More

    ಜಮೀನಿನ ಪಟ್ಟಾ ವಿತರಣೆಗೆ ಕ್ರಮಕೈಗೊಳ್ಳಿ: ನಿಲೋಗಲ್ ಗ್ರಾಪಂ ಎದುರು ಫಲಾನುಭವಿಗಳ ಧರಣಿ

    ಹನುಮಸಾಗರ: ಜಮೀನಿನ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಸಮೀಪದ ನಿಲೋಗಲ್ ಗ್ರಾಪಂ ಎದುರು ನಮ್ಮ ಭೂಮಿ ನಮ್ಮ ತೋಟ ಯೋಜನೆಗೆ ಆಯ್ಕೆಯಾದ ಫಲಾನುಭವಿಗಳು ಸೋಮವಾರ ರೈತ ಸೇನಾ ಕರ್ನಾಟಕದ ನೇತೃತ್ವದಲ್ಲಿ ಧರಣಿ ನಡೆಸಿದರು.

    ಸಂಘದ ಜಿಲ್ಲಾಧ್ಯಕ್ಷ ನೀಲಪ್ಪ ಕಡಿಯವರ ಮಾತನಾಡಿ, ನಮ್ಮ ಭೂಮಿ ನಮ್ಮ ತೋಟ ಯೋಜನೆ ಗ್ರಾಮೀಣ ಭಾಗದ ಭೂರಹಿತ ಕೃಷಿ ಕೂಲಿಕಾರರಿಗೆ ಜಮೀನು ನೀಡಲು ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜಾರಿಗೆ ತಂದ ಮಹತ್ವದ ಯೋಜನೆಯಾಗಿದೆ. 2005-06 ರಲ್ಲಿ ನಿಲೋಗಲ್ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಭೂರಹಿತ ಕೃಷಿ ಕಾರ್ಮಿಕರನ್ನು ಗುರುತಿಸಿ ಎಲ್ಲ ದಾಖಲೆ ಸಂಗ್ರಹಿಸಿ 107 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಒಬ್ಬ ಫಲಾನುಭವಿಗಳಿಗೆ 5 ಗುಂಟೆಯಂತೆ ಹಂಚಿಕೆ ಮಾಡಿ, ಅವರ ಹೆಸರಿನಲ್ಲಿ ನೋಂದಣಿ ಮಾಡಿಸಲಾಗಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಸರ್ವೇ ಮಾಡಿ ಹಕ್ಕುಪತ್ರ ನೀಡಿಲ್ಲ. ಇದರಿಂದಾಗಿ 17 ವರ್ಷಗಳಿಂದ ಫಲಾನುಭವಿಗಳು ನಿತ್ಯ ಗ್ರಾಪಂಗೆ ಅಲೆದಾಡುವಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಕ್ಕುಪತ್ರ ವಿತರಣೆಗೆ ಕ್ರಮಕೈಗೊಳ್ಳಬೇಕು. ಅಲ್ಲಿವರೆಗೆ ಧರಣಿ ಮುಂದುವರಿಯಲಿದ್ದು, ಮೇ 16ರಂದು ಕುಷ್ಟಗಿ ತಾಲೂಕು ಕಚೇರಿ ಮುಂದೆ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

    ಫಲಾನುಭವಿಗಳಾದ ಶೇಖಪ್ಪ ವಡ್ಡರ್, ಪರಸಪ್ಪ ಕೊತಬಾಳ, ಈರಪ್ಪ ಮೇಟಿ, ಕಳಕಪ್ಪ ಹಡಪದ, ಮೌನೇಶ ಬಡಿಗೇರ, ಮಂಜುನಾಥ ವಡಗೇರಿ, ಮಲ್ಲಪ್ಪ ಕೊತಬಾಳ, ಶಂಕ್ರಪ್ಪ ಮೇಟಿ ಇತರರಿದ್ದರು.

    ನಿಲೋಗಲ್ ಗ್ರಾಪಂ ವ್ಯಾಪ್ತಿಯಲ್ಲಿ ನಮ್ಮ ಭೂಮಿ ನಮ್ಮ ತೋಟ ಯೋಜನೆಗೆ ಆಯ್ಕೆಯಾದ ಫಲಾನುಭವಿಗಳಿಗೆ 17 ವರ್ಷ ಕಳೆದರೂ ಯಾಕೆ ಹಕ್ಕುಪತ್ರ ನೀಡದಿರುವ ಬಗ್ಗೆ ಪರೀಶಿಲನೆ ನಡೆಸಿ, ಪಟ್ಟಾ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
    | ಎಂ.ಸಿದ್ದೇಶ, ತಹಸೀಲ್ದಾರ್, ಕುಷ್ಟಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts