More

    ಮನೆ ಮನೆ ಸರ್ವೆ ಕಾರ್ಯ ಆರಂಭಿಸಲು ಜಿಲ್ಲಾಧಿಕಾರಿ ಸೂಚನೆ

    ಹರಪನಹಳ್ಳಿ: ಕರೊನಾ ಸೋಂಕಿನ ಆತಂಕವಿದ್ದು, ಕೂಡಲೇ ಮನೆ ಮನೆ ಸರ್ವೆ ಕಾರ್ಯ ಆರಂಭಿಸುವಂತೆ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಹಸೀಲ್ದಾರ್‌ಗೆ ಸೂಚಿಸಿದರು.

    ಇಲ್ಲಿನ ತಾಪಂ ಸಭಾಂಗಣದಲ್ಲಿ ಬುಧವಾರ ಕೋವಿಡ್-19 ಮುಂಜಾಗೃತಾ ಕ್ರಮವಾಗಿ ಹೂವಿನ ಹಡಗಲಿ, ಹರಪನಹಳ್ಳಿ, ಕೊಟ್ಟೂರು ತಾಲೂಕುಗಳ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು.

    ನಿಮಗೆ ಈಗಾಗಲೇ ತರಬೇತಿ ನೀಡಿದ್ದು, ಬಿಎಲ್‌ಒಗಳಿಗೂ ತರಬೇತಿ ನೀಡಿ ಶೀಘ್ರ ಮನೆ ಮನೆಗೆ ತೆರಳಿ ತಪಾಸಣೆ ನಡೆಸಿ ಮಾಹಿತಿ ನೀಡಿ ಎಂದು ಆದೇಶಿಸಿದರು. ದಾವಣಗೆರೆ ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಿದ್ದು, ಗಡಿಭಾಗವಾದ ಕೊಟ್ಟೂರು, ಹರಪನಹಳ್ಳಿಗಳಲ್ಲಿ ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಅನಗತ್ಯ ಓಡಾಟ ತಡೆಗಟ್ಟಬೇಕು. ಚೆಕ್‌ಪೋಸ್ಟ್‌ನಲ್ಲಿ ಹೆಚ್ಚಿನ ನಿಗಾ ಇಡಬೇಕು.

    ಅಂತಾರಾಜ್ಯದಿಂದ ಯಾರೇ ಬಂದರೂ ಅವರನ್ನು ಕ್ವಾರಂಟೈನ್‌ನಲ್ಲಿ ಇರಿಸಬೇಕು. ಮುಂದಿನ ಒಂದು ವರ್ಷದ ವರೆಗೆ ಯೋಜನೆ ಹಾಕಿಕೊಂಡು ಅಗತ್ಯ ಸಾಮಗ್ರಿ, ಸಲಕರಣೆಗಳನ್ನು ಇಟ್ಟುಕೊಂಡು ಕೆಲಸ ಮಾಡಬೇಕು. ಹಣದ ಅಭಾವವಿಲ್ಲ, ಇದನ್ನು ಸದ್ಬಳಕೆ ಮಾಡಿಕೊಂಡು ತಾಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ವೈದ್ಯರಿಗೆ ಸೂಚಿಸಿದರು.

    ಮೂರು ತಾಲೂಕುಗಳಲ್ಲಿ ಎಲ್ಲೂ ಕುಡಿವ ನೀರಿನ ಸಮಸ್ಯೆ ತಲೆದೋರಬಾರದು ಎಂದು ತಾಪಂ ಇಒಗಳಿಗೆ ಸೂಚಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಜನಾರ್ದನ ಮಾತನಾಡಿ, ಅಗತ್ಯ ಸೌಲಭ್ಯವಿಲ್ಲದಿದ್ದರೆ ಹೇಳಿ ಒದಗಿಸುತ್ತೇವೆ. ಕೋವಿಡ್ ಶಂಕೆ ಇದ್ದವರನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸದೆ ತಮ್ಮ ಆಸ್ಪತ್ರೆಯಲ್ಲೇ ಪರಿಕ್ಷೀಸಿ ಎಂದು ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಸೂಚಿಸಿದರು.

    ಕೊಟ್ಟೂರಿನಲ್ಲಿರುವ ಅಲ್ಟ್ರಾ ಸೌಂಡ್ ಯಂತ್ರವನ್ನು ಕೂಡಲೇ ಹರಪನಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಕೊಟ್ಟೂರಿನ ವೈದ್ಯಾಧಿಕಾರಿಗೆ ಡಿಎಚ್‌ಒ ಸೂಚಿಸಿದರು. ಕೋವಿಡ್ -19 ಮೇಲುಸ್ತುವಾರಿ ಅಧಿಕಾರಿ ಪಿ.ಎನ್.ಲೋಕೇಶ್, ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ, ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಈಶ್ವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts