More

    ಮಳೆ ಬಂದ್ರೆ ಇಲ್ಲಿ ಅಂತ್ಯಕ್ರಿಯೆಗೂ ಕಷ್ಟ; ನೊಂದ ಜನರ ಪರದಾಟ !

    ಕೀರ್ತಿಕುಮಾರ್ ಹರಿಹರ
    ಸ್ಮಶಾನ ಜಲಾವೃತ. ಹೆಣ ಹೂಳಲು ಜಾಗ ಇಲ್ಲ. ನೊಂದ ಜನರ ಪರದಾಟ. ಇದು ತಾಲೂಕು ಕೇಂದ್ರ ಹರಿಹರದಲ್ಲಿ ಮಳೆಗಾಲದಲ್ಲಿ ಎದುರಾಗುವ ಸ್ಥಿತಿ…

    ನಗರದ ತುಂಗಭದ್ರಾ ನದಿಯ ದಡದ ಮೂರು ಎಕರೆ ಪ್ರದೇಶದಲ್ಲಿ ಹಿಂದು ರುದ್ರಭೂಮಿಯನ್ನು ನಗರಸಭೆಯಿಂದ ನಿರ್ಮಿಸಲಾಗಿದ್ದು, ಪ್ರತಿ ಮಳೆಗಾಲದಲ್ಲಿ ನದಿಯ ನೀರು ಸ್ಮಶಾನವನ್ನು ಆವರಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಅಂತ್ಯಕ್ರಿಯೆಗೆ ಇಲ್ಲಿ ವಿರಾಮ ಹೇಳಬೇಕು.
    ಕೆಲವರು ತಮ್ಮ ಜಮೀನುಗಳಲ್ಲಿ ಶವ ಸಂಸ್ಕಾರ ಮಾಡಿದರೆ, ಮತ್ತೆ ಕೆಲವರು ನೀರಿನಿಂದ ಆವರಿಸಿರುವ ಸ್ಮಶಾನದಲ್ಲಿಯೇ ಕಷ್ಟಪಟ್ಟು ಅಂತ್ಯಕ್ರಿಯೆ ನಡೆಸುವ ಸಾಹಸಕ್ಕೆ ಇಳಿಯುತ್ತಾರೆ.

    ಕಳೆದೊಂದು ವಾರದಿಂದ ಮಲೆನಾಡು ಭಾಗದಲ್ಲಿ ಹೆಚ್ಚು ಮಳೆಯಾಗಿ ಭದ್ರಾ ಡ್ಯಾಂ ಭರ್ತಿಯಾಗಿದ್ದು, ಹೆಚ್ಚಿನ ನೀರನ್ನು ಹೊರಬಿಟ್ಟಿರುವ ಪರಿಣಾಮ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ದಡದಲ್ಲಿರುವ ಸ್ಮಶಾನ ಸಂಪೂರ್ಣವಾಗಿ ಜಲಾವೃತವಾಗಿದೆ.
    ಒಂದು ನಗರ ಅಥವಾ ಗ್ರಾಮದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸ್ಮಶಾನ ಇರಬೇಕು. ಆದರೆ, ಹರಿಹರ ನಗರದಲ್ಲಿ 1 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದ್ದರೂ ಒಂದೇ ಕಡೆ ಹಿಂದು ರುದ್ರಭೂಮಿ ಇರುವುದು ಸಮಸ್ಯೆ ತೀವ್ರತೆಗೆ ಕಾರಣವಾಗಿದೆ. ಬಹು ವರ್ಷಗಳಿಂದ ಹರಿಹರ ನಗರದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸ್ಮಶಾನ ಬೇಕೆಂದು ಸಾರ್ವಜನಿಕರ ಬೇಡಿಕೆ ಇದ್ದರೂ ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷೃದಿಂದ ಇಂದಿಗೂ ಈಡೇರಿಲ್ಲ.

    ನಗರದ ಹಿಂದು ರುದ್ರಭೂಮಿ ನಗರದ ಜನಸಂಖ್ಯೆಗೆ ಅನುಗುಣವಾಗಿ ನೋಡಿದರೆ ಚಿಕ್ಕದಾಗಿದೆ. ಇದರ ಪಕ್ಕದಲ್ಲಿರುವ ಜಮೀನನ್ನು ನೀಡಲು ಮಾಲೀಕರು ಮುಂದಾಗಿದ್ದಾರೆ. ಈ ಸಂಬಂಧ ಪೂರಕ ದಾಖಲೆಗಳನ್ನು ಈಗಾಗಲೇ ನಗರಸಭೆ, ತಾಲೂಕು, ಜಿಲ್ಲಾಡಳಿತಕ್ಕೆ ತಲುಪಿಸಲಾಗಿದೆ.
    | ಟಿ.ಜೆ ಮುರುಗೇಶಪ್ಪ ಉಪಾಧ್ಯಕ್ಷರು, ಹಿಂದು ರುದ್ರಭೂಮಿ ಅಭಿವೃದ್ಧಿ ಸಮಿತಿ

    ಸಮಸ್ಯೆ ಪರಿಹಾರಕ್ಕೆ ಈಗಾಗಲೇ ಆಡಳಿತ ವರ್ಗ ಕ್ರಮಕೈಗೊಂಡಿದೆ. ಸ್ಮಶಾನದ ಪಕ್ಕದ ಜಮೀನಿನ ಮಾಲೀಕರು ಕೂಡ ಸಹಕಾರ ನೀಡುತ್ತಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಒಪ್ಪಿಗೆ ದೊರೆತ ತಕ್ಷಣ ಕಾರ್ಯಪ್ರವೃತ್ತರಾಗುತ್ತೇವೆ.
    | ಡಾ.ಎಂ.ಬಿ.ಅಶ್ವತ್ಥ ತಹಸೀಲ್ದಾರ್

    ಅಂತ್ಯಕ್ರಿಯೆ ಎಂಬುದು ಗೌರವದ ಪ್ರತೀಕ. ಆದರೆ, ಈ ವೇಳೆ ನೊಂದ ಜನರು ಪರದಾಡುವ ಪರಿಸ್ಥಿತಿ ಮನಸ್ಸಿಗೆ ನೋವು ಉಂಟು ತರುತ್ತದೆ. ಸಮಸ್ಯೆ ಪರಿಹಾರಕ್ಕೆ ತಾಲೂಕು ಆಡಳಿತ ತಕ್ಷಣ ಮುಂದಾಗಬೇಕು.
    | ವೈ.ಕೃಷ್ಣಮೂರ್ತಿ ಕಾರ್ಯದರ್ಶಿ, ಹಿಂದು ರುದ್ರಭೂಮಿ ಅಭಿವೃದ್ಧಿ ಸಮಿತಿ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts