More

    ವರುಣಾ ಕ್ಷೇತ್ರವನ್ನು ಹೊರಗುತ್ತಿಗೆ ಕೊಟ್ಟಿದ್ದೀರಾ? ಉತ್ತರ ಕೊಡಿ ಸಿಎಂ; ಎಚ್​ಡಿಕೆ ಸವಾಲು

    ಬೆಂಗಳೂರು: ವರುಣಾ ಕ್ಷೇತ್ರವನ್ನು ನಿಮ್ಮ ಮಗನಿಗೆ ಹೊರಗುತ್ತಿಗೆ ಕೊಟ್ಟಿದ್ದೀರಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನೀವು ಮತ್ತು ನಿಮ್ಮ ಮಗ ಫೋನ್ ನಲ್ಲಿ ಮಾತನಾಡಿದ್ದು ವರ್ಗಾವಣೆ ದಂಧೆಯ ಬಗ್ಗೆ ಎಂಬುದು ಸತ್ಯ ಎಂದು ಆರೋಪಿಸಿದ್ದಾರೆ.
    ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿಗಳ ಕರ್ತವ್ಯ ಹಂಚಿಕೆ ಪಟ್ಟಿಯನ್ನು ಬಹಿರಂಗಪಡಿಸಿರುವ ಅವರು, ವಿಡಿಯೋದಲ್ಲಿ ನಿಮ್ಮ ಮಗ ಡಾ.ಯತೀಂದ್ರ ಮಾತನಾಡಿದ ಆರ್.ಮಹದೇವು ಅವರಿಗೂ ವರುಣಾ ಕ್ಷೇತ್ರ, ಶಿಕ್ಷಣ ಇಲಾಖೆ ಹಾಗೂ ಸಿಎಸ್ ಬಗ್ಗೆ ಅವರಿಗೆ ಸಂಬಂಧ ಇಲ್ಲ ಎಂದು ಕುಟುಕಿದ್ದಾರೆ.
    ಸನ್ಮಾನ್ಯ ಮುಖ್ಯಮಂತ್ರಿಗಳೇ, ವಿಡಿಯೋ ವಿಷಯ ವಿಷಯಾಂತರ ಮಾಡಬೇಡಿ. ನಾನು ಕೇಳಿದ್ದೇನು? ನೀವು ಹೇಳುತ್ತಿರುವುದೇನು? ತಿರುಚುವ, ವಕ್ರೀಕರಿಸುವ ಚಾಳಿ ಬಿಡಿ. ನೀವು ಈ ರಾಜ್ಯದ ಆರೂವರೆ ಕೋಟಿ ಕನ್ನಡಿಗರ ಪ್ರತಿನಿಧಿ ಮತ್ತು ಉತ್ತರದಾಯಿ. ಉತ್ತರ ಕೊಡಿ ಸಿದ್ದರಾಮಯ್ಯನವರೇ? ಎಂದಿದ್ದಾರೆ.
    ಒಂದು ವಿಡಿಯೋ ಬಗ್ಗೆ ಪ್ರಶ್ನಿಸಿದ್ದಕ್ಕೆ ನಿಮಗೆ, ನಿಮ್ಮ ಸಂಪುಟಕ್ಕೆ ನಿದ್ದೆಯೇ ಹಾರಿ ಹೋಗಿದೆ. ಕೆಲಸ ಬಿಟ್ಟು ನಿಮಗೆ ಸುವ್ವಿಸುವ್ವಾಲೆ ಹಾಡುತ್ತಿದೆ. ಅವರು ಸಚಿವರೋ, ನಿಮ್ಮ ಗಸ್ತಿಗೆ ನಿಂತ ಬೌನ್ಸರುಗಳೋ?? ಸಚಿವರನ್ನು ಗುಂಪು ಗುಂಪಾಗಿ ಛೂ ಬಿಟ್ಟರೆ ಕುಮಾರಸ್ವಾಮಿ ಹೆದರಿ ಓಡುತ್ತಾರೆಂದು ಭಾವಿಸಿದರೆ ಅದು ನಿಮ್ಮ ಪೆದ್ದುತನವಷ್ಟೇ ಎಂದು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
    ನಿಮ್ಮ ಪುತ್ರ ಮಹಾಶಯರನ್ನು ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ, ಅವರ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆಸಲು ಹಾಗೂ ಅಧಿಕಾರಿಗಳ ಸಭೆ ನಡೆಸಿ ದರ್ಬಾರ್‌ ಮಾಡಲು ಅನುವು ಮಾಡಿಕೊಟ್ಟಿದ್ದೀರಿ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯಾ? ಇದ್ದರೆ ತಿಳಿಸಿ ಎಂದು ಪ್ರಶ್ನೆ ಮಾಡಿದ್ದಾರೆ.
    ನಿಮ್ಮ ಸಚಿವಾಲಯದ ಅಧಿಕಾರಿಗಳ ಕರ್ತವ್ಯ ಹಂಚಿಕೆ ಪಟ್ಟಿ ಪ್ರಕಾರ; ವಿಶೇಷ ಕರ್ತವ್ಯಾಧಿಕಾರಿ ಆರ್.‌ಮಹದೇವುಗೆ ಶಿಕ್ಷಣ ಇಲಾಖೆ ಹೊಣೆ ಇಲ್ಲ. ಜಂಟಿ ಕಾರ್ಯದರ್ಶಿ ಎಂ.ರಾಮಯ್ಯಗೆ ಆ ಹೊಣೆ ಇದೆ. ವರುಣಾ ಹೊಣೆ ಇನ್ನೊಬ್ಬ ವಿಶೇಷ ಕರ್ತವ್ಯಾಧಿಕಾರಿ ಕೆ.ಎನ್.‌ವಿಜಯ್‌ ರದ್ದು. ಇದು ಸತ್ಯಸ್ಥಿತಿ. ಅಪರ ಸತ್ಯಹರಿಶ್ಚಂದ್ರರಾದ ನೀವೇ ಸುಳ್ಳು ಹೇಳೋದೇ? ಎಂದು ಸಿಎಂಗೆ ಕೇಳಿರುವ ಅವರು, ಯತೀಂದ್ರರು ಶಿಕ್ಷಣದ ಕುರಿತು ಎಂ.ರಾಮಯ್ಯ ಜತೆ, ವರುಣಾ ಬಗ್ಗೆ ಕೆ.ಎನ್.ವಿಜಯ್‌ ಜತೆ ಚರ್ಚಿಸದೆ, ಇವೆರಡಕ್ಕೂ ಸಂಬಂಧವಿಲ್ಲದವೇ ‘ಸಿಆಸು’ ಸಚಿವರ ಆಪ್ತಶಾಖೆ, ವರ್ಗಾವಣೆ -ಸೇವಾ ಹೊಣೆಯ ಮಹದೇವು ಜತೆ ಫೋನ್‌ ಚರ್ಚೆ ನಡೆಸಿದ್ದೇಕೆ? ಸಿಎಸ್​ಆರ್​ಗೂ ಅವರಿಗೂ ಸಂಬಂಧವೇನು? ಸಿಎಸ್​ಆರ್​ ಶಿಕ್ಷಣ ಇಲಾಖೆಗೆ ಸಂಬಂಧಿಸಿದ್ದಲ್ಲ ಎಂದು ಮಧು ಬಂಗಾರಪ್ಪ ಕೂಡ ಹೇಳಿದ್ದಾರೆ ಎಂದು ಕಾಲೆಳೆದಿದ್ದಾರೆ.
    ನೀವು, ನಿಮ್ಮ ಪುತ್ರನಿಂದ ಇಡೀ ಕರ್ನಾಟಕ ತಲೆ ತಗ್ಗಿಸುವಂತೆ ಆಗಿದೆ. ಕಾಸಿಗಾಗಿ ಹುದ್ದೆ ದಂಧೆಯಿಂದ ಕರುನಾಡನ್ನು ಕುಖ್ಯಾತಗೊಳಿಸಿದ್ದೀರಿ. ಹೋದ ಮಾನ ವಾಪಸ್‌ ಪಡೆಯಲಿಕ್ಕೇನು ಮಾಡುತ್ತೀರಿ? ವಿಧಾನಸೌಧದ ಮುಂದೆ ತಲೆತಗ್ಗಿಸಿ ನಿಂತು ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೀರಾ? ಅಷ್ಟು ನೈತಿಕ ಧೈರ್ಯ ನಿಮಗೆ ಉಂಟೇ? ಎಂದು ಸವಾಲು ಹಾಕಿರುವ ಅವರು ಕುಮಾರಸ್ವಾಮಿ, ನನ್ನ ಮಾನಸಿಕ ಸ್ವಾಸ್ಥ್ಯ ಇರಲಿ. ನಿಮ್ಮ ಅಧಿಕಾರದ ಅಂಟುರೋಗಕ್ಕೆ ಮದ್ದೇನು? ನಿಮಗಿರುವ ಧನದಾಹ ಜಾಡ್ಯಕ್ಕೆ ಚಿಕಿತ್ಸೆ ಪಡೆಯಬಾರದೇ? ಮಾನಸಿಕ ಅಸ್ವಾಸ್ಥ್ಯಕ್ಕಿಂತ ಇದು ಮಾರಕ ಮನೋರೋಗವಲ್ಲವೇ? ಮುಖ್ಯಮಂತ್ರಿಯೇ ಇಂಥ ವಿನಾಶಕಾರಿ ಕಾಯಿಲೆಗೆ ತುತ್ತಾದರೆ ನಾಡಿನ ಪಾಡೇನು? ತುರ್ತುಚಿಕಿತ್ಸೆ ನಿಮಗೆ ಅಗತ್ಯವಿದೆ ಎಂದು ಸಿಎಂಗೆ ಪ್ರತ್ಯುತ್ತರ ಕೊಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts