More

    ಹೊಸ ಮಾರ್ಗಕ್ಕೆ ಹೊಂದಿಕೊಳ್ಳಲು ಪರದಾಟ

    ಹಾಸನ: ನಗರದ ಎನ್‌ಆರ್ ವೃತ್ತದಿಂದ ರೈಲ್ವೆ ಕ್ರಾಸಿಂಗ್‌ವರೆಗಿನ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಮಂಗಳವಾರ ಚಾಲನೆ ದೊರಕಿದ್ದು, ನಗರದ ಹೃದಯ ಭಾಗ ತಲುಪಲು ಜಿಲ್ಲಾಡಳಿತ ನಿಗದಿ ಮಾಡಿರುವ ಹೊಸ ಮಾರ್ಗಕ್ಕೆ ಹೊಂದಿಕೊಳ್ಳಲು ವಾಹನ ಸಾರ್ವಜನಿಕರು ಪರದಾಡುತ್ತಿದ್ದಾರೆ.
    ಹೊಸ ಬಸ್ ನಿಲ್ದಾಣ ರಸ್ತೆಯಲ್ಲಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಆರಂಭವಾಗಿ ಒಂದು ವರ್ಷ ಕಳೆದಿದ್ದು, ರೈಲ್ವೆ ಕ್ರಾಸಿಂಗ್‌ನಿಂದ ಬಸ್ ನಿಲ್ದಾಣದ ಕಡೆಗಿನ ಕೆಲಸ ಶೇ.60ರಷ್ಟು ಮುಕ್ತಾಯಗೊಂಡರೂ, ಎನ್‌ಆರ್ ವೃತ್ತದ ಕಡೆಗಿನ ಕಾಮಗಾರಿಗೆ ಈಗಷ್ಟೆ ಚಾಲನೆ ದೊರಕಿದೆ.
    ಭೂ ಸ್ವಾಧೀನ, ಕೆಲಸ ಆರಂಭಕ್ಕೆ ಮುನ್ನವೇ ಎನ್‌ಆರ್ ವೃತ್ತದ ಕಡೆಗಿನ ಮಾರ್ಗದ ಅಂತಿಮ ಯೋಜನೆ ಸಿದ್ಧಪಡಿಸಿಕೊಳ್ಳದಿದ್ದರಿಂದ ಕೇವಲ ಒಂದು ಭಾಗದ ಕಾಮಗಾರಿ ಮಾತ್ರವೇ ಪ್ರಗತಿಯಲ್ಲಿತ್ತು. ಅಲ್ಲಿನ ಕೆಲಸ ಮುಕ್ತಾಯಗೊಳ್ಳುತ್ತಾ ಬಂದಂತೆ ಎಚ್ಚೆತ್ತ ಜಿಲ್ಲಾಡಳಿತ 2ನೇ ಹಂತದ ಕೆಲಸ ಆರಂಭಿಸಲು ಬೇಕಾದ ಭೂಮಿ ಒದಗಿಸಿಕೊಡಲು ತುರ್ತು ಕ್ರಮ ಆರಂಭಿಸಿತ್ತು.
    ಸೋಮವಾರದಿಂದಲೇ ಎನ್‌ಆರ್ ವೃತ್ತದಿಂದ ರೈಲ್ವೆ ಕ್ರಾಸಿಂಗ್‌ವರೆಗಿನ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದು, ಮಂಗಳವಾರ ಬೆಳಗ್ಗೆಯಿಂದ ಪಿಲ್ಲರ್‌ಗಳ ನಿರ್ಮಾಣಕ್ಕೆ ಗುಂಡಿ ತೆಗೆಯುವ ಕಾಮಗಾರಿ ಆರಂಭವಾಗಿದೆ. ಡಾನ್ ಬೋಸ್ಕೊ ಐಟಿಐ ಎದುರು ಬೃಹತ್ ಗುಂಡಿ ತೆಗೆಯಲಾಗುತ್ತಿದ್ದು, ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ.
    ವಾಹನ ಸವಾರರ ಪರದಾಟ: ಸದ್ಯ ಜಿಲ್ಲಾಧಿಕಾರಿ ನಿವಾಸದ ಪಕ್ಕದ ಕಾಂಕ್ರೀಟ್ ರಸ್ತೆಗೆ ತಾತ್ಕಾಲಿಕ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದು, ಬಸ್ ನಿಲ್ದಾಣದ ಕಡೆಗೆ ಹೋಗಬೇಕಾದವರು ರಸ್ತೆಯ ಎಡಬದಿಯಲ್ಲಿ ಸಾಗಿ, ಸಿಕೆಎಸ್ ಪ್ರೌಢಶಾಲೆ ಎದುರಿನಲ್ಲಿ ಹಾದು, ರೈಲ್ವೆ ಅಂಡರ್‌ಪಾಸ್ ಮೂಲಕ ಎನ್‌ಡಿಆರ್‌ಕೆ ಎಜುಕೇಷನ್ ಆರ್ಕೇಡ್ ಎದುರಿನ ರಸ್ತೆಯಲ್ಲಿ ಹೋಗಿ ಬಸ್ ನಿಲ್ದಾಣ ಎದುರಿನ ರಸ್ತೆಗೆ ಸೇರಬೇಕಿದೆ.
    ಬಸ್ ನಿಲ್ದಾಣದ ಕಡೆಯಿಂದ ಎನ್‌ಆರ್ ವೃತ್ತದ ಕಡೆಗೆ ಹೋಗುವವರು ರೈಲ್ವೆ ಕ್ರಾಸಿಂಗ್ ದಾಟಿದ ತಕ್ಷಣವೇ ಬಲಕ್ಕೆ ಹೊರಳಿ ಉಪವಿಭಾಗಾಧಿಕಾರಿ ನಿವಾಸದ ರಸ್ತೆಯಿಂದ ಸರ್ಕಾರಿ ನರ್ಸಿಂಗ್ ಕಾಲೇಜು ಕಡೆಗೆ ಹೊರಳಿ ಕಾಂಕ್ರೀಟ್ ರಸ್ತೆಯ ಮೂಲಕ ಜಿಲ್ಲಾಧಿಕಾರಿ ನಿವಾಸದ ಬಳಿ ಬಿಎಂ ರಸ್ತೆಗೆ ಸೇರಿ, ಎನ್‌ಆರ್ ವೃತ್ತದ ಕಡೆಗೆ ಹೋಗಬೇಕಾಗಿದೆ.
    ಸಂಚಾರ ಠಾಣೆ ಪೊಲೀಸರು, ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ರಸ್ತೆಯ ಅಲ್ಲಲ್ಲಿ ನಿಯೋಜಿಸಲಾಗಿದ್ದು, ವಾಹನ ಸವಾರರಿಗೆ ಸಾಗಬೇಕಾದ ಮಾರ್ಗದ ಸೂಚನೆ ನೀಡುತ್ತಿದ್ದಾರೆ. ಹೀಗಿದ್ದರೂ ಕೊಂಕಣ ಸುತ್ತಿ ಮೈಲಾರ ಸೇರುವಂತಿರುವ ಹೊಸ ಮಾರ್ಗದಲ್ಲಿ ಓಡಾಟ ಅಭ್ಯಾಸ ಮಾಡಿಕೊಳ್ಳಲು ಸಾರ್ವಜನಿಕರು ಪರದಾಡುತ್ತಿದ್ದಾರೆ.
    ದ್ವಿಚಕ್ರ ವಾಹನ ಸವಾರರ ಸರ್ಕಸ್: ಎನ್‌ಆರ್ ವೃತ್ತದಿಂದ ರೈಲ್ವೆ ಕ್ರಾಸಿಂಗ್‌ವರೆಗೂ ಸಂಚಾರ ಬಂದ್ ಮಾಡಲು ರಸ್ತೆಗೆ ಆಳೆತ್ತರ ಮಣ್ಣು ಸುರಿದು, ಗುಂಡಿ ತೆಗೆದು, ಉದ್ದಕ್ಕೂ ಬ್ಯಾರಿಕೇಡ್ ಇರಿಸಿದ್ದರೂ ದ್ವಿಚಕ್ರ ವಾಹನ ಸವಾರರು ತಮ್ಮ ವಾಹನ ದಾಟುವಷ್ಟು ಜಾಗ ಹುಡುಕಿಕೊಂಡು ಅದೇ ರಸ್ತೆಯಲ್ಲಿ ಸಂಚರಿಸುವ ಸರ್ಕಸ್ ಮಾಡುತ್ತಲೇ ಇದ್ದಾರೆ. ಪೊಲೀಸರು ಆಗಾಗ್ಗೆ ಎಚ್ಚರಿಕೆ ನೀಡುತ್ತಲೇ ಇದ್ದರೂ ಸವಾರರ ಸಾಹಸವನ್ನು ತಡೆಯಲು ಮಾತ್ರ ಸಾಧ್ಯವಾಗಿಲ್ಲ.
    ಬಿಕೋ ಎನ್ನುತ್ತಿರುವ ಎನ್‌ಆರ್ ವೃತ್ತ: ನಗರದ ಹೃದಯ ಭಾಗವಾಗಿರುವ ನರಸಿಂಹರಾಜ ವೃತ್ತ ಸದಾ ಸಾವಿರಾರು ಜನರ ಓಡಾಟದಿಂದ ಗಿಜಿಗುಡುತ್ತಿತ್ತು. ಬಸ್ ನಿಲ್ದಾಣದ ಕಡೆಗೆ ವಾಹನ ಸಂಚಾರ ಬಂದ್ ಮಾಡಿರುವುದರಿಂದ ಹಗಲಿನಲ್ಲಿಯೇ ವೃತ್ತದಲ್ಲಿ ಪಾದಚಾರಿಗಳ ದರ್ಶನವೂ ವಿರಳವಾಗಿದ್ದು, ಬಿಕೋ ಎನ್ನುತ್ತಿದೆ.
    ಬಸ್ ನಿಲ್ದಾಣ ರಸ್ತೆಯಲ್ಲಿನ ಅಂಗಡಿಗಳ ಮಾಲೀಕರು ನೆಪ ಮಾತ್ರಕ್ಕೆ ಬಾಗಿಲು ತೆರೆದಿದ್ದು, ವ್ಯಾಪಾರಕ್ಕೆ ಮಂಕು ಕವಿದಿದೆ. ಸಕಲೇಶಪುರ ಕಡೆಗೆ ಪ್ರಯಾಣಿಕರನ್ನು ಸಾಗಿಸುವ ಫೋರ್ಸ್ ಟ್ರಾವೆಲರ್ ವಾಹನಗಳು ಸುವರ್ಣ ಹೋಟೆಲ್ ಪಕ್ಕದ ರಸ್ತೆಯಲ್ಲಿ ಹಾದು ಇಂಪೀರಿಯಲ್ ಟಾಕೀಸ್ ಕಾಂಪೌಂಡ್ ಪಕ್ಕದಲ್ಲಿಯೇ ನಿಲ್ಲುತ್ತಿದ್ದು, ಅದೇ ಮಾರ್ಗದಲ್ಲಿ ಸಾಗಿ ಬಿಎಂ ರಸ್ತೆ ಸೇರುತ್ತಿವೆ. ಆದರೆ ಜನರ ಓಡಾಟ ವಿರಳವಾಗಿರುವುದರಿಂದ ಟ್ರಾವೆಲರ್‌ಗಳೂ ಪ್ರಯಾಣಿಕರ ಬರ ಎದುರಿಸುತ್ತಿವೆ.
    ಸಿಟಿ ಬಸ್ ಸಂಚಾರಕ್ಕೆ ಕಷ್ಟ: ಹೊಸ ಬಸ್ ನಿಲ್ದಾಣ ಹಾಗೂ ಸಿಟಿ ಬಸ್ ನಿಲ್ದಾಣದ ನಡುವೆ ಸಂಚರಿಸುತ್ತಿದ್ದ ನಗರ ಸಾರಿಗೆ ಬಸ್‌ಗಳ ಓಡಾಟಕ್ಕೆ ರಸ್ತೆ ಬಂದ್ ಬಿಸಿ ತಟ್ಟಿದೆ. ಮುಂಜಾನೆ 8 ಗಂಟೆಯವರೆಗೂ ಹಾಗೂ ರಾತ್ರಿ 8ರ ನಂತರ ಬಸ್‌ಗಳು ಲಘು ವಾಹನಗಳಿಗೆ ನಿಗದಿಪಡಿಸಿರುವ ಸಣ್ಣ ರಸ್ತೆಯಲ್ಲಿಯೇ ಸಂಚರಿಸುತ್ತಿದ್ದು, ಹಗಲಿನಲ್ಲಿ ನಗರವನ್ನು ಸುತ್ತು ಹಾಕಿಕೊಂಡು ಬೈಪಾಸ್ ರಸ್ತೆ ಮೂಲಕ ಓಡಾಡುವುದು ಅನಿವಾರ್ಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts