More

    ಹರಕೆ ಗೋವುಗಳಿಗಿಲ್ಲ ರಕ್ಷಣೆ

    ನಂಜನಗೂಡು: ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಭಕ್ತರು ಬಿಡುವ ಹರಕೆ ಗೋವುಗಳಿಗೆ ಸೂಕ್ತ ತಂಗುದಾಣ ನಿರ್ಮಾಣ ಮಾಡಬೇಕೆಂಬ ಗೋರಕ್ಷಕರ ಕೂಗಿಗೆ ಸ್ಪಂದನೆಯೇ ಸಿಕ್ಕಿಲ್ಲ..!

    ರಸ್ತೆಗಳಲ್ಲಿ ಅಡ್ಡಾಡಿಕೊಂಡಿರುವ ಗೋವುಗಳನ್ನು ಆಗಂತುಕರು ಕಸಾಯಿಖಾನೆಗೆ ಸಾಗಿಸುವ ದಂಧೆಯಲ್ಲಿ ನಿರತರಾಗಿದ್ದರೆ, ಇತ್ತ ರಸ್ತೆಯಲ್ಲೇ ಬೀಡು ಬಿಡುವ ಗೋವುಗಳಿಗೆ ರಾತ್ರೋರಾತ್ರಿ ಭಾರಿ ವಾಹನಗಳು ಡಿಕ್ಕಿ ಹೊಡೆದು ಗಂಭೀರ ಗಾಯಕ್ಕೆ ತುತ್ತಾಗುವ ಪರಿಸ್ಥಿತಿ ಮಾಮೂಲಿಯಾಗಿ ಬಿಟ್ಟಿದೆ.

    ದೇವಾಲಯದ ಸುತ್ತಮುತ್ತ 200ಕ್ಕೂ ಹೆಚ್ಚು ಗೋವುಗಳನ್ನು ಕಾಣಬಹುದಾಗಿದೆ. ತಿಂಗಳಿಗೆ ಹತ್ತಾರು ಆಕಳುಗಳನ್ನು ಭಕ್ತರು ಹರಕೆ ರೂಪದಲ್ಲಿ ಶ್ರೀಕಂಠೇಶ್ವರಸ್ವಾಮಿಗೆ ಸಮರ್ಪಣೆ ಮಾಡುವ ವಾಡಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆ ಗೋವುಗಳ ಪಾಲನೆ, ರಕ್ಷಣೆ ಮಾಡುವ ಸಲುವಾಗಿಯೇ ದೇವಾಲಯದಲ್ಲಿ ಗೋಪಾಲಕರ ಹುದ್ದೆಗಳು ಇವೆ.

    ಆದರೆ ಆ ಹುದ್ದೆಯಲ್ಲಿರುವ ನೌಕರರು ದೇವಾಲಯದ ಇತರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಗೋವುಗಳ ರಕ್ಷಣೆ ಕಾರ್ಯ ಮಾತ್ರ ಆಗುತ್ತಿಲ್ಲ ಎಂಬುದು ಗೋ ರಕ್ಷಕರ ಅಳಲಾಗಿದೆ. ಹರಕೆ ಬಿಟ್ಟ ಗೋವುಗಳು ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀಡುಬಿಟ್ಟಿವೆ. ದೇವಾಲಯದ ಮುಂದೆಯೇ ಹಾದು ಹೋಗುವ ಜೇವರ್ಗಿ-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ 150ಎ ಮಾರ್ಗದ ಬೈಪಾಸ್ ರಸ್ತೆಯಲ್ಲೂ ಗೋವುಗಳು ಬೀಡು ಬಿಡುವುದರಿಂದ ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರು ಅತಿವೇಗದಲ್ಲಿ ಬಂದು ಗೋವುಗಳಿಗೆ ಡಿಕ್ಕಿ ಹೊಡೆದು ಗಾಯಗೊಳಿಸಿರುವ ನಿದರ್ಶನಗಳು ಸಾಕಷ್ಟಿವೆ. ಗಾಯಗೊಂಡ ಗೋವುಗಳಿಗೆ ಸ್ಥಳೀಯರೇ ಶುಶ್ರೂಷೆ ಮಾಡುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡರೆ ಸ್ಥಳೀಯರೇ ಮೈಸೂರಿನ ಪಿಂಜರಾಪೋಲ್‌ಗೆ ಸಾಗಿಸಿ ಆಶ್ರಯ ನೀಡುವ ಪರಿಸ್ಥಿತಿ ತಲೆದೋರಿದೆ.

    ಗೋರಕ್ಷಕರ ಕೂಗಿಗೆ ಕಿಮ್ಮತ್ತಿಲ್ಲ: ದೇವಾಲಯ ವತಿಯಿಂದ ಗೋಶಾಲೆ ತೆರೆದು ಗೋವುಗಳ ರಕ್ಷಣೆ ಕಾರ್ಯ ಮಾಡಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ರಾತ್ರೋರಾತ್ರಿ ಆಗಂತುಕರು ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿರುವುದನ್ನು ಸ್ಥಳೀಯರು ವಿಡಿಯೋ ಮಾಡಿ ದಂಧೆಯನ್ನು ಬಯಲಿಗೆಳೆದಿದ್ದರು.

    ಯುವ ಬ್ರಿಗೇಡ್ ವತಿಯಿಂದ ಗೋಶಾಲೆ ತೆರೆಯಲು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಸಹಿ ಸಂಗ್ರಹ ಅಭಿಯಾನ ಮಾಡಿ ಗಮನ ಸೆಳೆಯಲಾಗಿತ್ತು. ತರುವಾಯ ಹುಲ್ಲಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 20 ಎಕರೆ ಭೂಮಿಯನ್ನು ಗುರುತಿಸಲಾಗಿತ್ತು. ಆದರೆ, ದೇವಾಲಯದಿಂದ ಹುಲ್ಲಹಳ್ಳಿ ಭಾಗಕ್ಕೆ ಬಲು ದೂರ ಆಗುವುದರಿಂದ ಈ ಯೋಜನೆ ನನೆಗುದಿಗೆ ಬಿದ್ದಿತು. ಇದೀಗ ದೇವಾಲಯದ ಕೂಗಳತೆ ದೂರದಲ್ಲೇ ಇರುವ ದೇಗುಲಕ್ಕೆ ಸೇರಿದ ಜಾಗದಲ್ಲಿ ಗೋಶಾಲೆ ತೆರೆಯಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮವಹಿಸಲಿದೆಯೇ ಕಾದು ನೋಡಬೇಕಿದೆ.

    ಕೋಟಿ ಆದಾಯವಿದ್ದರೂ ಪ್ರಯೋಜನವಿಲ್ಲ: ತಲೆತಲಾಂತರಗಳಿಂದಲೂ ಗೋವುಗಳನ್ನು ದೇಗುಲಕ್ಕೆ ಅರ್ಪಿಸುವ ವಾಡಿಕೆಯಿದೆ. ಆದರೆ ಅವುಗಳನ್ನು ರಕ್ಷಣೆ ಮಾಡಿ ಸಲಹುವ ನಿಟ್ಟಿನಲ್ಲಿ ಗೋಶಾಲೆ ಎಂಬುದಿಲ್ಲ. ಇದರಿಂದಾಗಿ ಹರಕೆಯ ಗೋವುಗಳು ದೇಗುಲ ಸುತ್ತಮುತ್ತಲಿನ ಪರಿಸರದಲ್ಲಿ ಅಡ್ಡಾಡಿಕೊಂಡಿವೆ. ಇವುಗಳನ್ನು ಖದೀಮರು ರಾತ್ರಿ ಹೊತ್ತು ಹೊಂಚು ಹಾಕಿ ಕಸಾಯಿಖಾನೆಗೆ ಸಾಗಿಸುವ ದಂಧೆಯಲ್ಲಿ ತೊಡಗಿದ್ದಾರೆ. ಇದರಿಂದ ಭಕ್ತರು ಘಾಸಿಗೆ ಒಳಗಾಗಿದ್ದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ದೇಗುಲದ ಆಡಳಿತ ಮಂಡಳಿಗೆ ಭಕ್ತರು ಹರಕೆ ರೂಪದಲ್ಲಿ ನೀಡುವ ಹಣ ಬೇಕು. ಆದರೆ, ಗೋವುಗಳು ಬೇಡ ಎಂದರೆ ಹೇಗೆ ಎಂಬುದು ಭಕ್ತರ ಪ್ರಶ್ನೆಯಾಗಿದೆ.

    ಗೋವುಗಳ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ದೇಗುಲದಲ್ಲಿ ಗೋ ಪಾಲಕರ ಹುದ್ದೆಯಲ್ಲಿ ಸಿಬ್ಬಂದಿಯೂ ಇದ್ದಾರೆ. ಆದರೆ ಅವುಗಳ ರಕ್ಷಣೆ ಮಾಡುವ ಕಾರ್ಯ ಮಾತ್ರ ನಡೆಯುತ್ತಿಲ್ಲ. ದೇಗುಲಕ್ಕೆ ಮಾಸಿಕ ಕೋಟ್ಯಂತರ ರೂ. ಆದಾಯ ಬರುತ್ತಿದ್ದು, ಗೋಶಾಲೆ ತೆರೆದು ಗೋವುಗಳ ರಕ್ಷಣೆ ಮಾಡಲು ಆರ್ಥಿಕ ಹೊಡೆತವೇನೂ ಇಲ್ಲ. ಗೋವುಗಳಿಗಾಗಿಯೇ ದೇಗುಲದ ಸುಪರ್ದಿಯಲ್ಲಿ ಜಾಗವಿದೆ. ಆ ಸ್ಥಳದಲ್ಲಿ ಗೋಶಾಲೆ ತೆರೆದು ಗೋವುಗಳ ರಕ್ಷಣೆ ಕಾರ್ಯ ಮಾಡಬಹುದಾಗಿದೆ. ಆದರೆ ದೇವಾಲಯದ ಆಡಳಿತ ಮಂಡಳಿ ಇಚ್ಛಾಶಕ್ತಿ ತೋರುತ್ತಿಲ್ಲ ಎಂಬುದು ಭಕ್ತರ ಆರೋಪವಾಗಿದೆ.

    ಹರಕೆಯ ಗೋವುಗಳು ರಾತ್ರಿ ವೇಳೆ ಬೈಪಾಸ್ ರಸ್ತೆಯಲ್ಲಿ ಬೀಡು ಬಿಡುವುದರಿಂದ ವೇಗವಾಗಿ ಹೋಗುವ ವಾಹನಗಳು ಡಿಕ್ಕಿ ಹೊಡೆದು ಗೋವುಗಳು ಗಾಯಕ್ಕೆ ತುತ್ತಾಗುತ್ತಿವೆ. ಅವುಗಳಿಗೆ ನಾವೇ ಶುಶ್ರೂಷೆ ಮಾಡಿ ಔಷಧೋಪಚಾರ ಮಾಡುತ್ತಿದ್ದೇವೆ. ಗಂಭೀರವಾಗಿ ಗಾಯಗೊಂಡಿದ್ದರೆ ಅವುಗಳನ್ನು ಪಿಂಜರಾಪೋಲ್‌ಗೆ ಬಿಡುವ ಕೆಲಸ ಮಾಡುತ್ತಿದ್ದೇವೆ. ಗೋವುಗಳ ನಿತ್ಯ ಯಾತನೆಯನ್ನು ನೋಡಲು ಆಗುತ್ತಿಲ್ಲ. ರಾತ್ರಿ ವೇಳೆ ಒಂದು ಕಡೆ ವಾಸ್ತವ್ಯ ಹೂಡಲು ದೇವಾಲಯದಿಂದ ಸ್ಥಳಾವಕಾಶ ಗುರುತು ಮಾಡುವ ಮೂಲಕ ಅವುಗಳ ರಕ್ಷಣೆಗೆ ಮುಂದಾಗಬೇಕಿದೆ.
    ಗೋಳೂರು ಸ್ನೇಕ್ ಬಸವರಾಜು, ಸಾಮಾಜಿಕ ಕಾರ್ಯಕರ್ತ.

    ಶಾಶ್ವತ ಗೋಶಾಲೆ ತೆರೆಯಬೇಕೆಂದು ಕಳೆದ ವರ್ಷ ಯುವ ಬ್ರಿಗೇಡ್‌ನಿಂದ ಸಹಿ ಸಂಗ್ರಹ ಅಭಿಯಾನ ಮಾಡಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಮಾಡಲಾಗಿತ್ತು. ಗೋಶಾಲೆ ತೆರೆಯುವವರೆಗೆ ತಾತ್ಕಾಲಿಕವಾಗಿಯಾದರೂ ಜಾಗ ಗುರುತಿಸಿ ಅವುಗಳ ರಕ್ಷಣೆಗೆ ದೇವಾಲಯ ಆಡಳಿತ ಮಂಡಳಿ ಕ್ರಮವಹಿಸಬೇಕು. ದೇವಾಲಯಕ್ಕೆ ಸೇರಿದ ಅರಮನೆ ಮೈದಾನದ ಸುತ್ತ ಈಗಾಗಲೇ ಬೇಲಿ ಹಾಕಲಾಗಿದೆ. ಆ ಜಾಗದಲ್ಲೇ ಗೋವುಗಳಿಗೆ ಕುಡಿಯಲು ನೀರು ಹಾಗೂ ಮೇವಿನ ವ್ಯವಸ್ಥೆ ಕಲ್ಪಿಸಲಿ. ಗೋಶಾಲೆ ತೆರೆದ ಬಳಿಕ ಸ್ಥಳಾಂತರಗೊಳಿಸಲಿ.
    ಎನ್.ಜೆ.ಸುನಿಲ್ ಯುವ ಬ್ರಿಗೇಡ್ ಕಾರ್ಯಕರ್ತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts