More

    ಹರಕಂಚಿ ಗಲಾಟೆ, ಮೂವರ ಬಂಧನ

    ಕಮಲಾಪುರ: ಕ್ಷುಲ್ಲಕ ಕಾರಣಕ್ಕೆ ಹರಕಂಚಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದ್ದು, ಒಬ್ಬ ಗಂಭೀರ ಗಾಯಗೊಂಡಿದ್ದಾನೆ.

    ಜಗದೇವಪ್ಪ ಕೋಟನೂರು (52) ಗಂಭೀರ ಗಾಯಗೊಂಡವ. ಸ್ಥಳೀಯವಾಗಿ ಚಿಕಿತ್ಸೆ ನೀಡಿ ಕಲಬುರಗಿಗೆ ಕಳಿಸಲಾಗಿದೆ. ಶಂಕರ ನಾಯ್ಕೋಡಿ, ದೇವರಾಜ ನಾಯ್ಕೋಡಿ, ಸುನೀಲ್ ನಾಯ್ಕೋಡಿ ಬಂಧಿತರು. ವಿಶಾಲ ನಾಯ್ಕೋಡಿ, ಮಾಣಿಕಪ್ಪ ನಾಯ್ಕೋಡಿ, ಅನೀಲ ನಾಯ್ಕೋಡಿ, ಸಿದ್ರಾಮ ನಾಯ್ಕೋಡಿ ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು, ಮುನ್ನೆಚ್ಚರಿಕೆಯಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಹಿಂದೆಯೂ ಎರಡ್ಮೂರು ಸಲ ಗಲಾಟೆಯಾಗಿತ್ತು ಎಂದು ಮೂಲಗಳು ತಿಳಿಸಿವೆ.

    ಹಿನ್ನೆಲೆ: ಗುರುವಾರ ರಾತ್ರಿ ಹರಕಂಚಿಯಲ್ಲಿ ಮೆಹಬೂಬ್ ಸುಭಾನಿ ಉರುಸ್ ನಿಮಿತ್ತ ಸಂದಲ್ ಮೆರವಣಿಗೆ ನಡೆದಿತ್ತು. ಈ ವೇಳೆ ಜಗದೇವಪ್ಪ ಕೋಟನೂರ, ಅಜಯ ಮಂದಕನಳ್ಳಿ, ಖಮರೋದ್ದಿನ್ ಜಮಾದಾರ ಜತೆ ಶಂಕರ ಮತ್ತು ಸಂಗಡಿಗರು ಜಗಳ ತೆಗೆದಿದ್ದಾರೆ. ಗ್ರಾಮಸ್ಥರೆಲ್ಲರೂ ಮಧ್ಯಪ್ರವೇಶಿಸಿ ಸಮಾಧಾನಪಡಿಸಿ ಕಳಿಸಿದ್ದಾರೆ. ಬಳಿಕ ಮಧ್ಯರಾತ್ರಿ 12.45ಕ್ಕೆ ಹನುಮಾನ ದೇವಸ್ಥಾನ ಬಳಿ ಕುಳಿತ್ತಿದ್ದ ಜಗದೇವಪ್ಪ, ಅಜಯ, ಖಮರೋದ್ದಿನ್ ಜತೆ ಶಂಕರ ಮತ್ತು ಸ್ನೇಹಿತರು ಮತ್ತೆ ಜಗಳ ತೆಗೆದಿದ್ದಾರೆ. ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಈ ವೇಳೆ ಜಗದೇವಪ್ಪನ ಮೇಲೆ ರಾಡ್‌ನಿಂದ ಹಲ್ಲೆ ಮಾಡಿದ್ದು, ತಲೆಗೆ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದ. ತಕ್ಷಣ ಶಂಕರ ಗ್ಯಾಂಗ್ ಸ್ಥಳದಿಂದ ಕಾಲ್ಕಿತ್ತಿದೆ. ಜಗದೇವಪ್ಪಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಕಲಬುರಗಿ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

    ವಿಷಯ ತಿಳಿಯುತ್ತಿದ್ದಂತೆ ಅಡ್ಡೂರು ಶ್ರೀನಿವಾಸುಲು, ಡಿವೈಎಸ್‌ಪಿ ಉಮೇಶ ಚಿಕ್ಕಮಠ, ಸಿಪಿಐ ವಿ.ನಾರಾಯಣ, ಪಿಎಸ್‌ಐಗಳಾದ ಆಶಾ ರಾಠೋಡ್, ಸಂಗೀತಾ ಶಿಂಧೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಹಾಗಾಂವ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಒಂದು ಡಿಆರ್ ತುಕಡಿ ನಿಯೋಜಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts