರಿ ಮೂರಮಟ್ಟಿ, ರವೀಂದ್ರ ಮಳಗಿ, ಡಾ.ಸೀತಾ ಕಡಕೋಳ, ಪುಷ್ಪಾ ಬಗಾಡೆ, ಶಕುಂತಲಾ ಪೂಜಾರ, ಎಸ್‌ಡಿಎಂಸಿ, ಶಿಕ್ಷಣ ಇಲಾಖೆ ಹಾಗೂ ಎಲ್ಲ ಸಿಬ್ಬಂದಿ ಸಹಕರಿಸುತ್ತಿದ್ದಾರೆ.
    ಪ್ರಭಾಕರ ರಿತ್ತಿ, ಶಿಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts