More

    ನಾಡು ನುಡಿಗಾಗಿ ಹೋರಾಟ ಅನಿವಾರ್ಯ

    ಹರಿಹರ: ಕನ್ನಡ ನಾಡು ನುಡಿಯ ಉಳಿವಿಗಾಗಿ ಹೋರಾಟ ಅನಿವಾರ್ಯವಾಗಿದೆ. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬ ಕುವೆಂಪುರವರ ನಾಡುನ್ನುಡಿಯಂತೆ ನಾವು ನಡೆದುಕೊಳ್ಳಬೇಕಿದೆ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.

    ನಗರದ ಗಾಂಧಿ ಮೈದಾನದಲ್ಲಿ ಭಾನುವಾರ ತಾಲೂಕು ಆಡಳಿತ, ರಾಷ್ಟ್ರೀಯ ಮತ್ತು ನಾಡ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ 65ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಶ್ರಮಿಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸುವ ಮೂಲಕ ಭಾಷೆ ಉಳಿವಿಗೆ ಪರೋಕ್ಷವಾಗಿ ಕಾರಣಿಕರ್ತರಾಗಿದ್ದಾರೆ. ಸರ್ಕಾರಿ ಅಧಿಕಾರಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಕಾನೂನನ್ನು ಶೀಘ್ರ ಜಾರಿಗೊಳಿಸಬೇಕಿದೆ ಎಂದರು.

    ಮುಖ್ಯಶಿಕ್ಷಕ ಎಸ್.ಎಚ್. ಹೂಗಾರ್ ಉಪನ್ಯಾಸ ನೀಡಿ, ಮಾತೃಭಾಷೆ ಆಯಾ ಭಾಷಿಕರ ಭಾವುಕ ಸಂಗತಿಗಳಲ್ಲಿ ಒಂದು. ಮಾಹಿತಿ ತಂತ್ರಜ್ಞಾನದ ಭರಾಟೆಯಲ್ಲಿರುವವರು, ದುಡ್ಡಿನ ಹಿಂದೆ ಓಡುವ ಜನ ಅನ್ನದ ಭಾಷೆ ಕನ್ನಡವಾಗಬೇಕು ಎಂದು ಹೇಳುತ್ತಾರೆ. ಹಾಗಾದರೆ ಭಾಷೆ ನೀಡುವ ಸಂಸ್ಕಾರ, ಸಂಸ್ಕೃತಿ, ವ್ಯಕ್ತಿತ್ವಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದರು.

    ಅನ್ನದ ಭಾಷೆ ಇಂಗ್ಲಿಷ್ ಅನ್ನು ಎರಡನೇ ಸ್ಥಾನದಲ್ಲಿ ಇಟ್ಟಿರುವ ಜಪಾನ್, ಜರ್ಮನಿ, ಫ್ರಾನ್ಸ್, ಚೈನಾ ತಮ್ಮ ಭಾಷೆಗಳನ್ನು ಬಳಸಿ ಅನ್ನಸಂಪಾದಿಸಿಕೊಳ್ಳುತ್ತಿಲ್ಲವೇ?. ಇದೇ ರೀತಿ ನಾವೂ ಸಹ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಉದ್ಯಮ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕನ್ನಡ ಬಳಸಿ ಕೆಲಸ ಮಾಡಬೇಕಾದುದು ನಮ್ಮೆಲ್ಲ ಜವಾಬ್ದಾರಿ ಎಂದರು.

    ನಾವೂ ಸಹ ನಮ್ಮ ಭಾಷೆಯನ್ನು ತಾತ್ಸಾರ ಮಾಡದೆ ಕನ್ನಡ ಸಿನಿಮಾ, ಕನ್ನಡ ಪುಸ್ತಕ, ಪತ್ರಿಕೆಗಳನ್ನು ಕೊಂಡು ಓದುವುದು, ಫೇಸ್ ಬುಕ್, ವಾಟ್ಸಾಪ್, ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಹೆಚ್ಚು ಕನ್ನಡ ಬಳಸುವ ಮೂಲಕ ಭಾಷೆ ಉಳಿಸಬೇಕು ಎಂದರು.

    ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಕನ್ನಡ ಸಾಹಿತ್ಯ ಪರಿಷತ್‌ನ ಸದಸ್ಯತ್ವವನ್ನು ಎಲ್ಲ ಕನ್ನಡಪರ ಸಂಘ ಸಂಸ್ಥೆಗಳ ಸದಸ್ಯರು ತೆಗೆದುಕೊಂಡು ಕನ್ನಡ ಕಟ್ಟುವ ಕೆಲಸ ಮಾಡಬೇಕು ಎಂದರು.

    ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಕನ್ನಡ ಮಧ್ಯಮದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಎಂ. ಅಭಿಷೇಕ್, ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕ ಪಡೆದ ಪ್ರತಿಭಾವಂತ 56 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

    ವೇದಿಕೆಯಲ್ಲಿ ತಾಪಂ ಅಧ್ಯಕ್ಷೆ ಎಂ. ಶ್ರೀದೇವಿ, ಎಪಿಎಂಸಿ ಅಧ್ಯಕ್ಷ ಹನುಮಂತ ರೆಡ್ಡಿ, ನಗರಸಭೆ ಸದಸ್ಯ ಬಾಬುಲಾಲ್, ಪೌರಾಯುಕ್ತೆ ಎಸ್. ಲಕ್ಷ್ಮಿ, ಬಿಇಒ ಯು. ಬಸವರಾಜಪ್ಪ, ಇಒ ಗಂಗಾಧರನ್, ಪರಮೇಶ್ವರಪ್ಪ, ಕಸಾಪ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts