More

    ಅಂಬಿಗರ ಚೌಡಯ್ಯನವರ ಸ್ಮರಣೋತ್ಸವ 14, 15ರಂದು; ಶರಣ ಸಂಸ್ಕೃತಿ ಉತ್ಸವದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ; ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿಕೆ

    ಹಾವೇರಿ: ತಾಲೂಕಿನ ಕಂಚಾರಗಟ್ಟಿ ಸಮೀಪದ ನರಸೀಪುರದಲ್ಲಿ ಜ.14 ಮತ್ತು 15ರಂದು ನಿಜಶರಣ ಅಂಬಿಗರ ಚೌಡಯ್ಯನವರ 6ನೇ ಶರಣ ಸಂಸ್ಕೃತಿ ಉತ್ಸವ, ವಚನ ಗ್ರಂಥ ಮಹಾರಥೋತ್ಸವ, ಅಂಬಿಗರ ಚೌಡಯ್ಯನವರ 904ನೇ ಜಯಂತ್ಯುತ್ಸವ, ಲಿಂ.ಶಾಂತಮುನಿ ಶ್ರೀಗಳ 8ನೇ ಸ್ಮರಣೋತ್ಸವ ಹಾಗೂ ಪೀಠಾಧ್ಯಕ್ಷರಾದ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಯವರ 8ನೇ ಪೀಠಾರೋಹಣ ವಾರ್ಷಿಕ ಮಹೋತ್ಸವ ಜರುಗಲಿದೆ ಎಂದು ಪೀಠಾಧ್ಯಕ್ಷ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ತಿಳಿಸಿದರು.
    ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.14ರಂದು ಸುಮಂಗಲೆಯರಿಂದ ತೊಟ್ಟಿಲೋತ್ಸವ, ನಿಜಶರಣ ಅಂಬಿಗರ ಚೌಡಯ್ಯನವರ ಗದ್ದುಗೆ ಪೂಜೆ, ಬೆಳಗ್ಗೆ 11ರಿಂದ ಶ್ರೀಗಳ ಸಾನಿಧ್ಯದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಸಂಜೆ 5.30ಕ್ಕೆ ಸಾಂಸ್ಕೃತಿಕ ಮತ್ತು ಜಾನಪದ ಕಲಾ ಮಹೋತ್ಸವ ಜರುಗಲಿದ್ದು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಶಾಸಕ ಪ್ರಕಾಶ ಕೋಳಿವಾಡ ಅಧ್ಯಕ್ಷತೆ ವಹಿಸುವರು. ಸಮಾಜದ ಮುಖಂಡ ಹಾಗೂ ಮೀನುಗಾರಿಕೆ ಸಚಿವ ಮಾಂಕಾಳ ವೈದ್ಯ ನೇತೃತ್ವ ವಹಿಸಲಿದ್ದು, ಮಾಜಿ ಶಾಸಕರು, ಸಚಿವರು, ಮತ್ತಿತರರು ಆಗಮಿಸುವರು.
    ಜ.15ರಂದು ಧರ್ಮ ಧ್ವಜಾರೋಹಣ ಬೆಳಗ್ಗೆ 8ಕ್ಕೆ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮ್ಮಕನೂರ ನೆರವೇರಿಸುವರು. ನಂತರ ಸಾಮೂಹಿಕ ಸರಳ ವಿವಾಹ, ಧರ್ಮ ಸಭೆ, ನಿಜಶರಣ ಅಂಬಿಗರ ಚೌಡಯ್ಯನವರ 6ನೇ ಶರಣ ಸಂಸ್ಕೃತಿ ಉತ್ಸವ, ಅಂಬಿಗರ ಚೌಡಯ್ಯನವರ 904ನೇ ಜಯಂತ್ಯುತ್ಸವ ಜರುಗಲಿದೆ. ಸಾನಿಧ್ಯವನ್ನು ಇಳಕಲ್‌ನ ವಿಜಯಮಹಾಂತೇಶ್ವರ ಮಹಾಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ, ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಮಹಾಸ್ವಾಮಿಗಳು, ವಿವಿದ ಸಮುದಾಯದ ಪ್ರಮುಖ ಶ್ರೀಗಳು ವಹಿಸುವರು.
    6ನೇ ಶರಣ ಸಂಸ್ಕೃತಿ ಉತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಗ್ರಂಥವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬಿಡುಗಡೆ ಮಾಡುವರು. ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಉಪನ್ಯಾಸ ನೀಡುವರು. ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸುವರು. ನಂತರ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ವಚನ ಪಠಣ ಮಾಡುವರು. ಸಚಿವ ಪ್ರಿಯಾಂಕ ಖರ್ಗೆ ದೋಣಿಗೆ ಪುಷ್ಪಾರ್ಚನೆ ಮಾಡುವರು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹಾಗೂ ಸಚಿವ ಶಿವರಾಜ ತಂಗಡಗಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
    ರಾಜ್ಯದಲ್ಲಿ ಸುಮಾರು 39ಲಕ್ಷ ಸಮಾಜ ಬಾಂಧವರು ಇದ್ದಾರೆ. ಸುಮಾರು 39 ಉಪಪಂಗಡಗಳನ್ನು ಸಮಾಜ ಹೊಂದಿದೆ. ಈ ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕರೆದೊಯ್ಯುವಲ್ಲಿ ಶ್ರಮಿಸುತ್ತಿದ್ದೇವೆ. ಇದರಲ್ಲಿ ಅರ್ಧ ಯಶಸ್ಸು ಸಿಕ್ಕಿದೆ. ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡುವ ಕುರಿತು ಸಿಎಂಗೆ ಮತ್ತೊಮ್ಮೆ ಒತ್ತಾಯ ಮಾಡಲಾಗುವುದು ಎಂದರು.
    ಸುದ್ದಿಗೋಷ್ಠಿಯಲ್ಲಿ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಬಸವರಾಜ ಸಪ್ಪನಗೋಳ, ಎಚ್.ಎಂ. ದಂಡಿನ, ಎಸ್.ಎನ್. ಮೆಡ್ಲೇರಿ, ವಕೀಲ ಪ್ರವೀಣ ವಡ್ನಿಕೊಪ್ಪ, ಶಂಕರ ಸುತಾರ, ಮಂಜುನಾಥ ಭೋವಿ, ಶಿವಣ್ಣ ಕಬ್ಬೇರ, ನಾಗಣ್ಣ ಶೇಷಗಿರಿ, ಮಾರುತಿ ಕಬ್ಬೇರ, ಬಸವರಾಜ ಕಳಸೂರ, ಕರಬಸಪ್ಪ ಹಳದೂರ, ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts