More

    ಕಿವೀಸ್ ಸರಣಿಗೆ ಇಂದು ಭಾರತ ತಂಡ ಆಯ್ಕೆ; ಯಾರಿಗೆ ಕೊಕ್, ಯಾರಿಗೆ ರೆಸ್ಟ್, ಯಾರು ಇನ್?

    ನವದೆಹಲಿ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಭಿಯಾನ ಮುಕ್ತಾಯಗೊಳಿಸಿದ ಬೆನ್ನಲ್ಲೇ ಭಾರತ ತಂಡ ಮುಂದಿನ ಸವಾಲುಗಳತ್ತ ಗಮನಹರಿಸಲಿದೆ. ನವೆಂಬರ್ 17ರಿಂದ ತವರಿನಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ 3 ಟಿ20 ಮತ್ತು 2 ಟೆಸ್ಟ್ ಪಂದ್ಯಗಳ ಸರಣಿಗೆ ಭಾರತ ತಂಡದ ಆಯ್ಕೆ ಮಂಗಳವಾರ ನಡೆಯುವ ನಿರೀಕ್ಷೆ ಇದೆ. ಹೊಸ ಕೋಚ್ ರಾಹುಲ್ ದ್ರಾವಿಡ್ ಗರಡಿಯಲ್ಲಿ ಟೀಮ್ ಇಂಡಿಯಾ ಆಡಲಿರುವ ಮೊದಲ ಸರಣಿ ಇದಾಗಿದ್ದು, ಮುಂದಿನ ವರ್ಷದ ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಕಟ್ಟುವ ಪ್ರಕ್ರಿಯೆಗೂ ಚಾಲನೆ ಸಿಗಲಿದೆ. ವಿರಾಟ್ ಕೊಹ್ಲಿ ಉತ್ತರಾಧಿಕಾರಿಯಾಗಿ ಟಿ20 ತಂಡಕ್ಕೆ ಹೊಸ ನಾಯಕನ ಆಯ್ಕೆಯೂ ನಡೆಯಲಿದೆ.

    ಹಾರ್ದಿಕ್‌ಗೆ ಕೊಕ್?
    ಟಿ20 ವಿಶ್ವಕಪ್‌ನಲ್ಲಿ ಪೂರ್ಣಪ್ರಮಾಣದ ಆಲ್ರೌಂಡರ್ ಪಾತ್ರದಲ್ಲಿ ಕಾಣಿಸಿಕೊಳ್ಳದೆ ಭಾರತ ತಂಡದ ಹಿನ್ನಡೆಗೆ ಕಾರಣರಾದ ಹಾರ್ದಿಕ್ ಪಾಂಡ್ಯ ಕೊಕ್ ಪಡೆಯುವ ನಿರೀಕ್ಷೆ ಇದೆ. ಅವರು ಇನ್ನು ಫಿಟ್ನೆಸ್ ಸಾಬೀತು ಪಡಿಸಿ, ಪೂರ್ಣಕಾಲಿಕ ಆಲ್ರೌಂಡರ್ ಆಗಿ ಸಾಮರ್ಥ್ಯ ನಿರೂಪಿಸದ ಹೊರತಾಗಿ ತಂಡಕ್ಕೆ ಮರಳುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಇದೇ ವೇಳೆ ಹಾರ್ದಿಕ್ ಸ್ಥಾನ ತುಂಬಬಲ್ಲ ವೇಗದ ಬೌಲಿಂಗ್ ಆಲ್ರೌಂಡರ್‌ಗಳತ್ತ ಆಯ್ಕೆಗಾರರು ಗಮನಹರಿಸಲಿದ್ದು, ಸದ್ಯಕ್ಕೆ ಕೆಕೆಆರ್ ಪರ ಆರಂಭಿಕ ಮತ್ತು ಅರೆಕಾಲಿಕ ವೇಗದ ಬೌಲರ್ ಆಗಿ ಮಿಂಚಿದ ವೆಂಕಟೇಶ್ ಅಯ್ಯರ್ ಈ ಸ್ಥಾನಕ್ಕೆ ನೆಚ್ಚಿನ ಆಯ್ಕೆ ಎನಿಸಿದ್ದಾರೆ.

    ಋತುರಾಜ್‌ಗೆ ಚಾನ್ಸ್?
    ಐಪಿಎಲ್ 14ನೇ ಆವೃತ್ತಿಯಲ್ಲಿ ಗರಿಷ್ಠ ರನ್ ಸಿಡಿಸಿ ಆರೆಂಜ್ ಕ್ಯಾಪ್ ಗೆದ್ದ ಸಿಎಸ್‌ಕೆ ತಂಡದ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಟಿ20 ತಂಡದಲ್ಲಿ ಸ್ಥಾನ ಪಡೆಯುವುದು ಖಚಿತವೆನಿಸಿದೆ. ಐಪಿಎಲ್‌ನಲ್ಲಿ ಮಿಂಚಿರುವ ವೇಗಿಗಳಾದ ಹರ್ಷಲ್ ಪಟೇಲ್, ಆವೇಶ್ ಖಾನ್ ಮತ್ತು ಚೇತನ್ ಸಕಾರಿಯಗೂ ಅವಕಾಶ ನೀಡುವ ನಿರೀಕ್ಷೆ ಇದೆ.

    ಟಿ20 ಸರಣಿಗೆ ಸಂಭಾವ್ಯ ತಂಡ: ರೋಹಿತ್ ಶರ್ಮ (ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿ.ಕೀ), ವೆಂಕಟೇಶ್ ಅಯ್ಯರ್, ಸೂರ್ಯಕುಮರ್ ಯಾದವ್, ಹರ್ಷಲ್ ಪಟೇಲ್, ಆವೇಶ್ ಖಾನ್, ಮೊಹಮದ್ ಸಿರಾಜ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಚೇತನ್ ಸಕಾರಿಯ, ಶ್ರೇಯಸ್ ಅಯ್ಯರ್, ರಾಹುಲ್ ಚಹರ್, ಟಿ. ನಟರಾಜನ್, ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆ.

    ರೋಹಿತ್‌ಗೆ ಟಿ20 ಚುಕ್ಕಾಣಿ?
    ರೋಹಿತ್ ಶರ್ಮ ಟಿ20 ತಂಡಕ್ಕೆ ಹೊಸ ನಾಯಕರಾಗಿ ನೇಮಕಗೊಳ್ಳುವುದು ಖಚಿತವೆನಿಸಿದೆ. ನಿರ್ಗಮನ ನಾಯಕ ವಿರಾಟ್ ಕೊಹ್ಲಿ ಕೂಡ ನಮೀಬಿಯ ವಿರುದ್ಧ ಕೊನೇ ಲೀಗ್ ಪಂದ್ಯಕ್ಕೆ ಮುನ್ನ ಈ ಬಗ್ಗೆ ಸುಳಿವು ನೀಡಿದ್ದಾರೆ. ಆದರೆ ಕಿವೀಸ್ ವಿರುದ್ಧ ಸರಣಿಯಿಂದ ವಿಶ್ರಾಂತಿ ಪಡೆಯುವ ಆಯ್ಕೆಯನ್ನೂ ಅವರಿಗೆ ನೀಡಲಾಗುತ್ತಿದೆ. ಅವರು ವಿಶ್ರಾಂತಿಗೆ ಆದ್ಯತೆ ನೀಡಿದರೆ ಆಗ ಕನ್ನಡಿಗ ಕೆಎಲ್ ರಾಹುಲ್ ಟಿ20 ತಂಡಕ್ಕೆ ಹಂಗಾಮಿ ನಾಯಕರಾಗಿ ನೇಮಕಗೊಳ್ಳಲಿದ್ದಾರೆ ಎನ್ನಲಾಗಿದೆ. ಒಂದು ವೇಳೆ ರೋಹಿತ್ ಟಿ20 ಸರಣಿಯಲ್ಲಿ ಆಡಲು ಒಪ್ಪಿದರೆ, ಆಗ ಕೆಎಲ್ ರಾಹುಲ್‌ಗೆ ಟಿ20 ಸರಣಿಯಿಂದ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ.

    ಹಾರ್ದಿಕ್ ಫಿಟ್ನೆಸ್ ಬಗ್ಗೆ ವರದಿ ಕೇಳಿದ ಬಿಸಿಸಿಐ
    ಟಿ20 ವಿಶ್ವಕಪ್ ವೇಳೆ ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್ ವಿಚಾರವನ್ನು ನಿಭಾಯಿಸಿದ ರೀತಿಯ ಬಗ್ಗೆ ಬಿಸಿಸಿಐ ಅಸಮಾಧಾನಗೊಂಡಿದ್ದು, ಈ ಸಂಬಂಧ ಟೀಮ್ ಮ್ಯಾನೇಜ್‌ಮೆಂಟ್ ಮತ್ತು ಆಯ್ಕೆಗಾರರಿಂದ ವರದಿ ಕೇಳಿದೆ ಎನ್ನಲಾಗಿದೆ. ಇನ್ನು ಸ್ಪಿನ್ನರ್ ವರುಣ್ ಚಕ್ರವರ್ತಿ ಕೂಡ ಟೂರ್ನಿ ಮಧ್ಯೆ ಫಿಟ್ನೆಸ್ ಸಮಸ್ಯೆ ಎದುರಿಸಿದ್ದು, ಪೂರ್ಣ ಫಿಟ್ ಆಗಿದ್ದ ಯಜುವೇಂದ್ರ ಚಾಹಲ್‌ರನ್ನು ಯಾಕೆ ಆರಿಸಿಲ್ಲ ಎಂದೂ ಬಿಸಿಸಿಐ ಪ್ರಶ್ನೆ ಎತ್ತಿದೆ ಎನ್ನಲಾಗಿದೆ. ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದ ದೃಷ್ಟಯಿಂದ ಹಾರ್ದಿಕ್ ಪಾಂಡ್ಯ ಬೆಂಗಳೂರಿನ ಎನ್‌ಸಿಎಗೆ ತೆರಳಿ ಫಿಟ್ನೆಸ್ ಸಾಬೀತು ಪಡಿಸುವತ್ತ ಗಮನಹರಿಸಬೇಕೆಂದು ಬಿಸಿಸಿಐ ಬಯಸಿದೆ. ಅಲ್ಲದೆ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿ ಆಲ್ರೌಂಡರ್ ಸಾಮರ್ಥ್ಯವನ್ನೂ ನಿರೂಪಿಸಬೇಕೆಂದು ಸೂಚಿಸಲಿದೆ.

    ಟಿ20ಯಿಂದ ಪ್ರಮುಖರಿಗೆ ರೆಸ್ಟ್?
    ವಿರಾಟ್ ಕೊಹ್ಲಿ, ರಿಷಭ್ ಪಂತ್, ಜಸ್‌ಪ್ರೀತ್ ಬುಮ್ರಾ, ಮೊಹಮದ್ ಶಮಿ ಸಹಿತ ಪ್ರಮುಖ ಆಟಗಾರರು ಟಿ20 ಸರಣಿಯಿಂದ ವಿಶ್ರಾಂತಿ ಪಡೆಯುವ ನಿರೀಕ್ಷೆ ಇದೆ. ಈ ಆಟಗಾರರು ಕಳೆದ ಜೂನ್‌ನಿಂದ ಡಬ್ಲ್ಯುಟಿಸಿ ಫೈನಲ್‌ನಿಂದಲೂ ಸತತ ಕ್ರಿಕೆಟ್ ಆಡುತ್ತ ಬಂದಿದ್ದು, ಬಯೋ-ಬಬಲ್‌ನಲ್ಲಿ ಸಾಕಷ್ಟು ಮಾನಸಿಕ ಒತ್ತಡವನ್ನೂ ಎದುರಿಸಿದ್ದಾರೆ. ಹೀಗಾಗಿ ವರ್ಷಾಂತ್ಯದ ಸವಾಲಿನ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮುನ್ನ ಆಟಗಾರರು ರಿಫ್ರೆಶ್ ಆಗುವುದು ಅಗತ್ಯವಾಗಿದೆ.

    ಟೆಸ್ಟ್ ಸರಣಿಗೆ ಬಲಿಷ್ಠ ತಂಡ?
    ಟಿ20 ಸರಣಿಯಿಂದ ಕೆಲ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಿದರೂ, ಟೆಸ್ಟ್ ಸರಣಿಯಲ್ಲಿ ಬಲಿಷ್ಠ ತಂಡವನ್ನೇ ಕಣಕ್ಕಿಳಿಸುವ ನಿರೀಕ್ಷೆ ಇದೆ. ಈ ಸರಣಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಭಾಗವಾಗಿರಲಿದೆ. ಹೀಗಾಗಿ ಪೂರ್ಣ ಅಂಕ ಬಾಚಿಕೊಳ್ಳಲು ತವರಿನ ಈ ಸರಣಿ ಪ್ರಮುಖವಾಗಿದೆ. ಇದಲ್ಲದೆ, ಕಳೆದ ಡಬ್ಲ್ಯುಟಿಸಿ ಫೈನಲ್ ಸೋಲಿಗೆ ಕಿವೀಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಕೂಡ ಈ ಸರಣಿ ಮಹತ್ವದ್ದಾಗಿದೆ. ಆದರೆ ರೋಹಿತ್ ಟಿ20 ಸರಣಿಯಲ್ಲಿ ಆಡಿದರೆ ಟೆಸ್ಟ್‌ನಿಂದ ವಿಶ್ರಾಂತಿ ಪಡೆಯುವ ಸಾಧ್ಯತೆಗಳಿವೆ.

    ಐಪಿಎಲ್‌ಗಿಂತ ದೇಶಕ್ಕೆ ಆದ್ಯತೆ ನೀಡಿ, ಭಾರತೀಯ ಕ್ರಿಕೆಟಿಗರಿಗೆ ಕಪಿಲ್ ದೇವ್ ಕಿವಿಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts