More

    ‘ಹಾರೋಹಳ್ಳಿ ತಾಲೂಕು’ ನಮ್ಮ ಸಾಧನೆ; ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ 

    ಹಾರೋಹಳ್ಳಿ: ರಾಮನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಸದಾ ಸಿದ್ಧರಾಗಿದ್ದು ಹಾರೋಹಳ್ಳಿ ತಾಲೂಕನ್ನು ಶ್ರಮವಹಿಸಿ ಮಾಡಿದ್ದೇವೆ. ಇದು ನಮ್ಮ ಸಾಧನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

    ಹಾರೋಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಮಂಗಳವಾರ ಹಾರೋಹಳ್ಳಿ ನೂತನ ತಾಲೂಕಿನ ಉದ್ಘಾಟನೆ ನೆರವೇರಿಸಿ, ಭಾರತ್ ಮಾತಾ ಕೀ ಜೈ…. ಹಾರೋಹಳ್ಳಿ ತಾಲೂಕಿಗೆ ಜೈ… ಎಂದು ಘೋಷಣೆ ಕೂಗಿ ಮಾತನಾಡಿ, ಕೇವಲ ಪ್ರಚಾರಕ್ಕಾಗಿ ಕೆಲಸ ಮಾಡುತ್ತಿಲ್ಲ. ಅಭಿವೃದ್ಧಿ ಏನೆಂಬುದನ್ನು ಸಾಧಿಸಿ ತೋರಿಸಿದ್ದೇವೆ ಎಂದರು.

    ಸರ್ಕಾರ 12 ತಾಲೂಕುಗಳ ಘೋಷಣೆ ಮಾಡಿದ್ದು ಅದರಲ್ಲಿ ಕಾರ್ಯರೂಪಕ್ಕೆ ಬಂದಿದ್ದು ಹಾರೋಹಳ್ಳಿ ಮತ್ತು ಇನ್ನೊಂದು ತಾಲೂಕು ಅಷ್ಟೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಘೋಷಣೆ ಮಾಡಿ ಬಿಟ್ಟಿದ್ದರು. ಆದರೆ ನಾವು ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಇದರ ಕ್ರೆಡಿಟ್ ನಮಗೇ ಸಲ್ಲುತ್ತದೆ ಎಂದರು.

    ಘೋಷಣೆ ಮಾಡಿದ್ರೆ ಸಾಕೇ? ಕೇವಲ ಘೋಷಣೆ ಮಾಡಿ ಬಿಟ್ಟರೆ ಸಾಕೇ, ಅನುಮೋದನೆ ನೀಡಿ ಕೆಲಸ ಮಾಡಿದ್ದೇವೆ. ಕೇವಲ ಒಂದು ದಿನದಲ್ಲಿ ಆಗುವ ಕೆಲಸವೇ ಇದು. ವೇಗವಾಗಿ ಪ್ರಕ್ರಿಯೆ ಮುಗಿಸಿ ಎಲ್ಲ ತಯಾರಿ ಮಾಡಿಕೊಂಡು ಸಡಗರದಿಂದ ಲೋಕಾರ್ಪಣೆ ಮಾಡಿದ್ದೇವೆ ಎಂದು ಡಾ. ಸಿಎನ್‌ಎ ಹೇಳಿದರು.

    ಅಭಿವೃದ್ಧಿಗೆ ಕೋಟ್ಯಂತರ ರೂ.: ಶೈಕ್ಷಣಿಕ ಕ್ಷೇತ್ರದಲ್ಲಿ ಸಾಗರದೋಪಾದಿಯಲ್ಲಿ ಕೆಲಸ ಮಾಡಿದ್ದು ರಾಜೀವ್‌ಗಾಂಧಿ ವಿಶ್ವವಿದ್ಯಾಲಯ ಸ್ಥಾಪಿಸುವುದರ ಜತೆಗೆ 270 ಎಕರೆ ಜಾಗದಲ್ಲಿ ವೈದ್ಯಕೀಯ ಕಾಲೇಜಿಗಾಗಿ 300 ಕೋಟಿ ರೂ. ಬಿಡುಗಡೆಯಾಗಿದೆ. ಸಂಸ್ಕೃತ ವಿಶ್ವವಿದ್ಯಾಲಯಕ್ಕಾಗಿ 100 ಎಕರೆ ಭೂಮಿ ಮಂಜೂರು ಮಾಡಿದ್ದು ಕೆಲಸ ಪ್ರಾರಂಭವಾಗಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು. ರಾಮನಗರಕ್ಕೆ 450 ರೂ. ವೆಚ್ಚದಲ್ಲಿ ಮನೆ ಮನೆಗೆ ಕುಡಿಯುವ ನೀರು ಒದಗಿಸುವ ಕೆಲಸ ಬಿಜೆಪಿ ಸರ್ಕಾರ ಮಾಡಿದೆ. ವೈ.ಜಿ.ಗುಡ್ಡ, ಮಂಚನಬೆಲೆ ಜಲಾಶಯ ಕುಡಿಯುವ ನೀರಿನ ಯೋಜನೆ, ದೊಡ್ಡ ಮರಳವಾಡಿಯಲ್ಲಿ 112 ಕೋಟಿ ರೂ. ಕುಡಿಯುವ ನೀರಿನ ಯೋಜನೆ ಜಾರಿಯಲ್ಲಿದೆ. ಈ ಭಾಗದಲ್ಲಿ ಬೇಸಿಗೆ ಬಂತೆಂದರೆ ಕುಡಿಯುವ ನೀರಿಗಾಗಿ ಹಾಹಾಕಾರವಿದ್ದು, ಇದನ್ನು ಮನಗಂಡು ಸರ್ಕಾರ ಮನೆ ಮನೆಗೂ ನಲ್ಲಿಯ ಮೂಲಕ ನೀರು ಹರಿಯಬೇಕು ಎಂಬ ಸದಾಶಯದೊಂದಿಗೆ ಕುಡಿಯುವ ನೀರಿನ ಯೋಜನೆಗೆ ಕೋಟ್ಯಂತರ ರೂ.ಗಳನ್ನು ವಿನಿಯೋಗಿಸಿ ಕಾಮಗಾರಿ ನಡೆಯುತ್ತಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

    ಜೆಡಿಎಸ್-ಕಾಂಗ್ರೆಸ್‌ಗೆ ಟಾಂಗ್: ಇಡೀ ವಿಶ್ವದಲ್ಲೇ ರಾಮನಗರ ಜಿಲ್ಲೆ ಕೈಗಾರಿಕೆಯಲ್ಲಿ ಮೊದಲ ಸ್ಥಾನ ಪಡೆದಿದೆ. ಹಾರೋಹಳ್ಳಿ, ಬಿಡದಿಯಲ್ಲಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಮಾಡಲಾಗಿದ್ದು, ಹೈಬ್ರಿಡ್ ಕಾರುಗಳ ಬಿಡಿಭಾಗಗಳು ಇಲ್ಲಿಂದಲೇ ಸರಬರಾಜಾಗಲಿದೆ. ಇದು ನಮ್ಮ ಸಾಧನೆ ಎಂದು ಡಾ. ಸಿ.ಎನ್.ಎ ಹೇಳಿದರು. ಕೆಲಸಕ್ಕಾಗಿ ವಲಸೆ ಹೋಗುತ್ತಿದ್ದ ಕಾಲವೊಂದಿತ್ತು. ಆದರೆ, ಈಗ ಹಾರೋಹಳ್ಳಿ ಮತ್ತು ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಹಲವಾರು ಕೈಗಾರಿಕೆಗಳು ತಲೆ ಎತ್ತಿದ್ದು ಟೊಯೋಟಾ ಸೇರಿ ಪ್ರತಿಷ್ಠಿತ ಕಾರ್ಖಾನೆಗಳು ಸಾವಿರಾರು ಜನರಿಗೆ ಉದ್ಯೋಗ ನೀಡಿವೆ. ಅಭಿವೃದ್ಧಿ ಕೆಲಸದಲ್ಲಿ ಜೆಡಿಎಸ್, ಕಾಂಗ್ರೆಸ್ ಪಕ್ಷದವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದು, ನಮ್ಮ ಕೆಲಸಗಳನ್ನು ನೋಡಿ ಸಹಿಸಲಾಗುತ್ತಿಲ್ಲ ಎಂದು ಎಂದು ಅಶ್ವತ್ಥನಾರಾಯಣ ಟಾಂಗ್ ನೀಡಿದರು. ಕೃಷಿ ಮಾರುಕಟ್ಟೆ, ಹೈಟೆಕ್ ರೇಷ್ಮೆ ಮಾರುಕಟ್ಟೆ , ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮಾವು ಸಂಸ್ಕರಣ ಘಟಕ, ಇಂಡೋ-ಜರ್ಮನ್ ಟೆಕ್ನಾಲಜಿ ಕೇಂದ್ರ, ಜಲಜೀವನ್ ಸೇರಿದಂತೆ ಹಲವಾರು ಕೆಲಸಗಳನ್ನು ಮಾಡಿದ್ದು ಬೇರೆ ಸರ್ಕಾರವಿದ್ದಿದ್ದರೆ 30 ವರ್ಷಗಳಿಗೂ ಹೆಚ್ಚು ಕಾಲ ಬೇಕಾಗಿತ್ತು ಎಂದರು.

    ಶಾಸಕಿ ಅನಿತಾ ಕುಮಾರಸ್ವಾಮಿ, ರೇಷ್ಮೆ ಉದ್ದಿಮೆಗಳ ನಿಗಮದ ಅಧ್ಯಕ್ಷ ಗೌತಮ್ಗೌಡ, ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್, ಜಿಪಂ ಸಿಇಒ ದಿಗ್ವಿಜಯ್ ಭೋಡ್ಕೆ, ತಹಸೀಲ್ದಾರ್ ಎಂ.ವಿಜಯಣ್ಣ ಮುಂತಾದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts