More

    ಬೊಮ್ಮಾಯಿ ಕೇಂದ್ರ ಮಂತ್ರಿ ಆಗ್ತಾರೆ; ಜನಪರ ಯೋಜನೆಗಳನ್ನು ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ತರುತ್ತಾರೆ; ಮಹಿಳಾ ಸಮಾವೇಶದಲ್ಲಿ ನಟಿ ತಾರಾ ಭರವಸೆ

    ಹಾವೇರಿ: ಪ್ರಧಾನಿ ನರೇಂದ್ರ ಮೋದಿ ಅವರು ಮಗದೊಮ್ಮೆ ಪ್ರಧಾನಮಂತ್ರಿ ಆಗಬೇಕು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕ್ಷೇತ್ರದಿಂದ ಆಯ್ಕೆಯಾಗಿ ಕೇಂದ್ರದಲ್ಲಿ ಮಂತ್ರಿ ಆಗಿ ಕೇಂದ್ರದ ಯೋಜನೆಗಳನ್ನು ಇಲ್ಲಿಗೆ ತರುತ್ತಾರೆ. ಆದ್ದರಿಂದ ಎಲ್ಲರೂ ಬಿಜೆಪಿಗೆ ಮತ ನೀಡಿ, ಮತ ಹಾಕಿಸಿ ಎಂದು ಬಿಜೆಪಿಯ ಸ್ಟಾರ್ ಪ್ರಚಾರಕಿ, ನಟಿ ತಾರಾ ಅನುರಾಧಾ ಮನವಿ ಮಾಡಿದರು.
    ನಗರದ ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜ್ ಪಕ್ಕದ ಮೈದಾನದಲ್ಲಿ ಗುರುವಾರ ಬಿಜೆಪಿ ವತಿಯಿಂದ ಆಯೋಜಿಸಿದ್ದ ಮಹಿಳಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರದ ಯೋಜನೆಗಳನ್ನು ಮನೆ, ಮನೆಗೆ ಹಾಗೂ ಮಹಿಳೆಯವರಿಗೆ ತಲುಪಿಸುವ ಕೆಲಸವನ್ನು ಬೊಮ್ಮಾಯಿ ಅವರು ಮಾಡುವ ಭರವಸೆ ಇದೆ. ಈ ಚುನಾವಣೆಯಲ್ಲಿ ಬೊಮ್ಮಾಯಿ ಅವರನ್ನು ಗೆಲ್ಲಿಸಿ ಮೋದಿ ಅವರ ಕೈ ಬಲಪಡಿಸಿ ಎಂದು ಕೋರಿದರು.
    ರಾಜ್ಯದಲ್ಲಿ ಮಳೆ ಇಲ್ಲದೇ ಬರ ಬಿದ್ದಿದೆ. ಮಳೆ ಇಲ್ಲ, ನೀರಿಲ್ಲ, ಬರ ಬಿದ್ದಿದೆ ಎನ್ನುತ್ತಿದ್ದೆವು. ನಾವು ಸಮಾವೇಶ ನಡೆಸಿ ಮತಯಾಚಿಸುವ ಸಂದರ್ಭದಲ್ಲೇ ಮೇಘರಾಜ ಮಳೆ ಸುರಿಸುತ್ತಿರುವುದು ಶುಭ ಸೂಚಕ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸಮೃದ್ಧ ಮಳೆ ಬರುತ್ತದೆ ಎಂದರು.
    ಚನ್ನಮ್ಮ ಬೊಮ್ಮಾಯಿ ಮಾತನಾಡಿ, ಮೋದಿ ಎಂದರೆ ಅಭಿವೃದ್ಧಿ, ಅಭಿವೃದ್ಧಿ ಎಂದರೆ ಮೋದಿಯವರು. ಏಲಕ್ಕಿ ಕಂಪನ್ನು ರಾಷ್ಟ್ರ ಮಟ್ಟದಲ್ಲಿ ಹರಡಿಸಲು ಬೊಮ್ಮಾಯಿ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
    ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸೃಷ್ಟಿ ಪಾಟೀಲ ಮಾತನಾಡಿ, ಪ್ರಧಾನಿ ಮೋದಿಯವರು ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಅನೇಕ ಯೋಜನೆ ಕೊಟ್ಟಿದ್ದಾರೆ. ಹೀಗಾಗಿ, ಮಹಿಳೆಯರು ಈಗ ಎಲ್ಲ ಕ್ಷೇತ್ರದಲ್ಲಿ ಮುಂದೆ ಬಂದಿದ್ದಾರೆ ಎಂದರು.
    ಬಿಜೆಪಿ ಮಹಿಳಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಶೋಭಾ ನಿಸ್ಸಿಮಗೌಡ್ರ, ಭಾರತಿ ಜಂಬಗಿ, ಭಾರತಿ ಅಳವಂಡಿ, ಮಂಜುಳಾ ಕರಬಸಮ್ಮನವರ, ಚನ್ನಮ್ಮ ಬ್ಯಾಡಗಿ, ಲಲಿತಾ ಗುಂಡೇನಹಳ್ಳಿ, ಇತರರಿದ್ದರು.
    ಮಳೆರಾಯ ಅಡ್ಡಿ
    ಸಮಾವೇಶ ಆರಂಭವಾದ ಕೆಲವೇ ಸಮಯಕ್ಕೆ ತಾರಾ ಮಾತು ಆರಂಭಿಸುತ್ತಿದ್ದಂತೆ ಮಳೆ ಆಗಮಿಸಿತು. ಪೆಂಡಾಲ್ ಅಳವಡಿಸಿದ್ದರೂ ಮಳೆ ನೀರು ಸೋರತೊಡಗಿತು. ಹಾಗಾಗಿ, ತಾರಾ ಕೇವಲ ಎರಡು ನಿಮಿಷ ಮಾತನಾಡಿ ವೇದಿಕೆಯಿಂದ ನಿರ್ಗಮಿಸಿದರು. ಸಮಾವೇಶಕ್ಕೆ ಆಗಮಿಸಿದ್ದ ಮಹಿಳೆಯರು ಮಳೆಯಲ್ಲಿ ಸಿಲುಕಿ ತಲೆಯ ಮೇಲೆ ಕುರ್ಚಿ ಹೊತ್ತು ನಿಂತರು. ಸುಮಾರು 45 ನಿಮಿಷ ಧಾರಾಕಾರ ಮಳೆ ಸುರಿಯಿತು. ಮಳೆಯಲ್ಲಿ ನೆನೆದುಕೊಂಡೇ ಕೆಲ ಮಹಿಳೆಯರು ಮನೆಯತ್ತ ಹೊರಟಿದ್ದು ಕಂಡು ಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts