More

    ಹಾರೋಬೆಲೆ ಗ್ರಾಮದ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ಹಿಂದಿದೆ ಷಡ್ಯಂತ್ರ

    ಕನಕಪುರ: ಹಿಂದು ಸಂಸ್ಕೃತಿಯಿರುವ ಜಾಗದಲ್ಲಿ ಯೇಸು ಪ್ರತಿಮೆ ನಿರ್ಮಿಸುವ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ ಎಂದು ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್ ಆರೋಪಿಸಿದರು.

    ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲ ಬೆಟ್ಟಕ್ಕೆ (ಮುನೇಶ್ವರ ಬೆಟ್ಟಕ್ಕೆ) ಗುರುವಾರ ಭೇಟಿ ನೀಡಿದ್ದ ರುದ್ರೇಶ್ ನೇತೃತ್ವದ ನಿಯೋಗ ಸುತ್ತಲ ಪರಿಸರವನ್ನು ಪರಿಶೀಲಿಸಿ. ಪ್ರತಿಮೆ ಸ್ಥಾಪನೆಯ ಕಾಮಗಾರಿಗಳನ್ನು ವೀಕ್ಷಿಸಿತು.

    ನಂತರ ಸುದ್ದಿಗಾರರ ಜತೆ ಮಾತನಾಡಿದ ರುದ್ರೇಶ್, ಬಹಳ ಹಿಂದಿನಿಂದಲೂ ಬೆಟ್ಟದ ಸುತ್ತಮುತ್ತಲ ಗ್ರಾಮಸ್ಥರು ಈ ಸ್ಥಳದಲ್ಲಿ ಮುನೇಶ್ವರ ಸ್ವಾಮಿಯನ್ನು ಪೂಜಿಸುತ್ತಿದ್ದಾರೆ. ಕೆಲವು ವರ್ಷಗಳಿಂದೀಚೆಗೆ ಕ್ರೈಸ್ತ ಮಿಷನರಿಗಳು ಈ ಸ್ಥಳವನ್ನು ಆಕ್ರಮಿಸಿ ಕಪಾಲ ಬೆಟ್ಟ ಎಂದು ನಾಮಕರಣ ಮಾಡಿಕೊಂಡು ಹಿಂದುಗಳನ್ನು ಮತಾಂತರಗೊಳಿಸಿದ್ದು, ಇಂದು ಇಡೀ ಗ್ರಾಮ ಕ್ರೈಸ್ತಮಯವಾಗಿಸಿದ್ದಾರೆ ಎಂದು ಆರೋಪಿಸಿದರು.

    ಈಗ ಶಾಸಕ ಡಿ.ಕೆ. ಶಿವಕುಮಾರ್ ಅವರು ಯೇಸು ಪ್ರತಿಮೆ ನಿರ್ಮಾಣಕ್ಕೆ 236 ಎಕರೆಯಲ್ಲಿರುವ ಮುನೇಶ್ವರನ ಬೆಟ್ಟದಲ್ಲಿ 10 ಎಕರೆ ಸರ್ಕಾರಿ ಗೋಮಾಳವನ್ನು ಮಂಜೂರು ಮಾಡಿದ್ದಾರೆ. ಮಂಜೂರಾತಿಗೆ ಮುನ್ನವೇ ಆ ಜಾಗಕ್ಕೆ ಪಂಚಾಯಿತಿಯ ಎಲ್ಲ ಸವಲತ್ತುಗಳನ್ನು ನೀಡುವ ಮೂಲಕ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಸರ್ವಾಧಿಕಾರಿ ಧೋರಣೆ ತೋರಿದ್ದಾರೆ. ಎಷ್ಟೇ ಪ್ರಭಾವ ಬಳಿಸಿ ಪ್ರತಿಮೆ ನಿರ್ಮಾಣ ಮಾಡಲು ಮುಂದಾದರೂ ಬಿಜೆಪಿ ಇದನ್ನು ವಿರೋಧಿಸುತ್ತದೆ. ಹಿಂದು ಸಂಪ್ರದಾಯದ ಜಾಗದಲ್ಲಿ ಅನ್ಯ ಸಮುದಾಯಕ್ಕೆ ಅವಕಾಶ ನೀಡಬಾರದು. ಇಲ್ಲಿನ ವಸ್ತುಸ್ಥಿತಿ ಬಗ್ಗೆ ತಾಲೂಕು ಆಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದು, ಪಕ್ಷದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಂದಾಯ ಸಚಿವರಿಗೆ ಇಲ್ಲಿನ ವಾಸ್ತವ ಸ್ಥಿತಿಯ ವರದಿ ನೀಡಲಾಗುವುದು ಎಂದರು.

    ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಗನ್ನಾಥ್, ಮುರಳೀಧರ್, ಜಿಲ್ಲಾ ಉಪಾಧ್ಯಕ್ಷರಾದ ಎಸ್.ಆರ್.ನಾಗರಾಜು, ವಿಜಯಕುಮಾರ್, ಒಬಿಸಿ ಅಧ್ಯಕ್ಷ ನಾಗರಾಜ್, ನಗರಾಧ್ಯಕ್ಷ ಮಂಜುನಾಥ್, ತಾಲೂಕು ಅಧ್ಯಕ್ಷ ಪ್ರವೀಣ್ ಗೌಡ, ರಾಮನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕ್ಯಾಂಟೀನ್, ಮಾಗಡಿ ತಾಲೂಕು ಅಧ್ಯಕ್ಷ ರಂಗರಾಮಯ್ಯ, ಚನ್ನಪಟ್ಟಣ ತಾಲೂಕು ಅಧ್ಯಕ್ಷ ಆನಂದ ಸ್ವಾಮಿ, ಕನಕಪುರ ಗ್ರಾಮಾಂತರ ಅಧ್ಯಕ್ಷ ಶಿವರಾಮ್, ನಗರಸಭಾ ಸದಸ್ಯೆ ಮಾಲತಿ ಆನಂದ್‌ಪೈ, ಮುಖಂಡರಾದ ರವೀಂದ್ರಬಾಬು, ಡಿ. ಶ್ರೀನಿವಾಸ್, ಕೋಟೆ ಮಂಜು, ನಸ್ರೀನಾ ತಾಜ್, ರಾಜೇಶ್, ಮೋಹನ್, ಕಿರಣ್, ಕೃಷ್ಣ, ಆಟೋ ಕುಮಾರ್, ರಾಮು, ಶೇಖರ್, ಚಿಕ್ಕಣ್ಣ ಸೇರಿ ನೂರಾರು ಕಾರ್ಯಕರ್ತರು ಇದ್ದರು.

    3-4 ವರ್ಷಗಳಿಂದಲೇ ಅಕ್ರಮ ಕಾಮಗಾರಿ: ಕಳೆದ 3-4 ವರ್ಷಗಳಿಂದ ಕಪಾಲ ಬೆಟ್ಟದಲ್ಲಿ ಅಕ್ರಮವಾಗಿ ಕಾಮಗಾರಿ ನಡೆಯುತ್ತಿದ್ದು, ಕಲ್ಲು ಬಂಡೆಗಳನ್ನು ತಂದು ಕೆತ್ತನೆ ಕೆಲಸ ಆರಂಭಿಸಲಾಗಿದೆ. ಅಕ್ರಮ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದು ಕೊಳವೆಬಾವಿಯನ್ನು ಸಹ ಕೊರೆಸಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಟ್ರಸ್ಟ್ ವೊಂದಕ್ಕೆ ಜಮೀನು ಮಂಜೂರಾಗಿದೆ. ಇಲ್ಲಿ ನಡೆಯುತ್ತಿರುವ ಅಕ್ರಮ ಕಾಮಗಾರಿಗೆ ಯಾವ ಇಲಾಖೆ ಅನುಮತಿ ನೀಡಿದೆ ಎನ್ನುವುದನ್ನು ಬಹಿರಂಗಪಡಿಸಿಲ್ಲ. ಸಾಮಾನ್ಯ ಜನರು ಒಂದು ಖಾತೆ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿದರೆ ತಿಂಗಳುಗಟ್ಟಲೆ ಅಲೆಸುವ ಅಧಿಕಾರಿಗಳು ಈ ಗ್ರಾಮದಲ್ಲಿ ಮತಾಂತರಗೊಂಡಿರುವ ಜನರಿಗೆ ಮಾತ್ರ ಹಕ್ಕುಪತ್ರ ನೀಡಿರುವುದು ಅಕ್ಷ್ಯಮ ಅಪರಾಧ ಎಂದು ರುದ್ರೇಶ್ ದೂರಿದರು. ಜಿಲ್ಲಾಡಳಿತ ಕೂಡಲೇ ಇಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ನಿಲ್ಲಿಸಿ ಅಕ್ರಮವಾಗಿ ಸಂಗ್ರಹಿಸಿರುವ ಕಲ್ಲು ಬಂಡೆಗಳು ಹಾಗೂ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಬೇಕೆಂದು ಒತ್ತಾಯಿಸಿದರು.

    ಜಿಲ್ಲೆಯಾದ್ಯಂತ ಹೋರಾಟ: 
    ಬಾಲಗಂಗಾಧರನಾಥ ಸ್ವಾಮೀಜಿ, ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ, ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ, ಬೆಂಗಳೂರು ನಿರ್ಮಾತೃ ಕೆಂಪೇಗೌಡ, ಶಿಕ್ಷಣ ತಜ್ಙ ಎಸ್. ಕರಿಯಪ್ಪನವರಂಥ ಮಹನೀಯರು ಜಿಲ್ಲೆಯಲ್ಲಿ ಜನ್ಮ ತಾಳಿದ್ದು, ಇವರಲ್ಲಿ ಯಾರದಾದರೂ ಪ್ರತಿಮೆಯನ್ನು ಸ್ಥಾಪಿಸುವುದಾದರೆೆ ಇಡೀ ಜಿಲ್ಲೆ ಪಕ್ಷಾತೀತವಾಗಿ ಶಿವಕುಮಾರ್ ಜತೆ ನಿಲ್ಲಲಿದೆ. ಮಾಗಡಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶ್ರೀ ಶಿವಕುಮಾರ ಸ್ವಾಮೀಜಿಯವರ 111 ಅಡಿ ಪ್ರತಿಮೆಗೆ ಪೈಪೋಟಿಯೆಂಬಂತೆ 114 ಅಡಿ ಯೇಸು ಪ್ರತಿಮೆಯನ್ನು ಸ್ಥಾಪಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಜಿಲ್ಲೆಯ ಜನರಿಗೆ ಸತ್ಯದ ಅರಿವು ಮೂಡಿಸುವ ಸಲುವಾಗಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರುದ್ರೇಶ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts