More

    ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆಗಿರುವ ಅಡಚಣೆ ನಿವಾರಿಸಿ, ಟಿ.ಕೆ.ಜಗದೀಶ್ ಮನವಿ

    ಪಂಚನಹಳ್ಳಿ: ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆಗೆ ಇರುವ ತಾಂತ್ರಿಕ ಅಡಚಣೆಗಳನ್ನು ಕೂಡಲೇ ನಿವಾರಿಸಿ ಹಾಲು ಉತ್ಪಾದಕರಿಗೆ ಹೆಚ್ಚಿನ ಸಹಕಾರ ನೀಡಬೇಕಿದೆ ಎಂದು ಹಾಸನ ಹಾಲು ಒಕ್ಕೂಟದ ನಿರ್ದೇಶಕ ಟಿ.ಕೆ.ಜಗದೀಶ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
    ಕಡೂರು ತಾಲೂಕಿನ ಬಿ.ಮಲ್ಲೇನಹಳ್ಳಿ ಗ್ರಾಮದಲ್ಲಿ ಗುರುವಾರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಹಾಲು ಉತ್ಪಾದಕರಿಗೆ ಸಾಲ ನೀಡಲು ರಾಷ್ಟ್ರೀಯ ಬ್ಯಾಂಕ್‌ಗಳು ವಿಳಂಬ ಧೋರಣೆ ಅನುಸರಿಸಿಕೊಂಡು ಹಿಂದೇಟು ಹಾಕುತ್ತಿವೆ. ಇದನ್ನು ಮನಗಂಡಿರುವ ಸರ್ಕಾರ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆಗೆ ಮುಂದಾಗಿದೆ. ಜತೆಗೆ ಸಹಕಾರ ಸಂಘಗಳ ಸಬಲೀಕರಣಕ್ಕೆ ಇನ್ನೂ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ ಎಂದರು.
    ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಜಿ.ರಾಮಪ್ಪ ಮಾತನಾಡಿ, ಸಮಸ್ಯೆಗಳ ನಡುವೆಯೂ ಹಾಲು ಉತ್ಪಾದಕರ ಸಹಕಾರ ಸಂಘಗಳು ಲಾಭದಲ್ಲಿವೆ. ಕೃಷಿಯಲ್ಲಿ ರೈತರ ಉತ್ಪನ್ನಗಳಿಗೆ ದರ ಬದಲಾವಣೆಯಾಗುತ್ತಿರುತ್ತದೆ. ಆದರೆ ರೈತರಿಗೆ ಒಕ್ಕೂಟಗಳು ನೀಡುವ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹಾಗಾಗಿ ಹಾಲು ಉತ್ಪಾದನೆ ರೈತರಿಗೆ ಲಾಭದಾಯಕವಾದ ಕೃಷಿಯಾಗಿದೆ ಎಂದು ಹೇಳಿದರು.
    ಹಾಸನ ಹಾಲು ಒಕ್ಕೂಟದ ಜಿಲ್ಲಾ ಉಪ ವ್ಯವಸ್ಥಾಪಕ ಎಚ್.ಎಂ.ನಟರಾಜ್ ಮಾತನಾಡಿ, ಸಂಘಗಳು ಲಾಭ ಗಳಿಸಲು ಉತ್ಪಾದಕರ ಸಹಕಾರ ಬಹಳ ಮುಖ್ಯ. ರೈತರು ಗುಣಮಟ್ಟದ ಹಾಲನ್ನು ಸರಬರಾಜು ಮಾಡಿದರೆ ಸಂಘಗಳು ಲಾಭದತ್ತ ಸಾಗುತ್ತವೆ. ಲಾಭ ಹೆಚ್ಚಾದಷ್ಟು ರೈತರಿಗೆ ಅನುಕೂಲವಾಗುತ್ತದೆ ಎಂದರು.
    ಸಂಘದ ಕಾರ್ಯದರ್ಶಿ ಡಿ.ಬಿ.ಶೋಭಾ ಅವರು ಸಹಕಾರ ಸಂಘದಲ್ಲಿ 2021-22ನೇ ಸಾಲಿನಲ್ಲಿ 2.06 ಲಕ್ಷ ರೂ. ಲಾಭಾಂಶಗಳಿಸಿರುವ ಬಗ್ಗೆ ಹಾಗೂ ವಾರ್ಷಿಕ ವರದಿ ಮಂಡಿಸಿದರು. ಸಂಘದ ಅಧ್ಯಕ್ಷೆ ಎಂ.ಎಸ್.ಜಯಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಎಂ.ಸಿ.ನೇತ್ರಾವತಿ, ನಿರ್ದೇಶಕರಾದ ಎಂ.ಎನ್.ನೇತ್ರಾವತಿ, ಟಿ.ಬಿ.ಈರಮ್ಮ, ಪಿ.ಪ್ರೇಮಾ, ಜಿ.ಎಸ್.ವಿನೋದಾ, ಡಿ.ಎಸ್.ಸುಶೀಲಮ್ಮ, ವಿ.ಬಿ.ಗಂಗಮ್ಮ, ರಾಜಮ್ಮ, ರತ್ನಮ್ಮ, ಟಿ.ಪಿ.ಕವಿತಾ, ದ್ರಾಕ್ಷಯಣಮ್ಮ, ಲಕ್ಷ್ಮೀಬಾಯಿ, ಗ್ರಾಪಂ ಎಂ.ಎಚ್.ಯೋಗೀಶ್, ವಿಸ್ತರಣಾಧಿಕಾರಿ ಬಿ.ಎನ್.ಲೋಕೇಶ್ ಮತ್ತಿತರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts