More

    ನಾವೆಲ್ಲರು ಒಂದೇ ಎನ್ನುವುದೆ ಸಾಮರಸ್ಯೆ

    ಕೊಡಗು : ಎಲ್ಲರು ಒಂದೇ ಎನ್ನುವ ಸಾಮರಸ್ಯ, ಸೌಹಾರ್ದತೆ, ಭಾತೃತ್ವ, ಸಹೋದರತೆಯಿಂದ ಕೃಷಿ ಬದುಕು ನಡೆಸಿದಾಗ ಹಳ್ಳಿಯಲ್ಲಿ ಜನಪದ ಸಂಸ್ಕೃತಿ ಹಾಗೂ ಗ್ರಾಮಸಿರಿಯ ಸಿರಿವಂತಿಕೆಯನ್ನು ಕಾಣಬಹುದಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ.ಶಶಿಧರ್ ಹೇಳಿದರು.


    ಸುವರ್ಣ ಕರ್ನಾಟಕ-50 ರ ಸಂಭ್ರಮ ಪ್ರಯುಕ್ತ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಹೆಬ್ಬಾಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು, ಹೆಬ್ಬಾಲೆ, ತೊರೆನೂರು ಮತ್ತು ಶಿರಂಗಾಲ ಗ್ರಾಮ ಪಂಚಾಯಿತಿ, ಹೆಬ್ಬಾಲೆ ಗ್ರಾಮಸಿರಿ ಆಚರಣಾ ಸಮಿತಿಯಿಂದ ಹೆಬ್ಬಾಲೆ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಗ್ರಾಮೀಣ ಜಾನಪದ ಗ್ರಾಮಸಿರಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.


    ಹೆಬ್ಬಾಲೆ, ತೊರೆನೂರು ಹಾಗೂ ಶಿರಂಗಾಲ ವಿಶಿಷ್ಟ ಸಂಪ್ರದಾಯ, ಸಂಸ್ಕೃತಿ, ಕಲೆ ಆಚರಣೆಯ ಮೂಲಕ ಗ್ರಾಮೀಣ ಸೊಗಡನ್ನು ಎತಿ ್ತಹಿಡಿಯುವ ಗ್ರಾಮಗಳಾಗಿವೆ. ಜಾತಿ, ಧರ್ಮ, ಭಾಷೆಯನ್ನು ಮೀರಿ ಎಲ್ಲರೂ ಒಂದೆಡೆ ಸೇರಿ ಗ್ರಾಮಸಿರಿ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ವಿಚಾರವಾಗಿದೆ. ಎಲ್ಲರೂ ಒಟ್ಟುಗೂಡುವುದೇ ಭಾರತ ದೇಶದ ಪ್ರತೀಕವಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವುದೇ ಭಾರತದ ವೈಶಿಷ್ಟ್ಯವಾಗಿದೆ ಎಂದು ತಿಳಿಸಿದರು.


    ಜಿ.ಪಂ.ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಮಾತನಾಡಿ, ಇಂತಹ ಗ್ರಾಮಸಿರಿ ಕಾರ್ಯಕ್ರಮಗಳು ಎಲ್ಲರನ್ನೂ ಒಗ್ಗೂಡಿಸುವ ಮೂಲಕ ಪರಸ್ಪರ ಪ್ರೀತಿ, ವಿಶ್ವಾಸ ಬೆಳೆಸುವ ಮೂಲಕ ಹಳ್ಳಿಯ ಸೊಗಡನ್ನು ಪ್ರತಿಬಿಂಬಿಸುತ್ತವೆ. ತಾವು ಜಿ.ಪಂ.ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹೆಬ್ಬಾಲೆ ಗ್ರಾಮವು ಸಾಕಷ್ಟು ಅಭಿವೃದ್ಧಿ ಪಥದತ್ತ ಸಾಗಿತ್ತು. ಈ ಭಾಗಕ್ಕೆ ಮತ್ತಷ್ಟು ಸರ್ಕಾರಿ ಯೋಜನೆಗಳು ಅನುಷ್ಠಾನಗೊಳ್ಳಲಿವೆ. ನಾಡಿನ ಕಲೆ, ಸಂಸ್ಕೃತಿ, ಭಾಷೆ, ಜಾನಪದವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವಂತಾಗಬೇಕು. ಇದರಿಂದ ಉತ್ತಮ ಸಂಸ್ಕೃತಿ ಮತ್ತು ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.


    ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಗ್ರಾಮಸಿರಿ ಕಾರ್ಯಕ್ರಮಗಳು ನಾಡಿನ ಕಲೆ, ಸಂಸ್ಕೃತಿಯನ್ನು ಇಂದಿನ ಯುವ ಜನಾಂಗಕ್ಕೆ ಪರಿಚಯಿಸಲು ಉತ್ತಮ ವೇದಿಕೆಯಾಗಿವೆ. ಮುಂದಿನ ದಿನಗಳಲ್ಲಿ ಹೆಬ್ಬಾಲೆ ಭಾಗದಲ್ಲಿ ತಾಲೂಕು ಮತ್ತು ಜಿಲ್ಲಾಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.


    ಗ್ರಾಮಸಿರಿ ಕಾರ್ಯಕ್ರಮದ ಆರ್ಥಿಕ ಸಮಿತಿ ಅಧ್ಯಕ್ಷ ಎಚ್.ಕೆ.ನಟೇಶ್‌ಗೌಡ ಮಾತನಾಡಿ, ಈ ಗ್ರಾಮದಲ್ಲಿ ಗ್ರಾಮ ಸಿರಿಯನ್ನು ಯಶಸ್ವಿಯಾಗಿ ಸಂಘಟಿಸಲು ಸಹಕರಿಸಿದ ಗ್ರಾಮಸ್ಥರು ಹಾಗೂ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.


    ಗ್ರಾಮದ ದೇವಸ್ಥಾನ ಸಮಿತಿಯ ಅಧ್ಯಕ್ಷ ಯಜಮಾನ್ ಬಸವರಾಜು ಮಾತನಾಡಿ, ಗ್ರಾಮದಲ್ಲಿ ಇಂತಹ ಜನಪದ ಕಾರ್ಯಕ್ರಮದ ಮೂಲಕ ರೈತರ ಜೀವನದ ಪರಿಶ್ರಮ ಹಾಗೂ ಕೃಷಿ ಬದುಕನ್ನು ಪರಿಚಯಿಸಿದ್ದಕ್ಕೆ ಶ್ಲಾಘಿಸಿದರು. ಆಹಾರ ಸಮಿತಿಯ ಅಧ್ಯಕ್ಷ ಟಿ.ಬಿ.ಜಗದೀಶ್ ಮಾತನಾಡಿದರು.


    ಗ್ರಾ.ಪಂ.ಅಧ್ಯಕ್ಷೆ ಅರುಣಕುಮಾರಿ, ಡಿವೈಎಸ್ಪಿ ಗಂಗಾಧರಪ್ಪ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರೇವತಿ ರಮೇಶ್, ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್, ಕಾರ್ಯದರ್ಶಿಗಳಾದ ಎಸ್.ನಾಗರಾಜ್, ಟಿ.ವಿ.ಶೈಲಾ, ಕೋಶಾಧಿಕಾರಿ ಕೆ.ವಿ.ಉಮೇಶ್, ನಿರ್ದೇಶಕ ಎಂ.ಎನ್.ಕಾಳಪ್ಪ, ಕಸಾಪ ಹೆಬ್ಬಾಲೆ ಹೋಬಳಿ ಘಟಕದ ಅಧ್ಯಕ್ಷ ಎಂ.ಎನ್.ಮೂರ್ತಿ, ಉದ್ಯಮಿ ಎಚ್.ಎನ್.ವರೇಂದ್ರ, ಎ.ಪಿ.ಸಿ.ಎಂ.ಎಸ್.ನ ನಿರ್ದೇಶಕ ಸಿ.ಎನ್.ಲೋಕೇಶ್, ಸಮಿತಿಯ ಪ್ರಮುಖರಾದ ಟಿ.ಡಿ.ಸೋಮಣ್ಣ ಇತರರು ಇದ್ದರು. ತಾಲೂಕು ಕಸಾಪ ಕಾರ್ಯದರ್ಶಿ ಎಸ್.ನಾಗರಾಜ್ ಸ್ವಾಗತಿಸಿದರು. ಕಸಾಪ ಕಾರ್ಯದರ್ಶಿ ಟಿ.ವಿ.ಶೈಲಾ ನಿರ್ವಹಿಸಿದರು. ಕಸಾಪ ನಿರ್ದೇಶಕ ಎಂ.ಎನ್.ಕಾಳಪ್ಪ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts