More

    ಚೆಕ್‌ಪೋಸ್ಟ್‌ಗಳಲ್ಲಿ ವಾಹನ ತಪಾಸಣೆ ಕಟ್ಟುನಿಟ್ಟಾಗಿರಲಿ

    ಹನೂರು: ಮಾದರಿ ನೀತಿ ಸಂಹಿತೆ ಪಾಲನೆ ಬಗ್ಗೆ ಹೆಚ್ಚಿನ ನಿಗಾ ವಹಿಸುವುದರ ಮೂಲಕ ಚುನಾವಣೆ ಸುಸೂತ್ರವಾಗಿ ನಡೆಯಲು ಪ್ರತಿಯೊಬ್ಬರೂ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಚುನಾವಣಾ ವೆಚ್ಚ ವೀಕ್ಷಕ ಡಾ.ಮೋಹನ್‌ಬಾಬು ತಿಳಿಸಿದರು.

    ಪಟ್ಟಣದ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಚುನಾವಣಾ ಕರ್ತವ್ಯನಿರತ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಭೆಯಲ್ಲಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆ ಉತ್ತಮಪಡಿಸುವಲ್ಲಿ ಮತದಾನ ಪ್ರಮುಖ ಅಸ್ತ್ರವಾಗಿದ್ದು, ಇದರಲ್ಲಿ ಮತದಾರರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಆದ್ದರಿಂದ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದಂತೆ ಮತ ಚಲಾಯಿಸುವಂತೆ ಮತದಾರರಿಗೆ ಅರಿವು ಮೂಡಿಸುವುದರ ಮೂಲಕ ಸುಸೂತ್ರ ಚುನಾವಣೆಗೆ ನಿಯಮಾನುಸಾರ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

    ಚೆಕ್‌ಪೋಸ್ಟ್‌ಗಳಲ್ಲಿ ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡಬೇಕು. ಅಕ್ರಮ ಚಟುವಟಿಕೆಗಳಿಗೆ ಕಾನೂನು ಕ್ರಮ ಜರುಗಿಸಬೇಕು. ರಾಜಕೀಯ ಸಭೆ ಹಾಗೂ ಕಾರ್ಯಕ್ರಮದ ಸಂಪೂರ್ಣ ವಿವರವನ್ನು ವಿಡಿಯೋದಲ್ಲಿ ದಾಖಲಿಸಬೇಕು. ಖರ್ಚು ವೆಚ್ಚದ ಬಗ್ಗೆ ನಿಗಾವಹಿಸಿ ಮಾಹಿತಿ ಸಂಗ್ರಹಿಸಬೇಕು. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಉಲ್ಲಂಘನೆಯಾದಲ್ಲಿ ಚುನಾವಣಾ ಮಾರ್ಗಸೂಚಿ ಪ್ರಕಾರ ಕಾನೂನು ಕ್ರಮಕೈಗೊಳ್ಳಬೇಕು. ಆದ್ದರಿಂದ ಪ್ರತಿಯೊಬ್ಬರೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

    ಸಭೆ ಬಳಿಕ ತಹಸೀಲ್ದಾರ್ ಕಚೇರಿ ಸಮೀಪ ತೆರೆದಿರುವ ಕಂಟ್ರೋಲ್ ರೂಂಗೆ ತೆರಳಿದ ವೀಕ್ಷಕರು ದಾಖಲಾತಿ ಪುಸ್ತಕ ಪರಿಶೀಲಿಸಿದರು. ಈ ಸಂಬಂಧ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರು. ಬಳಿಕ ಏಕ ಗವಾಕ್ಷಿ ಕೇಂದ್ರಕ್ಕೆ ತೆರಳಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಾಲ್‌ರೋಡ್, ಅರ್ಧನಾರಿಪುರ, ಪಾಲಾರ್ ಹಾಗೂ ಸತ್ತೇಗಾಲ ಹ್ಯಾಂಡ್‌ಪೋಸ್ಟ್‌ನ ಚೆಕ್‌ಪೋಸ್ಟ್‌ಗಳನ್ನು ವೀಕ್ಷಿಸಿದರು. ಸಮಾಜ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ್, ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್, ಗ್ರೇಡ್ 2 ತಹಸೀಲ್ದಾರ್ ಧನಂಜಯ, ಶಿರಸ್ತೇದಾರ್ ನಾಗೇಂದ್ರ, ಇನ್‌ಸ್ಪೆಕ್ಟರ್ ಶಶಿಕುಮಾರ್, ಎಸ್‌ಎಸ್‌ಟಿ, ವಿಎಸ್‌ಟಿ, ವಿವಿಎಸ್‌ಟಿ ತಂಡದ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts