More

    ವಂಟಮೂರಿ ಘಟನೆಯಿಂದ ಕಾಂಗ್ರೆಸ್ ಸರ್ಕಾರ ಬೆತ್ತಲಾಗಿದೆ; ಮಾಜಿ ಸಚಿವ ಬಿ.ಸಿ.ಪಾಟೀಲ ಆಕ್ರೋಶ

    ಹಾವೇರಿ: ಬೆಳಗಾವಿ ವಂಟಮೂರಿ ಗ್ರಾಮದ ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಪ್ರಕರಣ ಸಮಾಜ ತಲೆ ತಗ್ಗಿಸುವ ಕೆಲಸ. ಮಹಿಳೆಯನ್ನು ಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮಾಯವಾಗಿದೆ. ಪೊಲೀಸ್ ಇಲಾಖೆ ಏನು ಮಾಡುತ್ತಿದೆ. ಈ ಘಟನೆಯಿಂದ ಇಡೀ ಕಾಂಗ್ರೆಸ್ ಸರ್ಕಾರವೇ ಬೆತ್ತಲಾಗಿದೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
    ನಗರದಲ್ಲಿ ಬಿಜೆಪಿ ಪ್ರತಿಭಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರೂಣ ಹತ್ಯೆ ಆದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ಮಹಿಳೆಯರ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಆಗುತ್ತಿವೆ. ಆದರೂ ಈ ಸರ್ಕಾರ ಕಠಿಣ ಕ್ರಮ ಕೈಗೊಂಡಿಲ್ಲ. ಭ್ರಷ್ಟಾಚಾರ ಮಿತಿಮೀರಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು ಹಣ ಮಾಡುವುದರಲ್ಲಿ ಪೈಪೋಟಿಗೆ ಇಳಿದಿದ್ದಾರೆ. ಅಭಿವೃದ್ಧಿ ಶೂನ್ಯವಾಗಿದೆ ಎಂದರು ಆರೋಪಿಸಿದರು.
    ಸಂಸತ್ ಭವನದ ದಾಳಿ ನಡೆದ ಸಂದರ್ಭದಲ್ಲಿ ನಾನು ಅಲ್ಲೇ ಇದ್ದೆ. ನಾನು ಕಲಾಪ ನೋಡಲೆಂದು ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದೆ. ಕಲಾಪ ವೀಕ್ಷಿಸಿದ ಬಳಿಕ ಹೊರಗೆ ಬಂದು ಹತ್ತು ನಿಮಿಷಕ್ಕೆ ಆ ಘಟನೆ ನಡೆದಿದೆ. ಇದು ಒಂದು ಪೂರ್ವ ನಿಯೋಜಿತ ಕೃತ್ಯ. ಅಷ್ಟೊಂದು ಸೆಕ್ಯುರಿಟಿ ಇದ್ದರೂ ಭೇದಿಸಿ ಹೋಗಿರುವ ಹಿಂದೆ ವ್ಯವಸ್ಥಿತ ಸಂಚು ಇದೆ. ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕಿದೆ ಎಂದರು.
    ಸ್ಪ್ರಿಂಕ್ಲರ್ ಬೆಲೆ ದುಪ್ಪಟ್ಟು :
    ನಾನು ಕೃಷಿ ಸಚಿವ ಇದ್ದಾಗ ತುಂತುರು ನೀರಾವರಿಯ ಸ್ಪ್ರಿಂಕ್ಲರ್‌ಗೆ 1,850 ರೂ. ಇತ್ತು. ಇದೀಗ ಸ್ಪ್ರಿಂಕ್ಲರ್ ಬೆಲೆ 4,200 ರೂ.ಗೆ ಏರಿಸಿದ್ದಾರೆ. ಆರು ತಿಂಗಳಲ್ಲಿ ಡಬಲ್ ಮಾಡಿದ್ದಾರೆ. ಇಲ್ಲಿ ಏನೋ ಅವ್ಯವಹಾರ ನಡೆದಿದೆ. ರೈತರ ಮೇಲೆ ಭಾರ ಹಾಕುತ್ತಿದ್ದಾರೆ. ಬರಗಾಲದಿಂದ ತುತ್ತು ಅನ್ನಕ್ಕೂ ಪರದಾಡುತ್ತಿರುವ ರೈತರಿಗೆ ಅಲ್ಪಾವಧಿ, ಮಧ್ಯಮಾವಧಿ ಸಾಲ ಕಟ್ಟಿದರೆ ಬಡ್ಡಿ ಮನ್ನಾ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದರಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ರೈತರ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ, ಬಡ್ಡಿ ಬದಲು ಅಸಲು ಮನ್ನಾ ಮಾಡಬೇಕಿತ್ತು. ರೈತರಿಗೆ ಭಿಕ್ಷೆ ಕೊಟ್ಟ ರೀತಿ ಎಕರೆಗೆ 2,000 ರೂ. ಬರ ಪರಿಹಾರ ಕೊಡುತ್ತೇವೆ ಎಂದಿರುವುದು ಖಂಡನೀಯ ಎಂದರು.
    ದೇಹ ಒಂದು ಕಡೆ ಮನಸು ಒಂದು ಕಡೆ ಬೇಡ :
    ವಿಶ್ವನಾಥ, ಶಿವರಾಮ ಹೆಬ್ಬಾರ ಹಾಗೂ ಎಸ್.ಟಿ.ಸೋಮಶೇಖರ ಕಾಂಗ್ರೆಸ್ ಜತೆ ಗುರುತಿಸಿಕೊಳ್ಳುತ್ತಿರುವ ಕುರಿತು ಪ್ರತಿಕ್ರಯಿಸಿದ ಬಿ.ಸಿ.ಪಾಟೀಲ, ಐದು ಬೆರಳೂ ಒಂದೇ ಸಮ ಇರುವುದಿಲ್ಲ. ಈಗಾಗಲೇ ಬಿಜೆಪಿ ಪಕ್ಷದಿಂದ ಮೂರು ಜನಕ್ಕೆ ನೋಟಿಸ್ ಕೊಡಲಾಗಿದೆ. ಹೇಗೆ ಸಭೆಯಲ್ಲಿ ಭಾಗಿಯಾಗಿದ್ದರು ಎಂಬ ಕುರಿತು ಸ್ಪಷ್ಟನೆ ಕೊಡಲು ಕೇಳಿದ್ದಾರೆ. ದೇಹ ಒಂದು ಕಡೆ ಮನಸು ಒಂದು ಕಡೆ ಸರಿಯಲ್ಲ. ಇದರಿಂದ ಪಕ್ಷಕ್ಕೆ ಮುಜುಗರವಾಗಲಿದೆ. ಇಷ್ಟ ಇದ್ದರೆ ಹೋಗಬೇಕು. ಗಟ್ಟಿ ನಿರ್ಧಾರ ಮಾಡಬೇಕು ಎಂದು ಬಿ.ಸಿ.ಪಾಟೀಲ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts