More

    ನೀರು ಹಿಡಿದಿಡುವ ಮಳೆ ಕೊಯ್ಲು!

    ಬೋರ್​ವೆಲ್ ಮರುಪೂರಣಕ್ಕೆ ರೈನಿ ಸಂಸ್ಥೆಯಿಂದ ತಂತ್ರಜ್ಞಾನ ಅಭಿವೃದ್ಧಿ

    | ಹರೀಶ್ ಬೇಲೂರು, ಚಿಕ್ಕಮಗಳೂರು

    ವಿಶ್ವದ ಎಲ್ಲೆಡೆ ನೀರಿಗಾಗಿ ಹಾಹಾಕಾರ ಎದ್ದಿದೆ. ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ಬಹುತೇಕ ಪ್ರದೇಶದಲ್ಲಿ ಸಮಸ್ಯೆ ತಾರಕಕ್ಕೇರಿದೆ. ಭೀಕರ ಬರಗಾಲದಿಂದಾಗಿ ತತ್ತರಿಸಿರುವ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಮಳೆನೀರು ಕೊಯ್ಲು ವ್ಯವಸ್ಥೆಯೇ ಶಾಶ್ವತ ಪರಿಹಾರವಾಗಿದೆ.

    ಅಪಾರ್ಟ್​ವೆುಂಟ್, ಮನೆ, ಕೈಗಾರಿಕೆಗಳು, ಕಾಪೋರೇಟ್ ಕಂಪನಿಗಳು ಮಳೆನೀರು ಕೊಯ್ಲು ವ್ಯವಸ್ಥೆ ಹಾಗೂ ರೈತರು ಅಂತರ್ಜಲ ಮರುಪೂರಣ ತಂತ್ರಜ್ಞಾನ ಅಳವಡಿಸಿಕೊಂಡರೆ ಕುಡಿಯಲು, ಸ್ನಾನ, ಬಟ್ಟೆ ಹಾಗೂ ಬೆಳೆ ಉಳಿಸಿಕೊಳ್ಳಲು ನೀರು ಬಳಸಿಕೊಳ್ಳಬಹುದಾಗಿದೆ. ನೀರಿನ ಸಮಸ್ಯೆ ಪರಿಹಾರಕ್ಕೆ ಹಾಗೂ ಈ ಬಗ್ಗೆ ಜನರಿಗೆ ಅರಿವು ಮೂಡಿಸಲು ‘ರೈನಿ ರಿಸರ್ಚ್ ಮತ್ತು ಇನ್ನೋವೇಶನ್ ಫ್ಯಾಕ್ಟರಿ’ ಸಂಸ್ಥೆ ಚಿಕ್ಕಮಗಳೂರು ಜಿಲ್ಲೆ ಅಂಬಲೆ ಹೋಬಳಿಯ ಹಾದಿಹಳ್ಳಿ ಬಳಿ 5 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ‘ಮಳೆ ನೀರು ಕೊಯ್ಲು ಸಂಶೋಧನೆ ಮತ್ತು ಅಂತರ್ಜಲ ಮರಪೂರಣ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರ’ ಸ್ಥಾಪಿಸಿದೆ. ಇಲ್ಲಿ ತಂತ್ರಜ್ಞಾನ ಮೂಲಕ ನೀರಿನ ಸಮಸ್ಯೆಗೆ ಪರಿಹಾರೋಪಾಯ ಅಭಿವೃದ್ಧಿಪಡಿಸಿದ್ದು, ಸಮಸ್ಯೆ ಎದುರಿಸುತ್ತಿರುವ ಪಕ್ಕದ ಹಳ್ಳಿಗಳಿಗೆ ನೀರು ಪೂರೈಕೆ ಮಾಡುತ್ತಿದೆ. ದೇಶ-ವಿದೇಶಗಳಿಂದ ಸಂಶೋಧಕರು, ವಿಜ್ಞಾನಿಗಳು ಕೇಂದ್ರಕ್ಕೆ ಭೇಟಿ ನೀಡಿ ಜಾಗತಿಕ ಮಟ್ಟದಲ್ಲಿ ನೀರಿನ ಬಿಕ್ಕಟ್ಟು ಪರಿಹಾರಕ್ಕೆ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಕೈಜೋಡಿಸಿದ್ದಾರೆ.

    ಏನೇನು ಇದೆ?: ಮಳೆನೀರು ಕೊಯ್ಲು ಮಾದರಿ, ತೆರೆದ ಬಾವಿಗಳು, ಮರುಪೂರಣ (ರೀಚಾರ್ಜಿಂಗ್) ಬೋರ್​ವೆಲ್, ಫಿಲ್ಟರ್ ಸಂಗ್ರಹ ವ್ಯವಸ್ಥೆ, ಹೈಡ್ರಾಲಿಕ್ ಪರೀಕ್ಷಾ ಪ್ರಯೋಗಾಲಯ, ಶಿಕ್ಷಣ, ತರಬೇತಿ ಸೇರಿ ಇತ್ಯಾದಿ ಸೌಲಭ್ಯಗಳಿವೆ. ಮಳೆ ನೀರು ಸಂಗ್ರಹ, ಮಳೆ ನೀರು ಕೊಯ್ಲು ವ್ಯವಸ್ಥೆ, ಬತ್ತಿರುವ ಬೋರ್​ವೆಲ್​ಗಳ ಮರುಪೂರಣ ಹೇಗೆ ಎಂಬುದರ ಬಗ್ಗೆ ತಂತ್ರಜ್ಞಾನ ವೀಕ್ಷಿಸಬಹುದು. ಮಿನಿ ಕೆರೆ, ತೆರೆದ ಬಾವಿ ಇತರ ಮರುಪೂರಣ ವಿಧಾನ ಕಾಣಬಹುದು. ವಿಶ್ವದಲ್ಲೇ ಮೊದಲ ಬಾರಿ ಸಂಶೋಧನಾ ಕೇಂದ್ರದಲ್ಲಿ ಮೇಲ್ಛಾವಣಿಯಲ್ಲಿ ಮಳೆ ನೀರು ಮರುಬಳಕೆ, ಬೋರ್​ವೆಲ್ ಮರುಪೂರಣಕ್ಕೆ ಹೊಸ ಆವಿಷ್ಕಾರ ಕಂಡು ಹಿಡಿಯಲಾಗಿದೆ. ಮೈಕೆಲ್ ಸದಾನಂದ್ ಬ್ಯಾಪ್ಟಿಸ್ಟ್, ವಿಜಯ್ ರಾಜ್ ಸಿಸೋಡಿಯ ಎಂಬುವರು ಇದನ್ನು ಮುನ್ನಡೆಸುತ್ತಿದ್ದಾರೆ. ದೇಶಾದ್ಯಂತ ನೀರಿನ ಸಮಸ್ಯೆ ನಿವಾರಣೆಗೆ ಸಂಸ್ಥೆ ಸರ್ಕಾರದ ಬೆಂಬಲ ನಿರೀಕ್ಷಿಸುತ್ತಿದೆ.

    ನಿಯಮ ಪಾಲಿಸದ ಜನ:15 ವರ್ಷದ ಹಿಂದೆ 6040 ನಿವೇಶನ, ವಾಣಿಜ್ಯ ಸಂಸ್ಥೆಗಳು ಕಡ್ಡಾಯವಾಗಿ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಬೇಕೆಂದು ನಿಯಮ ಜಾರಿಗೆ ತರಲಾಗಿತ್ತು. ಇದನ್ನು ಯಾರೂ ಪಾಲಿಸುತ್ತಿಲ್ಲ. ಕೆಲವರು ನೆಪ ಮಾತ್ರಕ್ಕೆ ಅಳವಡಿಸಿಕೊಂಡಿದ್ದರೂ ಆ ನೀರು ಬಳಸುತ್ತಿಲ್ಲ. ಹೊಸದಾಗಿ ಲೇಔಟ್ ಮಾಡುವವರು, ಮನೆ ಕಟ್ಟುವವರು, ಕೈಗಾರಿಕೆಗಳು, ಐಟಿ-ಬಿಟಿ ಕಂಪನಿಗಳು ಹಾಗೂ ರೈತರು ಅಳವಡಿಸಿಕೊಂಡರೆ ನೀರಿನ ಸಮಸ್ಯೆಗೆ ಮುಕ್ತಿ ಸಿಗಲಿದೆ.

    ಒಡಿಶಾ ಮಾದರಿ ಅಳವಡಿಸಿ: ಒಡಿಶಾ ಸರ್ಕಾರ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳುವವ ರಿಗೆ 55 ಸಾವಿರ ರೂ. ಸಬ್ಸಿಡಿ ನೀಡುತ್ತಿದೆ. ಶೇ.90 ಮಂದಿ ಈ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಒಡಿಶಾ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡ ರೈನಿ ರಿಸರ್ಚ್ ಮತ್ತು ಇನ್ನೋವೇಶನ್ ಫ್ಯಾಕ್ಟರಿ’ ಮನೆಗಳಿಗೆ ಮಳೆನೀರು ಕೊಯ್ಲು ವ್ಯವಸ್ಥೆ ಮಾಡಿಕೊಟ್ಟಿದೆ. ಒಡಿಶಾ ಮಾದರಿಯಂತೆ ಕರ್ನಾಟಕದಲ್ಲಿಯೂ ಅಳವಡಿಸಿಕೊಂಡರೆ ನೀರಿನ ಕೊರತೆಗೆ ಪರಿಹಾರ ಸಿಗಲಿದೆ. ಪ್ರತಿ ಮನೆಗೆ ಅಂದಾಜು 20 ಸಾವಿರ ರೂ., ಬೋರ್​ವೆಲ್​ಗಳ ಮರು ಪೂರಣಕ್ಕೆ 50-60 ಸಾವಿರ ರೂ.ಖರ್ಚು ಬರಲಿದೆ. ಅಟಲ್ ಭೂ ಯೋಜನೆಯಡಿ ಬೆಂ. ಗ್ರಾಮಾಂತರ ಜಿಲ್ಲೆಯಲ್ಲಿ 50ಕ್ಕೂ ಅಧಿಕ ಬೋರ್​ವೆಲ್​ಗಳಿಗೆ ವಿ-ವೈರ್ ಇಂಜೆಕ್ಷನ್ ವೆಲ್ ತಂತ್ರಜ್ಞಾನ ಮೂಲಕ ಮರುಪೂರಣ ಮಾಡಿದೆ. ಈ ವಿಧಾನ ಅಳವಡಿಕೆಯಿಂದ ಬೋರ್​ವೆಲ್ ಮರುಪೂರಣ ಜತೆಗೆ ಅನೇಕ ಪ್ರಯೋಜನಗಳು ಸಿಗಲಿವೆ.

    ನೀರಿನ ಸಮಸ್ಯೆ ಪರಿಹಾರಕ್ಕೆ ಮಳೆನೀರು ಕೊಯ್ಲು ಸಂಶೋಧನಾ ಕೇಂದ್ರ ಸ್ಥಾಪಿಸಲಾಗಿದೆ. ದೇಶಾದ್ಯಂತ ಲಕ್ಷಕ್ಕೂ ಅಧಿಕ ಮಳೆ ನೀರು ಫಿಲ್ಟರ್​ಗಳನ್ನು ಅಳವಡಿಸಿದ್ದೇವೆ. ವಿದೇಶಗಳಿಗೂ ರಫ್ತು ಮಾಡಿದ್ದೇವೆ. ವಿದ್ಯುತ್ ಅವಶ್ಯಕತೆ ಇಲ್ಲದೆ ವಿ-ವೈರ್ ಇಂಜೆಕ್ಷನ್ ವೆಲ್ ತಂತ್ರಜ್ಞಾನ ಬಳಸಿಕೊಂಡು ಅಂತರ್ಜಲ ಮರುಪೂರಣವನ್ನು ಗುರುತ್ವಾಕರ್ಷಣೆ ಶಕ್ತಿ ಆಧಾರದ ಮೇಲೆ ಮಾಡಬಹುದು. ಮಳೆ ನೀರು ಕೊಯ್ಲು ಅಳವಡಿಸುವ ಉಪಕರಣಕ್ಕೆ ವಿಧಿಸಿರುವ ಶೇ.18 ಜಿಎಸ್​ಟಿ ಅನ್ನು ಶೇ.5ಕ್ಕೆ ಇಳಿಸಬೇಕು.

    | ಮೈಕೆಲ್ ಸದಾನಂದ್ ಬ್ಯಾಪ್ಟಿಸ್ಟ್ಮ,  ‘ರೈನಿ ರಿಸರ್ಚ್ ಮತ್ತು ಇನ್ನೋವೇಶನ್ ಫ್ಯಾಕ್ಟರಿ’ಸಂಸ್ಥೆ ಮಾಲೀಕ

     

    ನಟ ಶಿವರಾಜ್​ಕುಮಾರ್​ ಆಸ್ತಿ ಮೊತ್ತ ಇಷ್ಟೊಂದಾ? ಸ್ಟಾರ್ ನಟನ ಆಸ್ತಿ ಮೌಲ್ಯ, ಸಾಲದ ಬಗ್ಗೆ ಇಲ್ಲಿದೆ ಮಾಹಿತಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts