More

    ಬಂಧುಗಳಿಗಿಂತ ಸಂಕಷ್ಟ ಬಗೆಹರಿಸುವ ಗುರು ಲೇಸು

    ಹರಪನಹಳ್ಳಿ: ಗುರು- ಭಕ್ತರ ನಡುವೆ ಉತ್ತಮ ಬಾಂಧವ್ಯವಿದ್ದಾಗ ಸಾಧನೆ ಸುಲಭವಾಗುತ್ತದೆ ಎಂದು ನೀಲಗುಂದದ ಗುಡ್ಡದ ವಿರಕ್ತಮಠದ ಶ್ರೀ ಚನ್ನಬಸವ ಶಿವಯೋಗಿ ಸ್ವಾಮೀಜಿ ಅಭಿಪ್ರಾಯಪಟ್ಟರು.

    ತಾಲೂಕಿನ ನೀಲಗುಂದ ಗುಡ್ಡದ ವಿರಕ್ತಮಠದ ಸಂಸ್ಥಾನ ಜಂಗಮ ಪೀಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಂಗಮ ಜಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಂದುಂಡು ಹೋಗುವ ಬಂಧುಗಳಿಗಿಂತ ಸಲಹೆ ನೀಡಿ ಸಂಕಷ್ಟ ಬಗೆಹರಿಸುವ ಗುರುವೇ ಲೇಸು ಎಂದರು.

    ಆಸ್ತಿ, ಸಂಪತ್ತು, ಹಣ ಗಳಿಸುವವರು ಸಾವಿರಾರು ಮಂದಿ ಇದ್ದಾರೆ. ಗಳಿಸಿದ್ದನ್ನು ದಾನ ಮಾಡುವ ಕೈ ಕೆಲವರಿಗೆ ಮಾತ್ರ ಇರುತ್ತದೆ. ಈ ಎರಡೂ ಗುಣಗಳನ್ನು ಗುರುಗಳು ಸಮಾನವಾಗಿ ಕಾಣುವುದು ಮಠದ ನಿಯಮ ಎಂದರು.

    ಪುರಸಭೆ ಸದಸ್ಯ ಎಚ್.ಎಂ.ಅಶೋಕ್ ಹರಾಳ್ ಮಾತನಾಡಿ, ಸಾಮಾನ್ಯ ಮನುಷ್ಯರಂತಿದ್ದ ಸಂತ ಲಿಂಗೈಕ್ಯ ಲಿಂಗಜ್ಜನವರು ಅಪಾರ ಪಾಂಡಿತ್ಯ ಹೊಂದಿದ್ದರು ಎಂದರು.

    ಬಿಜೆಪಿ ಮುಖಂಡ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, ಮೌಢ್ಯ, ಜಾತಿ ಪದ್ಧತಿ ವಿರುದ್ಧ ಸರ್ವಜಾತಿಗಳ ಸಮೀಕರಣಕ್ಕಾಗಿ ಹೋರಾಟವನ್ನೇ ನಡೆಸಿದ್ದ ಬಸವಣ್ಣನವರ ನಂತರ ಪಂಚಗಣಾಧೀಶ್ವರರು ಶ್ರೇಷ್ಠರಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಅಧ್ಯಾಯನಗಳು ಅವಶ್ಯವಾಗಿ ಆಗಬೇಕಿದೆ ಎಂದು ಹೇಳಿದರು.

    ಹಗರಿಬೊಮ್ಮನಹಳ್ಳಿ ಸಹಾಯಕ ಪ್ರಾಧ್ಯಾಪಕ ಸತೀಶ್ ಪಾಟೀಲ್ ಮಾತನಾಡಿ, ತೇರು ಮುಟ್ಟಿಬಂದ ಬಾಳೆಹಣ್ಣು ಪ್ರಸಾದವಾಗುವಂತೆ ಲಿಂಗಜ್ಜನವರ ಅನುಭಾವಿ ಮಾತುಗಳು ಜ್ಞಾನದ ಸಂಕೇತ. ಇದಕ್ಕೆ ಪುಸ್ತಕ ನಿದರ್ಶನವಾಗಿದೆ ಎಂದರು.

    ಚಿಕ್ಕಮಜ್ಜಿಗೇರಿಯ ಕುರಿಗಾಯಿ ಅಜ್ಜಿ ಬಸಮ್ಮ ತಮ್ಮ ಗಳಿಕೆಯ ಹಣದ ಅರ್ಧಭಾಗದಿಂದ ಚನ್ನಬಸವ ಶಿವಯೋಗಿ ಸ್ವಾಮೀಜಿಯನ್ನು ತುಲಾಭಾರ ಮಾಡಿದ್ದು ವಿಶೇಷವಾಗಿತ್ತು. ಕವಿ ನೆಲ್ಕುದ್ರಿ ಲಿಂಗೈಕ್ಯ ಲಿಂಗಜ್ಜ ಹರಾಳರ ಬರೆದ ಶ್ರೀ ಗುರು ಕೊಟ್ಟೂರೇಶ್ವರ ಮಹಾತ್ಮೆ ಎಂಬ ಪೌರಾಣಿಕ ನಾಟಕದ ಪುಸ್ತಕ ಬಿಡುಗಡೆ ಮಾಡಲಾಯಿತು.

    ಅರಸಿಕೆರೆಯ ಕೋಲಶಾಂತೇಶ್ವರ ಮಠದ ಶಾಂತಲಿಂಗದೇಶೀಕೇಂದ್ರ ಸ್ವಾಮೀಜಿ, ಹಿರೇಮಲ್ಲನಕೇರಿ ಚನ್ನಬಸವ ಸ್ವಾಮೀಜಿ, ಸಾಹಿತಿ ಮೇಟಿ ಕೊಟ್ರಪ್ಪ, ಪುಸ್ತಕ ದಾನಿ ಅಕ್ಕಿಕೊಟ್ರಪ್ಪ, ಕೊಗಳಿ ಸಿದ್ದಲಿಂಗನಗೌಡ, ಗುತ್ತಿಗೆದಾರ ಷಣ್ಮುಖಪ್ಪ, ಪಾರಂಪರಿಕ ವೈದ್ಯ ಪರಿಷತ್ ರಾಜ್ಯಾಧ್ಯಕ್ಷ ಎಲ್.ರಾಜು ಪಂಡಿತ್, ಬಾಗಳಿ ಕೀಲು ಮೂಳೆ ವೈದ್ಯ ಡಾ.ಹೊಸೂರಪ್ಪ, ಗುಂಡಗತ್ತಿ ಮಂಜಪ್ಪ, ಅಲಬೂರು ಡಾ.ಪರಶುರಾಮಪ್ಪ, ರಂಗಕಲಾವಿದೆ ನಾಗರತ್ನಮ್ಮ, ಟಿ.ಕೊಟ್ರೇಶಪ್ಪ, ಎಚ್.ಎನ್.ಬಸವರಾಜಪ್ಪ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts