More

    ಹಣ, ಹೆಂಡ ಆಯ್ತು ಈಗ ಬೆದರಿಕೆ ತಂತ್ರ; ಕಾಂಗ್ರೆಸ್ ಸುಳ್ಳು ಗ್ಯಾರಂಟಿ ಆಟ ಲೋಕಸಭೆ ಚುನಾವಣೆಯಲ್ಲಿ ನಡೆಯಲ್ಲ; ಬಿ.ವೈ.ವಿಜಯೇಂದ್ರ

    ಹಾವೇರಿ: ಸ್ವಾತಂತ್ರಾೃ ನಂತರ 50, 60 ವರ್ಷಗಳ ಕಾಲ ಜನರಿಗೆ ಹಣ, ಹೆಂಡ ಹಂಚುವ ಮೂಲಕ ದೇಶವನ್ನು ಆಳಿದ ಕಾಂಗ್ರೆಸ್ ಈಗ ಬೆದರಿಕೆ ತಂತ್ರಕ್ಕೆ ಮೊರೆ ಹೋಗಿದೆ. ‘ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲದಿದ್ದರೆ ಐದು ಗ್ಯಾರಂಟಿಗಳನ್ನು ಬಂದ್ ಮಾಡುತ್ತೇವೆ’ ಎನ್ನುವ ಮೂಲಕ ಜನರನ್ನು ಬೆದರಿಸುವ ಹುನ್ನಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗುಡುಗಿದರು. ನಗರದ ಶ್ರೀ ಶಿವಬಸವ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಅವರ ಮೂಲಕ ಸಿಎಂ ಸಿದ್ದರಾಮಯ್ಯನವರು ಗ್ಯಾರಂಟಿ ಬೆದರಿಕೆ ಒಡ್ಡುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ಗ್ಯಾರಂಟಿ ಸುಳ್ಳು ಎಂಬುದು ಸಾಬೀತಾಗಿದೆ. ಗ್ಯಾರಂಟಿ ಯೋಜನೆಗಳಲ್ಲಿ 100 ಜನರಲ್ಲಿ ಐವರಿಗೂ ತಲುಪುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಆಗಿದೆ. ಜನರ ಕಿವಿಗೆ ಹೂವು ಇಡುತ್ತಿದ್ದಾರೆ ಎಂದರು. ಪಂಚರಾಜ್ಯ ಚುನಾವಣೆ ಬಳಿಕ ರಾಜ್ಯದಲ್ಲೂ ಬಿಜೆಪಿಗೆ ಮತ್ತೆ ಶಕ್ತಿ ಬಂದಿದೆ. ಮದ್ಯಪ್ರದೇಶ, ಛತ್ತೀಸಘಡದಲ್ಲೂ ಕಾಂಗ್ರೆಸ್‌ನ ಸುಳ್ಳು ಗ್ಯಾರಂಟಿ ಆಟ ನಡೆದಿಲ್ಲ. ಅಲ್ಲಿನ ಪ್ರಜ್ಞಾವಂತ ಮತದಾರರು ಮೋದಿ ಗ್ಯಾರಂಟಿಗೇ ಶಾಶ್ವತ ಗ್ಯಾರಂಟಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಉಚಿತ ಕರೆಂಟ್ ಎಂದು ಹೇಳಿ ರೈತರಿಗೆ ಎರಡು ತಾಸು ಕರೆಂಟ್ ಕೊಡುತ್ತಿಲ್ಲ. ಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂ. ಘೋಷಿಸುವ ಸಿದ್ದರಾಮಯ್ಯನವರು, ಬರದಿಂದ ನೊಂದ ರೈತರಿಗೆ ಕೇವಲ 2 ಸಾವಿರ ರೂ. ಘೋಷಿಸಿ ಅದನ್ನೂ ಕೊಡುತ್ತಿಲ್ಲ ಎಂದು ಕುಟುಕಿದರು.
    ವಿಧಾನಸಭೆ ಉಪನಾಯಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮಾಜಿ ಸಚಿವರಾದ ಬಿ.ಸಿ.ಪಾಟೀಲ, ಕಳಕಪ್ಪ ಬಂಡಿ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ವಿರುಪಾಕ್ಷಪ್ಪ ಬಳ್ಳಾರಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ, ರಾಜ್ಯ ಉಪಾಧ್ಯಕ್ಷ ಡಾ.ಬಸವರಾಜ ಕೇಲಗಾರ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸೀಮಗೌಡ್ರ, ನೂತನ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಸಿದ್ದರಾಜ ಕಲಕೋಟಿ, ಡಾ.ಫಕ್ಕೀರಗೌಡ ಪಾಟೀಲ, ಕರಬಸಪ್ಪ ಹಂಚಿನಾಳ, ಜಗದೀಶ ಬಸೇಗೆಣ್ಣಿ, ಶರಣಬಸವ ಅಂಗಡಿ, ಇತರರಿದ್ದರು.

    ಸರ್ವಸ್ಪರ್ಶಿ, ಸರ್ವವ್ಯಾಪಿ ಬಜೆಟ್
    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯಾವುದೇ ಚುನಾವಣೆ ಗಿಮಿಕ್ ಮಾಡದೇ ದೇಶದ ಅಭಿವೃದ್ಧಿಯ ಹಿತದೃಷ್ಟಿಯಿಂದ ಬಜೆಟ್ ಮಂಡಿಸಿದ್ದಾರೆ. ದೇಶದ ಒಂದು ಕೊಟಿ ಮನೆಗಳ ಮೇಲೆ ಸೋಲಾರ್ ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸುವ ಯೋಜನೆ ರೂಪಿಸಿದ್ದಾರೆ. ಮಹಿಳಾ ಸ್ವಸಹಾಯ ಗುಂಪುಗಳಿಗಾಗಿ ಉತ್ತಮ ಯೋಜನೆ ಘೋಷಿಸಿದ್ದಾರೆ. ಇದೊಂದು ಸರ್ವಸ್ಪರ್ಶಿ, ಸರ್ವವ್ಯಾಪಿ ಬಜೆಟ್ ಆಗಿದೆ ಎಂದು ಬಿ.ವೈ.ವಿಜಯೇಂದ್ರ ಹೊಗಳಿದರು.


    ಕೋಟ್:
    ದೇಶದ ಅನೇಕ ರಾಜಕಾರಣಿಗಳು ಮುಂದಿನ ಚುನಾವಣೆ ಬಗ್ಗೆ ಯೊಚಿಸಿದರೆ, ಪ್ರಧಾನಿ ನರೇಂದ್ರ ಮೊದಿ ಅವರು ಮುಂದಿನ ಪೀಳಿಗೆ ಬಗ್ಗೆ ಯೋಚಿಸುತ್ತಾರೆ. ಒಂದು ದಿನವೂ ವಿಶ್ರಾಂತಿ ತೆಗೆದುಕೊಳ್ಳದೇ ಕೆಲಸ ಮಾಡುವ ಜಗತ್ತಿನ ಏಕೈಕ ಪ್ರಧಾನಿ ನರೇಂದ್ರ ಮೋದಿ. ರಾಜ್ಯದಲ್ಲಿ 28 ಕ್ಷೇತ್ರಗಳನ್ನು ಗೆಲ್ಲಿಸುವ ಮೂಲಕ ಮೂರನೇ ಬಾರಿಗೆ ಅವರನ್ನು ಪ್ರಧಾನಿ ಮಾಡುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
    ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

    ಕೋಟ್:
    ರಾಜ್ಯ ಸರ್ಕಾರ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿೃಸಿದೆ. ರೈತರ ಪಾಲಿಗೆ ಈ ಸರ್ಕಾರ ಸತ್ತು ಹೋಗಿದೆ. ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ಯಾರೂ ಸಿದ್ಧರಿಲ್ಲ. ಕಾಂಗ್ರೆಸ್ ಗ್ಯಾರಂಟಿ ರಾಜ್ಯ ಸರ್ಕಾರಕ್ಕೆ ತಿರುಗುಬಾಣವಾಗುತ್ತದೆ. ಲೋಕಸಭೆಯಲ್ಲಿ 28 ಸೀಟು ಗೆಲ್ಲಿಸಿ, ಬಳಿಕ ಎರಡು ತಿಂಗಳಲ್ಲಿ ಈ ದರಿದ್ರ ಸರ್ಕಾರ ಬಿದ್ದು ಹೋಗುತ್ತದೆ.
    ಬಸವರಾಜ ಬೊಮ್ಮಾಯಿ, ಶಾಸಕ, ಮಾಜಿ ಮುಖ್ಯಮಂತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts