More

    ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಕಸಾಯಿಖಾನೆ ತೆರವು ಹೋರಾಟ ಅಂತಿಮ ಘಟ್ಟಕ್ಕೆ

    ರಾಮನಗರ: ಕನಕಪುರ ತಾಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಕಸಾಯಿಖಾನೆಯನ್ನು ತೆರವುಗೊಳಿಸುವ ಹೋರಾಟ ಅಂತಿಮ ಹಂತಕ್ಕೆ ಬಂದಿದ್ದು, ಸ್ಥಳೀಯ ಮುಖಂಡರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

    ಕಳೆದ ಹಲವು ವರ್ಷಗಳ ಹಿಂದೆ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಮೊದಲ ಹಂತದ ಪ್ಲಾಟ್ ಸಂಖ್ಯೆ 140 ಮತ್ತು 141ರಲ್ಲಿ 40 ಎಕರೆ ಜಾಗವನ್ನು ಕ್ಯಾಪ್ರಿ ಮೀಟ್ ಹೌಸ್ ಎನ್ನುವ ಸಂಸ್ಥೆಗೆ ಆಧುನಿಕ ತಂತ್ರಜ್ಞಾನದ ಕಸಾಯಿ ಖಾನೆ ನಿರ್ಮಾಣಕ್ಕೆ ನೀಡಲಾಗಿದೆ. ಆದರೆ, ಇದರ ವಿರುದ್ಧ ಸ್ಥಳೀಯರು ನಿರಂತರ ಹೋರಾಟ ಮಾಡುತ್ತಲೇ ಬಂದಿದ್ದು, ಇದೀಗ ಕಸಾಯಿ ಖಾನೆಗೆ ನೀಡಿರುವ ಜಾಗ ಹಿಂಪಡೆಯುವಂತೆ ಮತ್ತೊಮ್ಮೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

    ನಿಲ್ಲದ ಹೋರಾಟ: ಕ್ಯಾಪ್ರಿ ಮೀಟ್ ಹೌಸ್ ಸಂಸ್ಥೆ ಹಾರೋಹಳ್ಳಿಗೆ ಬರುವ ಮುನ್ನ ಆನೇಕಲ್‌ನಲ್ಲೂ ವ್ಯಾಪಕ ವಿರೋಧ ಎದುರಿಸಿತ್ತು. 2006ರಲ್ಲಿ ಆನೇಕಲ್‌ನ ಇಗ್ಗಲೂರಿನಲ್ಲಿ ಕಸಾಯಿಖಾನೆ ಸ್ಥಾಪನೆಗೆ ಜಾಗ ಮಂಜೂರು ಮಾಡಲಾಗಿತ್ತು. ಆದರೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರಿಂದ ಹಾರೋಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಸ್ಥಳಾಂತರಗೊಂಡಿತು. ಇದಾದ ನಂತರ ಹಾರೋಹಳ್ಳಿಯಲ್ಲಿಯೂ ವಿರೋಧಿ ಹೋರಾಟ ಸಮಿತಿ ರಚನೆಯಾಗಿ, ನಿರಂತರವಾಗಿ ಹೋರಾಟಗಳು ನಡೆಯುತ್ತಲೇ ಬಂದಿವೆ. ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ನೇತೃತ್ವದಲ್ಲಿ ವಿವಿಧ ಮಠಾಧೀಶರು ಬೃಹತ್ ಹೋರಾಟವನ್ನೂ ನಡೆಸಿದ್ದಾರೆ.

    ಆದರೂ ನಡೆಯುತ್ತಿದೆ?: ಈ ಎಲ್ಲ ಹೋರಾಟಗಳು ಮತ್ತು ವರದಿ ಯೋಜನೆ ವಿರುದ್ಧವಾಗಿ
    ಇದ್ದರೂ ಸಹ ಕ್ಯಾಪ್ರಿ ಮೀಟ್ ಹೌಸ್ ನಿರ್ಮಾಣ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಲೇ ಇದೆ. ಇದರ ಜತೆಗೆ ಮತ್ತೊಂದು ಮಗ್ಗುಲಲ್ಲಿ ಹೋರಾಟವೂ ಸಾಗಿದ್ದು, ಇದೀಗ ಮತ್ತೊಮ್ಮೆ ಕಸಾಯಿಖಾನೆ ತೆರವಿನ ಚೆಂಡು ಮುಖ್ಯಮಂತ್ರಿ ಅಂಗಳಕ್ಕೆ ಬಿದ್ದಿದೆ. ಈ ವೇಳೆ ಯಾವುದೇ ಕಾರಣಕ್ಕೂ ಕಸಾಯಿಖಾನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎನ್ನುವ ಭರವಸೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೀಡಿದ್ದಾರೆ.

    ಇಲ್ಲಿಗೆ ಬೇಡವೆಂದ ವರದಿ: ಪರಿಸರ ಹಾನಿ ಆತಂಕದ ಹಿನ್ನೆಲೆಯಲ್ಲಿ ಆನೇಕಲ್‌ನಿಂದ ರಾಮನಗರದ ಹಾರೋಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಸ್ಥಳಾಂತರಗೊಂಡಿರುವ ಕಸಾಯಿಖಾನೆ ಇಲ್ಲಿಯೂ ಬೇಡ ಎಂದು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಸುಸಜ್ಜಿತ ಆಧುನಿಕ ತಂತ್ರಜ್ಞಾನ ಬಳಸಿ ಕಸಾಯಿಖಾನೆ ಆರಂಭಿಸುವುದಾಗಿ ಬಿಬಿಎಂಪಿ ಹೇಳುತ್ತಿದೆಯಾದರೂ, ಆರಂಭಿಕ ವರ್ಷದ ನಂತರ ಪರಿಸರ ಸಂಪೂರ್ಣವಾಗಿ ಕಲುಷಿತಗೊಂಡು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದು ಸ್ಥಳೀಯರ ವಾದವಾಗಿದೆ. ಇಲ್ಲಿನ ಪರಿಸರ ಹಾಳಾಗಿ, ಶುದ್ಧಗಾಳಿ, ಅಂತರ್ಜಲ ಮರೀಚಿಕೆಯಾಗುತ್ತದೆ. ಇದಲ್ಲದೇ 4 ಸಾವಿರ ಎಕರೆ ಪ್ರದೇಶದ ಬೃಹತ್ ಕೈಗಾರಿಕಾ ಪ್ರದೇಶದಲ್ಲಿ ಈಗಾಗಲೇ ಸ್ಥಾಪನೆಯಾಗಿರುವ ಕೈಗಾರಿಕೆಗಳು ಬೇರೆಡೆಗೆ ಸ್ಥಳಾಂತರಗೊಂಡು, ಸ್ಥಳೀಯರು ನಿರುದ್ಯೋಗ ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. 2013ರಲ್ಲಿ ಬಿಬಿಎಂಪಿ ಅಧಿಕಾರಿಗಳೇ ನೀಡಿರುವ ವರದಿಯೂ ಸಹ ಸ್ಥಳೀಯರ ಆತಂಕಕ್ಕೆ ಪೂರಕವಾಗಿಯೇ ಇದೆ. ಕಸಾಯಿಖಾನೆ ನಿರ್ಮಾಣದಿಂದ ಇಲ್ಲಿನ ಅಕ್ಕಪಕ್ಕದ ಗ್ರಾಮಗಳಾದ ಸಿದ್ದಾಪುರ, ಗಾಣಾಳುದೊಡ್ಡಿ, ಗಿರೇನಹಳ್ಳಿ ಸೇರಿ ಸುತ್ತಮುತ್ತಲ 35-40 ಹಳ್ಳಿಗಳಿಗೆ ತೊಂದರೆಯಾಗುತ್ತದೆ. ಇತರ ಕೈಗಾರಿಕೆಗಳೂ ಸಹ ವಲಸೆ ಹೋಗುವ ಸಾಧ್ಯತೆ ಇರುವುದರಿಂದ ಯೋಜನೆ ಕೈ ಬಿಡುವುದು ಸೂಕ್ತ ಎಂದು ಸರ್ಕಾರಕ್ಕೆ ವರದಿ ನೀಡಲಾಗಿದೆ.

    ಕಸಾಯಿಖಾನೆ ತೆರವುಗೊಳಿಸುವಂತೆ ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದು, ಇದೀಗ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇವೆ. ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.
    ಮುರಳೀಧರ್ ಪ್ರಧಾನ ಕಾರ್ಯದರ್ಶಿ, ಕಸಾಯಿಖಾನೆ ಹೋರಾಟ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts