More

    ಅಸಮಾಧಾನ ಇದ್ದರೆ ಬಹಿರಂಗ ಹೇಳಿಕೆ ಸಲ್ಲದು; ಕೇಂದ್ರ ಸಚಿವ ಪ್ರಲ್ಹಾದ ಜೋಶಿ

    ಹಾವೇರಿ: ಬಿಜೆಪಿ ರಾಜ್ಯ ಪದಾಧಿಕಾರಿಗಳ ಆಯ್ಕೆ ವಿಚಾರದಲ್ಲಿ ದುಃಖ, ದುಮ್ಮಾನಗಳಿದ್ದರೆ ರಾಷ್ಟ್ರೀಯ ಅಧ್ಯಕ್ಷರ ಜತೆಗೆ ಮಾತನಾಡಬೇಕು. ಅದನ್ನು ಬಿಟ್ಟು ಸಾರ್ವಜನಿಕವಾಗಿ ಹೇಳಿಕೆಗಳನ್ನು ಕೊಡಬಾರದು ಎಂದು ಬಹಿರಂಗವಾಗಿ ಅಸಮಾಧಾನ ಹೊರ ಹಾಕುತ್ತಿರುವ ರಾಜ್ಯ ಮುಖಂಡರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿವಿಮಾತು ಹೇಳಿದರು.
    ಬ್ಯಾಡಗಿ ತಾಲೂಕು ತಡಸ ಗ್ರಾಮದಲ್ಲಿ ವಿಕಸಿತ ಭಾರತ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯಾಧ್ಯಕ್ಷ ವಿಜಯೇಂದ್ರ ಆಪ್ತರಿಗೆ ಪದಾಧಿಕಾರಿ ಸ್ಥಾನ ನೀಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿದರು. ಬಿ.ಎಸ್.ಯಡಿಯೂರಪ್ಪ ಅವರಿಗಿಂತ ಮೊದಲು ನಾನು ರಾಜ್ಯಾಧ್ಯಕ್ಷನಾಗಿದ್ದೆ. ನಂಂತರ ಯಡಿಯೂರಪ್ಪನವರು ಅಧ್ಯಕ್ಷರಾದರು. ಅಧ್ಯಕ್ಷರಾದವರಿಗೆ ಒಂದು ಆದ್ಯತೆ ಇರುತ್ತದೆ. ಈ ಬಗ್ಗೆ ಅಸಮಾಧಾನ ಇದ್ದರೆ ಪಕ್ಷದ ವೇದಿಕೆಯಲ್ಲಿ ಹೊರಹಾಕಬೇಕು ಎಂದರು.
    ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಪ್ರಲ್ಹಾದ ಜೋಶಿ ಕಾರಣ ಎಂಬ ಬಿ.ಕೆ.ಹರಿಪ್ರಸಾದ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾರ ಸೋಲಿಗೆ ಯಾರು ಕಾರಣ ಎಂಬುದನ್ನು ನಂತರ ನೋಡೋಣ. ಮೊದಲು ಅವರ ಪರಿಸ್ಥಿತಿ ಏನಾಗಿದೆ ನೋಡಿಕೊಳ್ಳಲಿ. ಆಲ್ ಇಂಡಿಯಾ ಜನರಲ್ ಸೆಕ್ರೆಟರಿ ಆಗಿದ್ದವರು. ನಮ್ಮನ್ನು ಬೈದ ಮಾತ್ರಕ್ಕೆ ನಿಮ್ಮನ್ನು ಸಿದ್ದರಾಮಯ್ಯ ಮಂತ್ರಿ ಮಾಡುವುದಿಲ್ಲ. ಎಂಎಲ್‌ಸಿ ಇರುವುದೇ ದೊಡ್ಡದು. ನನ್ನ ಬೈಯೋದರಿಂದ ನೀವು ಮಂತ್ರಿ ಆಗುವುದಾದರೆ ಇನ್ನೂ ಜಾಸ್ತಿ ಮಾತನಾಡಿ ಎಂದರು.
    2029ಕ್ಕೆ ದೊಡ್ಡ ಬದಲಾವಣೆ
    ಬಿಜೆಪಿಯ ಹಿರಿಯ ನಾಯಕರೇ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತು ಉತ್ತರಿಸಿದ ಅವರು, ಸದ್ಯಕ್ಕೆ ಕಾಂಗ್ರೆಸ್ ಪರಿಸ್ಥಿತಿಯೇ ಗಂಭೀರವಾಗಿದೆ. 136 ಶಾಸಕರಿದ್ದರೂ ಈವರೆಗೆ ನಿಗಮ ಮಂಡಳಿ ತೀರ್ಮಾನವಾಗಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ನಡುವೆ ಭಿನ್ನಾಭಿಪ್ರಾಯವಿದೆ. ಹೀಗಿರುವಾಗ ನಮ್ಮ ಪಕ್ಷದಿಂದ ಯಾರೂ ಹೋಗಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಇನ್ನೂ ಬಲಿಷ್ಠ ಆಗಲಿದೆ. ರಾಜ್ಯದಲ್ಲಿ ಕನಿಷ್ಠ 25 ಸ್ಥಾನ ಗೆಲ್ಲುತ್ತೇವೆ. 2029ಕ್ಕೆ ಬಹುದೊಡ್ಡ ಬದಲಾವಣೆ ಆಗಲಿದೆ. ಹೀಗಾಗಿ, ಯಾರಾದರೂ ಕಾಂಗ್ರೆಸ್‌ಗೆ ಹೋದರೆ ಅವರು ಮೂರ್ಖರಾಗುತ್ತಾರೆ ಎಂದು ಜೋಶಿ ಹೇಳಿದರು.
    ಬೊಮ್ಮಾಯಿ ವಿಚಾರ ಚರ್ಚೆಯಾಗಿಲ್ಲ
    ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ರಾಷ್ಟ್ರ ರಾಜಕಾರಣ ಪ್ರವೇಶ ವಿಚಾರ ಕುರಿತು ಉತ್ತರಿಸಿದ ಜೋಶಿ, ಯಾರು ಯಾವ ಚುನಾವಣೆಗೆ ನಿಲ್ಲಬೇಕು ಎಂಬುದನ್ನು ನಮ್ಮ ರಾಷ್ಟ್ರೀಯ ಅಧ್ಯಕ್ಷರು ತೀರ್ಮಾನಿಸುತ್ತಾರೆ. ಅದರ ಬಗ್ಗೆ ಇನ್ನೂ ಏನೂ ಚರ್ಚೆ ಆಗಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts