More

    ನರೇಗಾದಿಂದ ಸರ್ಕಾರಿ ಶಾಲೆಗಳಿಗೆ ಶುಕ್ರದೆಸೆ

    ಹರಪನಹಳ್ಳಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ನರೇಗಾದಡಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, ಆಕರ್ಷಿಸುತ್ತಿವೆ.

    ಉದ್ಯೋಗ ಖಾತ್ರಿ ಯೋಜನೆಯಡಿ ಆಟದ ಮೈದಾನ, ಹೈಟೆಕ್ ಶೌಚಗೃಹ, ಆಕರ್ಷಕ ಕಮಾನಿನ ಗೇಟಿನೊಂದಿಗೆ ಕಾಂಪೌಂಡ್, ಪೌಷ್ಟಿಕ ಕೈತೋಟ, ಇಂಗುಗುಂಡಿ ಸೇರಿ ಒಟ್ಟು 9 ಬಗೆಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

    ತಾಲೂಕಿನ ಒಟ್ಟು 264 ಶಾಲೆಗಳಲ್ಲಿ 9 ಬಗೆಯ 734 ಕಾಮಗಾರಿಗಳನ್ನು ಅಂದಾಜು 31 ಕೋಟಿ ರೂ.ವೆಚ್ಚದಲ್ಲಿ ತಾಪಂ ಕ್ರಿಯಾಯೋಜನೆ ತಯಾರಿಸಿದೆ. ಒಟ್ಟು 48 ಸಾವಿರ ಮಾನವ ದಿನಗಳನ್ನು ಬಳಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ.

    ಇದನ್ನೂ ಓದಿ: ನರೇಗಾ ಸಮರ್ಪಕವಾಗಿ ಅನುಷ್ಠಾನವಾಗಲಿ

    ಐದು ಶಾಲೆಗಳಲ್ಲಿ ಪೂರ್ಣ: ಏಳು ಅಡಿ ಎತ್ತರದ ಕಾಂಪೌಂಡ್ ಅನ್ನು ಕಲ್ಲುಗಳಿಂದ ನಿರ್ಮಾಣ ಮಾಡಲಾಗಿದೆ. ಈಗಾಗಲೇ ತಾಲೂಕಿನ ಮಾಡ್ಲಿಗೇರಿ ಗ್ರಾಪಂನ ಜಿ.ದಾದಾಪುರ, ತೊಗರಿಕಟ್ಟೆ ಗ್ರಾಪಂನ ಗೌರಿಹಳ್ಳಿ, ಅರಸೀಕೆರೆ, ಕಾನಹಳ್ಳಿ, ತೌಡೂರು ಸರ್ಕಾರಿ ಶಾಲೆಗಳಲ್ಲಿ ಕಾಂಪೌಂಡ್ ಕಾಮಗಾರಿ ಪೂರ್ಣಗೊಂಡಿದೆ.

    ಇನ್ನು ಬಳಿಗನೂರು, ಗೌರಿಪುರ, ಗಜಾಪುರ, ನಿಲುವಂಜಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿವೆ. ಇನ್ನು ಕೆಲವು ಕಡೆ ಜಾಗದ ಕೊರತೆ ಹಾಗೂ ಇತರ ಸಮಸ್ಯೆಗಳಿಂದ ಗ್ರಾಮಸ್ಥರ ಸಹಕಾರದೊಂದಿಗೆ ಕಾಂಪೌಂಡ್ ನಿರ್ಮಿಸುವ ನಿರ್ಧಾರ ಮಾಡಲಾಗಿದೆ.

    ಹೈಟೆಕ್ ಶೌಚಗೃಹ

    ಒಟ್ಟು 264 ಶಾಲೆಗಳ ಪೈಕಿ 181 ಶಾಲೆಗಳಿಗೆ ಅಂದಾಜು 5.20 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್ ಶೌಚಗೃಹ ನಿರ್ಮಿಸುವ ಗುರಿ ಹೊಂದಲಾಗಿದೆ. ಈಗಾಗಲೇ 159 ಶೌಚಗೃಹಗಳಿಗೆ ಕ್ರಿಯಾಯೋಜನೆ ತಯಾರಿಸಲಾಗಿದೆ.

    ಬಾಲಕರು, ಬಾಲಕಿಯರ ಶೌಚಗೃಹ ಹಾಗೂ ಕೈತೊಳೆಯುವ ಬೆಸನ್, ವಿದ್ಯುತ್ ಸೌಕರ್ಯ ಒದಗಿಸಲಾಗುತ್ತಿದೆ. ಹಾರಕನಾಳು ಗ್ರಾಪಂನ ಚನ್ನಹಳ್ಳಿ, ಹಾರಕನಾಳು ದೊಡ್ಡ ತಾಂಡಾ, ಬಾಗಳಿ ಗ್ರಾಪಂ ವ್ಯಾಪ್ತಿಯ ಕಾಯಕದಹಳ್ಳಿಯಲ್ಲಿ ಕಾಮಗಾರಿ ಮುಗಿದಿದೆ. ನಂದಿಬೇವೂರು, ಲೌಲೇಶ್ವರ, ನಿಲುವಂಜಿ, ಬಳಿಗನೂರು, ದುಗ್ಗಾವತಿ, ಕಡತಿ, ದ್ಯಾಪನಾಯಕನಹಳ್ಳಿ, ವಟ್ಲಹಳ್ಳಿಯ ಶಾಲೆಗಳಲ್ಲಿ ಶೌಚಗಹೃ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

    ಅಡುಗೆ ಕೋಣೆಯಿಂದ ಬರುವ ನೀರು, ಶೌಚಗೃಹ ನೀರು ವ್ಯರ್ಥವಾಗದಂತೆ 40 ಸಾವಿರ ರೂ.ವೆಚ್ಚದಲ್ಲಿ ಬಚ್ಚಲ ಗುಂಡಿಗಳನ್ನು ಸಹ ನಿರ್ಮಿಸಲಾಗುತ್ತಿದೆ. ಶಾಲೆಗಳ ಸೌಂದರ್ಯ ಹೆಚ್ಚಿಸಲು ಆವರಣದಲ್ಲಿ ವಿವಿಧ ರೀತಿಯ ತರಕಾರಿ, ಹಣ್ಣು ಹಾಗೂ ಗಿಡಗಳನ್ನು ಬೆಳೆಸುವ ಪೌಷ್ಟಿಕ ಆಹಾರದ ಕೈತೋಟ ಮಾಡಲಾಗುತ್ತದೆ.

    ಇನ್ನು ಆಟದ ಮೈದಾನಕ್ಕೆ 3 ರಿಂದ 6ಲಕ್ಷ ರೂ. ವೆಚ್ಚದಲ್ಲಿ ಅಂಕಣವಾರು ಅಂದಾಜು ಮೊತ್ತ ನಿಗದಿಪಡಿಸಲಾಗಿದೆ. ಕಬಡ್ಡಿ, ಖೋಖೋ, ವಾಲಿಬಾಲ್, ಬಾಸ್ಕೆಟ್ ಬಾಲ್, ಅಂಕಣ ಮಾಡಲಾಗುತ್ತಿದೆ. ಸದ್ಯ 84 ಆಟದ ಮೈದಾನ ಅಭಿವೃದ್ಧಿಗೊಳಿಸಲಾಗುತ್ತಿದೆ.

    ನರೇಗಾ ಅನುದಾನ ಬಳಸಿಕೊಂಡು ಸರ್ಕಾರಿ ಶಾಲೆಗಳಲ್ಲಿ 9 ವಿವಿಧ ಬಗೆಯ ಕಾಮಗಾರಿಗಳನ್ನು ಅಂದಾಜು 31 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ಡಿಸೆಂಬರ್ ಒಳಗೆ ಪೂರ್ಣಗೊಳಿಸಲಾಗುವುದು. ತಾಲೂಕಿನ ಶಾಲೆಗಳನ್ನು ಮಾದರಿಯಾಗಿ ಪರಿವರ್ತಿಸಲಾಗುವುದು.
    | ಯು.ಎಚ್.ಸೋಮಶೇಖರ, ನರೇಗಾ ಸಹಾಯಕ ನಿರ್ದೇಶಕ, ಹರಪನಹಳ್ಳಿ

    ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸರ್ಕಾರಿ ಶಾಲೆಗಳಿಗೆ ಶೌಚಗೃಹ, ಆಟದ ಮೈದಾನ, ಅಡುಗೆ ಕೋಣೆ, ಕಾಂಪೌಂಡ್ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
    | ಕೆ.ಆರ್.ಪ್ರಕಾಶ್, ತಾಪಂ ಇಒ, ಹರಪನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts