More

    ಅನ್‌ಲಾಕ್ ನಿಯಮ ಜಾರಿ

    ಹರಿಹರ: ಇಂದಿನಿಂದ ತಾಲೂಕಿನಲ್ಲಿ ವ್ಯಾಪಾರ ವಹಿವಾಟಿಗೆ ಯಾವುದೇ ಸಮಯ ಮಿತಿ ಇರುವುದಿಲ್ಲ. ಲಾಕ್‌ಡೌನನ್ನು ತೆರವುಗೊಳಿಸಲಾಗಿದೆ ಎಂದು ಶಾಸಕ ಎಸ್.ರಾಮಪ್ಪ ತಿಳಿಸಿದರು.

    ನಗರದ ತಾಲೂಕು ಕಚೇರಿಯಲ್ಲಿ ಸೋಮವಾರ ಬೆಳಗ್ಗೆ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಅನ್‌ಲಾಕ್ ನಿಯಮ ಜಾರಿಗೆ ತಂದಿದ್ದು, ಇದನ್ನೇ ತಾಲೂಕಿನಲ್ಲೂ ಪಾಲಿಸಲಾಗುತ್ತಿದೆ ಎಂದರು.

    ಸರ್ಕಾರದ ಮಾರ್ಗಸೂಚಿಯಂತೆ ತಾಲೂಕು ಆಡಳಿತ ಕ್ರಮ ಕೈಗೊಳ್ಳಲಿದೆ. ಸಾರ್ವಜನಿಕರು ಕರೊನಾ ವೈರಾಣು ವಿರುದ್ಧ ಹೋರಾಡಲು ಮಾನಸಿಕವಾಗಿ ಸಜ್ಜಾಗಬೇಕು. ಅನ್‌ಲಾಕ್ ಇದೆ ಎಂದು ಬೇಕಾಬಿಟ್ಟಿ ಓಡಾಡುವುದು, ಗುಂಪು-ಗುಂಪಾಗಿ ನಿಲ್ಲುವುದು, ಮಾಸ್ಕ್ ಧರಿಸದೇ ತಿರುಗಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

    ಗೂತ್ತೂರಿನ ಕೋವಿಡ್‌ಕೇರ್ ಸೆಂಟರ್‌ನಲ್ಲಿ ಕುಡಿಯಲು ಬಿಸಿ ನೀರು ಇತ್ಯಾದಿ ಸೌಲಭ್ಯದ ಕೊರತೆ ಇದೆ ಎಂಬ ದೂರುಗಳಿವೆ. ಈ ಸಮಸ್ಯೆ ಶೀಘ್ರವೇ ಬಗೆಹರಿಸಬೇಕು. ರೋಗಿಗಳ ಆರೋಗ್ಯ, ಆರೈಕೆಯಲ್ಲಿ ವ್ಯತ್ಯಾಸವಾದರೆ ಸಹಿಸೋಲ್ಲ. ಸೋಂಕಿತರಿಗೆ ದಿನಕ್ಕೆರಡು ಬಾರಿ ಉತ್ತಮ ಆಹಾರ, ಕಷಾಯ ನೀಡಬೇಕು. ಇದಕ್ಕೇನಾದರೂ ಹಣದ ತೊಂದರೆ ಇದ್ದರೆ ಹೇಳಿ ನಾನು ಡಿಸಿ ಅವರೊಂದಿಗೆ ಮಾತನಾಡುತ್ತೇನೆ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಸೋಂಕು ದೃಢಪಟ್ಟಾಗ ರಾಜ ಮರ್ಯಾದೆಯಿಂದ ಕರೆದೊಯ್ದು ಗುಣವಾದ ಬಳಿಕ ಆಂಬುಲೆನ್ಸ್‌ನಲ್ಲಿ ಕರೆ ತಂದು ಎಲ್ಲೆಂದರಲ್ಲಿ ಇಳಿಸಿ ಹೋಗುತ್ತಿದ್ದೀರಿ. ಇದರಿಂದ ರೋಗಿಗಳು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇವರನ್ನು ಯಾರೂ ಮಾತನಾಡಿಸದ ಸ್ಥಿತಿ ಇದೆ. ಇಂಥ ಎಡವಟ್ಟು ಇನ್ನೊಮ್ಮೆ ನಡೆದರೆ ಸೂಕ್ತ ಕ್ರಮ ಖಚಿತ ಎಂದು ಎಚ್ಚರಿಸಿದರು.
    ಕೋವಿಡ್‌ನಿಂದ ಗುಣಮುಖವಾದವರನ್ನು ನೇರ ಅವರ ಮನೆಗೆ ಬಿಟ್ಟು ಸುತ್ತಮುತ್ತಲಿನವರಿಗೆ ರೋಗಿಯ ಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಬೇಕು. ಜತೆಗೆ ಸೋಂಕು ತಗುಲಿದ ವ್ಯಕ್ತಿ ಮತ್ತು ಸುತ್ತಲಿನ ಎರಡು ಮನೆಗಳನ್ನಷ್ಟೇ ಸೀಲ್‌ಡೌನ್ ಮಾಡಿ ಎಂದು ತಿಳಿಸಿದರು.

    ತಹಸೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಮಾತನಾಡಿ, ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಅಧಿಕಾರಿಗಳು ಗಂಟಲು ದ್ರವ ಪರೀಕ್ಷೆಗೆ ತೆರಳಿದಾಗ ಸಾರ್ವಜನಿಕರು ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಆ ಭಾಗದ ಜನಪ್ರತಿನಿಧಿಗಳು, ಮುಖಂಡರು ನಿವಾಸಿಗಳಿಗೆ ತಿಳಿ ಹೇಳಿದರೆ ತಪಾಸಣೆಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

    ಟಿಎಚ್‌ಒ ಡಾ.ಚಂದ್ರಮೋಹನ್, ಸಿಪಿಐ ಶಿವಪ್ರಸಾದ್, ಆಸ್ಪತ್ರೆಯ ವೈದ್ಯಾಧಿಕಾರಿ ಹನುಮನಾಯ್ಕ, ಸಮಾಜಕಲ್ಯಾಣ ಇಲಾಖೆ ಪರಮೇಶ್ವರಪ್ಪ, ಬಿಸಿಎಂ ಅಧಿಕಾರಿ ಜಗದೀಶ್ ಇತರರು ಸಭೆಯಲ್ಲಿದ್ದರು.

    ವಾರದ ಸಂತೆ ರದ್ದು: ಸಂತೆಯಲ್ಲಿ ದೈಹಿಕ ಅಂತರ ಕಾಪಾಡುವುದು ಅಸಾಧ್ಯ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದರಿಂದ ಸರ್ಕಾರದಿಂದ ಮುಂದಿನ ಆದೇಶ ಬರುವವರೆಗೂ ವಾರದ ಸಂತೆಯನ್ನು ರದ್ದು ಪಡಿಸಲಾಗಿದೆ ಎಂದು ಪೌರಾಯುಕ್ತೆ ಎಸ್.ಲಕ್ಷ್ಮಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts