More

    ತಾಲೂಕು ಬರ ಪೀಡಿತವೆಂದು ಘೋಷಿಸಿ

    ರೈತ ಸಂಘಟನೆಗಳ ಒಕ್ಕೂಟ ಸದಸ್ಯರ ಆಗ್ರಹ

    ಹರಪನಹಳ್ಳಿ: ಮಳೆ ಕೊರತೆಯಿಂದ ಬೆಳೆ ಹಾನಿಯಾಗಿ ರೈತರು ನಷ್ಟ ಅನುಭವಿಸುತ್ತಿದ್ದು, ತಾಲೂಕನ್ನು ಬರ ಪೀಡಿತವೆಂದು ಘೋಷಿಸಬೇಕೆಂದು ಆಗ್ರಹಿಸಿ ತಹಸಿಲ್ ಕಚೇರಿ ಮುಂದೆ ರೈತ ಸಂಘಟನೆಗಳ ಒಕ್ಕೂಟ ಸದಸ್ಯರು ಪ್ರತಿಭಟನೆ ನಡೆಸಿದರು.

    ಪಟ್ಟಣದಲ್ಲಿ ಪ್ರತಿಭಟನಾಕಾರರು ಪ್ರವಾಸಿ ಮಂದಿರ ವೃತ್ತದಿಂದ ತಹಸಿಲ್ ಕಚೇರಿಗೆ ತೆರಳಿ ಬಹಿರಂಗ ಸಭೆ ನಡೆಸಿ ಹಕ್ಕೊತ್ತಾಯ ಮಂಡಿಸಿದರು. ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು. ರೈತರ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸೊಸೈಟಿಗಳಲ್ಲಿರುವ ಎಲ್ಲ ರೀತಿಯ ಸಾಲ ಮನ್ನಾ ಮಾಡಬೇಕು. 2017-18ರಲ್ಲಿ ಬರಗಾಲವೆಂದು ಘೋಷಿಸಿದ್ದರೂ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮಾ ಕಂಪನಿಗಳು ರೈತರಿಗೆ ವಿಮಾ ಹಣ ಪಾವತಿಸಿಲ್ಲ. ಆದ್ದರಿಂದ ಅಂದಿನ ವಿಮಾ ಹಣವನ್ನು ಪಾವತಿಸಬೇಕೆಂದು ಆಗ್ರಹಿಸಿದರು.

    ಭಗರ್ ಹುಕ್ಕುಂ ಸಾಗುವಳಿದಾರರಿಗೆ ಕೂಡಲೇ ಪಟ್ಟಾ ವಿತರಿಸಬೇಕು. ಪಟ್ಟಾ ಪೂರ್ವದಲ್ಲಿ ಮೋಜಣಿ ಕಾರ್ಯ ನಡೆಸಲು ಅಧಿಕಾರಿಗಳು ಹಣ ಕೇಳುತ್ತಿದ್ದು, ಇಂತಹ ಭ್ರಷ್ಟಾಚಾರ ತಡೆಗಟ್ಟಬೇಕು. ಅನಂತನಹಳ್ಳಿ, ಮೆಳ್ಳೆಕಟ್ಟಿ, ತೊಗರಿಕಟ್ಟೆ, ಬಾಪೂಜಿನಗರ, ಹರಪನಹಳ್ಳಿ, ಹುಲ್ಲಿಕಟ್ಟಿ, ನಾರಾಯಣಪುರ ಗ್ರಾಮಗಳಲ್ಲಿ ರೈತರ ಭೂಮಿ ಪೋಡಿ ಮಾಡಿಕೊಡಬೇಕು. 11ಇ ನಕ್ಷೆ ಮಾಡಿಸಲು ಖಾಸಗಿ ಪರವಾನಿಗೆ ಭೂ ಮಾಪಕರು ರೈತರಿಂದ ಹಣ ವಸೂಲಿ ಮಾಡುತ್ತಿದ್ದು, ಇಂತಹ ಭೂ ಮಾಪಕರು ಪರವಾನಿಗೆ ರದ್ದು ಪಡಿಸಬೇಕು.

    ಕೆರೆಗಳಿಗೆ ನದಿ ನೀರು ತುಂಬಿಸುವ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ತನಿಖೆ ನಡೆಸಬೇಕು. ಅರಸಿಕೇರಿ, ಬಾಗಳಿ, ಅಲಮರಸಿಕೇರಿ, ಹುಲ್ಲಿಕಟ್ಟಿ, ಕನ್ನನಾಯಕನಹಳ್ಳಿ, ಹರಪನಹಳ್ಳಿಯ ಪುಟ್ ಪಾತ್ ಮತ್ತು ನಾಯಕನ ಕೆರೆ, ಮುತ್ತಿಗೆ ಕೆರೆಗಳು ಒತ್ತುವರಿಯಾಗಿದ್ದು, ಕೂಡಲೇ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮುಖಂಡರಾದ ಇದ್ಲಿ ರಾಮಪ್ಪ, ಸಂದೇರ ಪರಶುರಾಮ, ಕೆ.ರಾಜಪ್ಪ, ಎಚ್.ರಹಮತ್, ಕುದುರೆ ನಾಗರಾಜ, ಮಾಡಲಗೇರಿ ಬಸವರಾಜ, ಎ.ಡಿ.ದ್ವಾರಕೇಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts