More

    ಹರಿಹರದಲ್ಲಿ ಮೇರಿ ಮಾತೆಯ ಜಾತ್ರಾ ಮಹೋತ್ಸವ ಸಂಭ್ರಮ

    ಹರಿಹರ: ನಗರದ ಆರೋಗ್ಯ ಮಾತೆ ಬಸಲಿಕಾ ಪುಣ್ಯಕ್ಷೇತ್ರದಲ್ಲಿ ಮೇರಿ ಜಾತ್ರಾ ಮಹೋತ್ಸವ ಶುಕ್ರವಾರ ಸಂಭ್ರಮದಿಂದ ನೆರವೇರಿತು. ರಾಜ್ಯ, ಹೊರರಾಜ್ಯಗಳಿಂದಲೂ ಆಗಮಿಸಿದ್ದ ಸಾವಿರಾರು ಭಕ್ತರು ಮಾತೆಯ ದರ್ಶನ ಪಡೆದರು.

    ಬೆಳಗ್ಗೆ 5ರಿಂದಲೇ ಚರ್ಚ್ ಎದುರು ಮೇರಿ ಮಾತೆಯ ದರ್ಶನ ಪಡೆಯಲು ಚಿಕ್ಕ ಮಕ್ಕಳು, ಹಿರಿಯರು ಒಂದು ಕಿ.ಮೀಗೂ ಅಧಿಕ ಉದ್ದದ ಸಾಲಿನಲ್ಲಿ ನಿಂತಿದ್ದರು.

    ಬೆಳಗ್ಗೆ 5.15ರಿಂದ ಭದ್ರಾವತಿ ಧರ್ಮಾಧ್ಯಕ್ಷ ಜೋಸೆಫ್ ಅರುಮಚಾಡತ್ ಅವರಿಂದ ಕನ್ನಡ, ತೆಲುಗು, ಮಲಯಾಳಂ ಮತ್ತು ಶಿವಮೊಗ್ಗ ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೆರಾವೊ ಎಸ್.ಜೆ. ಅವರಿಂದ ತಮಿಳು, ಇಂಗ್ಲಿಷ್ ಭಾಷೆಯಲ್ಲಿ ಪೂಜಾರ್ಪಣೆ, ಬಲಿಪೂಜೆ ಸಲ್ಲಿಸಲಾಯಿತು.

    ನಂತರ 11ಗಂಟೆಗೆ ಹಬ್ಬದ ಸಹಬಲಿ ಪೂಜೆ ನೆರವೇರಿತು. ಮೆರವಣಿಗೆ ನಂತರ ಚರ್ಚ್‌ನಲ್ಲಿ ಪೂಜೆ ಸಲ್ಲಿಸಿ ಆಗಮಿಸಿದ್ದ ಭಕ್ತರಿಗೆ ಪುಷ್ಪ ನೀಡುವ ಮೂಲಕ ಆಶೀರ್ವಾದ ಮಾಡಲಾಯಿತು.

    ರಥೋತ್ಸವ: ಸಂಜೆ ಸೇವಂತಿ ಹೂವಿನಿಂದ ಅಲಂಕೃತ ತೇರಿನಲ್ಲಿ ಮೇರಿ ಮಾತೆ ಮೂರ್ತಿಯನ್ನಿಟ್ಟು ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ರಥೋತ್ಸವದುದ್ದಕ್ಕೂ ಆರೋಗ್ಯ ಮಾತೆ ಬಸಲಿಕಾ ಚರ್ಚ್‌ನ ಪ್ರಧಾನ ಧರ್ಮಗುರು ಫಾದರ್ ಕೆ.ಎ.ಜಾರ್ಜ್ ನೇತೃತ್ವದಲ್ಲಿ ಭಕ್ತರು ದೇವರ ಹಾಡನ್ನು ಹೇಳುತ್ತ ಸಾಗಿದರು.

    ಭಕ್ತರ ಹರಕೆ: ಮೇರಿ ಮಾತೆಯ ದರ್ಶನಕ್ಕೆ ಬಂದ ಭಕ್ತರು ತುಂಗಭದ್ರಾ ನದಿಯಿಂದ ಚರ್ಚ್‌ವರೆಗೆ ದೀಡು ನಮಸ್ಕಾರ ಮತ್ತು ಮಂಡಿ ನಡಿಗೆಯ ಹಾಗೂ ಜವಳ ಹರಕೆ ಸೇವೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts