More

    ಕೈಕೊಟ್ಟ ಅಧ್ಯಕ್ಷೆ, ಹದಗೆಟ್ಟ ಆಡಳಿತ

    ಆಯನೂರು: ಕೋಹಳ್ಳಿ ಗ್ರಾಮ ಪಂಚಾಯಿತಿಗೆ ಕಳೆದ 6 ತಿಂಗಳ ಹಿಂದೆ ಎಲ್.ಸುಜಾತಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಅಂದಿನಿಂದಲೂ ಪಂಚಾಯಿತಿಯಲ್ಲಿ ಒಂದಿಲ್ಲೊಂದು ಸಮಸ್ಯೆ ಉದ್ಭವಿಸುತ್ತಲೇ ಇದೆ. ಈ ಮಧ್ಯೆ ಕಳೆದ ಎರಡು ತಿಂಗಳಿಂದಲೂ ಅಧ್ಯಕ್ಷರು ಪಂಚಾಯಿತಿ ಕಡೆಗೆ ಸುಳಿದಿಲ್ಲ.
    ಪ್ರತಿ ಸಭೆಗೂ ಗೈರಾಗುತ್ತಿದ್ದು ಪಂಚಾಯಿತಿಯ ಯಾವುದೇ ನೋಟಿಸ್ ಸ್ವೀಕರಿಸುತ್ತಿಲ್ಲ. ಇದರಿಂದ ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಹೀಗಾಗಿ ಸಮಸ್ಯೆಗಳ ಸುಳಿಯಲ್ಲಿ ಗ್ರಾಮಾಡಳಿತ ಸಿಲುಕುವಂತಾಗಿದೆ. ಜನವರಿ 26ರಂದು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೂ ಬಾರದೆ ಉಪಾಧ್ಯಕ್ಷರೇ ಧ್ವಜಾರೋಹಣ ನಡೆಸಿದ್ದರು. ಅಧ್ಯಕ್ಷರ ಗೈರು ಹಾಜರಾತಿಯಿಂದ ದೈನಂದಿನ ಕೆಲಸಗಳಾದ ಸ್ವಚ್ಛತೆ, ಬೀದಿ ದೀಪಗಳ ಸಮರ್ಪಕ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ, ಕರ ವಸೂಲಿಗಾರ, ಕಂಪ್ಯೂಟರ್ ಆಪರೇಟರ್, ನೀರುಗಂಟಿ ಹಾಗೂ ಜವಾನರಿಗೆ ಡಿಸೆಂಬರ್ ಹಾಗೂ ಜನವರಿ ತಿಂಗಳ ವೇತನ ಸಿಕ್ಕಿಲ್ಲ. ಅಲ್ಲದೇ ಸಂತೆ ಮೈದಾನ ಸ್ವಚ್ಛತೆ, ಶೌಚಗೃಹ ನೋಡಿಕೊಳ್ಳುವ ದಿನಗೂಲಿ ನೌಕರರಿಗೂ ಹಣ ನೀಡಲೂ ಸಾಧ್ಯವಾಗಿಲ್ಲ.
    ಅಧ್ಯಕ್ಷರ ಅಪ್ಪಣೆ ಮೇರೆಗೆ ಕೊನೆಯದಾಗಿ ಕಳೆದ ಜನವರಿ 8ರಂದು ಸಾಮಾನ್ಯ ಸಭೆ ಕರೆಯಾಗಿತ್ತು. ಆದರೆ ಆ ಸಭೆಗೂ ಅಧ್ಯಕ್ಷರು ಹಾಜರಾಗಲಿಲ್ಲ. ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರೇ ಸಭೆ ನಡೆಸುವಂತಾಯಿತು. ಅಲ್ಲಿಂದ ಪಂಚಾಯಿತಿಗೆ ಹಾಗೂ ಸಭೆಗಳಿಗೂ ಬಾರದೆ ನಿರಂತರ ಗೈರಾಗುತ್ತಿದ್ದಾರೆ. ಅಧ್ಯಕ್ಷರ ಕರ್ತವ್ಯ ನಿರ್ಲಕ್ಷೃ ಹಾಗೂ ಗೈರು ಹಾಜರಾತಿ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಕೋಹಳ್ಳಿ ಪಂಚಾಯಿತಿಯಿದ ಮನವಿ ಹಾಗೂ ವರದಿ ಸಲ್ಲಿಸಲಾಗಿದೆ.
    ಈ ಹಿನ್ನೆಲೆಯಲ್ಲಿ ತಾಪಂ ಇಒ ಜನವರಿ 25ರಂದು ಪಂಚಾಯಿತಿಗೆ ಬಂದು ಪರೀಶೀಲನೆ ನಡೆಸಿ ಮೇಲಧಿಕಾರಿಗಳಿಗೆ ವರದಿ ನೀಡಿದ್ದಾರೆ. ಮೇಲಧಿಕಾರಿಗಳು ಪರಿಶೀಲನೆಗೆಂದು ಪಂಚಾಯಿತಿಗೆ ಆಗಮಿಸಿದ್ದ ಸಂದರ್ಭದಲ್ಲಿಯೂ ಉಳಿದ 10 ಸದಸ್ಯರು ಮಾತ್ರವೇ ಹಾಜರಿದ್ದು ಅಧ್ಯಕ್ಷರು ಗೈರು ಹಾಜರಾಗಿದ್ದರು. ಅಲ್ಲದೆ ದೂರವಾಣಿ ಮಾಡಿದರೂ ಸ್ವೀಕರಿಸಲಿಲ್ಲ ಎನ್ನಲಾಗಿದೆ. ಇದೆಲ್ಲದರ ಬಗ್ಗೆ ಪಂಚಾಯಿತಿ ಸದಸ್ಯರ ನಿಯೋಗವೊಂದು ಉಪವಿಭಾಗಾಧಿಕಾರಿ, ಜಿಪಂ ಸಿಇಒಗೆ ದೂರು ನೀಡಿದೆ.
    ಅಧ್ಯಕ್ಷರ ಗೈರು ಹಾಜರಿಯಿಂದ ಸಮಸ್ಯೆಗಳು: ನಿಧಿ 1ರ ವೆಚ್ಚ ಭರಿಸುವ ಒಟ್ಟು 6,58,429 ರೂ. ಮೊತ್ತದ 10 ಚೆಕ್ ಅಧ್ಯಕ್ಷರ ಸಹಿಗೆ ಕಾದು ಕುಳಿತಿವೆ. 15ನೇ ಹಣಕಾಸು ಯೋಜನೆಯ ಎರಡು ಬಿಲ್ 1,73,638 ರೂ. ಬಾಕಿ ಉಳಿದಿದೆ. ಕುಡಿಯುವ ನೀರಿನ ಮೋಟಾರ್ ಹಾಗೂ ಬೀದಿದೀಪಗಳ ಚೆಕ್ ಮೊತ್ತ 2 ಲಕ್ಷ ರೂ. ಬಾಕಿ ಉಳಿದಿದೆ. ಪಿಎಂ ವಿಶ್ವಕರ್ಮ ಯೋಜನೆಯ 96 ಅರ್ಜಿಗಳು ಪರಿಶೀಲನೆ ಆಗದೆ ಉಳಿದಿವೆ.ಬಿಎಸ್‌ಎನ್‌ಎಲ್ ಬಿಲ್ ಪಾವತಿ ಸಾಧ್ಯವಾಗದ ಕಾರಣ ಜನವರಿ 18ರಿಂದ ಇಂಟರ್‌ನೆಟ್ ಸಂಪರ್ಕ ಕಡಿತ.
    ಸಭಾ ನಡಾವಳಿಗೂ ಇಲ್ಲ ಸಹಿ: ಅಧ್ಯಕ್ಷರಾಗಿ ಆಯ್ಕೆಯಾದಾಗಿನಿಂದ ನಡೆದ ಸಾಮಾನ್ಯ ಸಭೆಯ ನಡಾವಳಿಗಳಿಗೂ ಸುಜಾತಾ ಅವರು ಸಹಿ ಮಾಡಿಲ್ಲ. ನರೇಗಾ ಕಾಮಾಗಾರಿ ಚಾಲ್ತಿಯಲ್ಲಿದ್ದು ಕೂಲಿ ಹಣ ಪಾವತಿ ವಿಳಂಬವಾಗುತ್ತಿದೆ. 2024-25ನೇ ಸಾಲಿನ ನರೇಗಾ ಸಮಗ್ರ ಕ್ರಿಯಾ ಯೋಜನೆಗೆ ಹಾಗೂ 2023-24ನೇ ಸಾಲಿನ ಹದಿನೈದನೇ ಹಣಕಾಸು ಅನುದಾನದ ಕ್ರಿಯಾಯೋಜನೆ ಪ್ರತಿಗೂ ಸಹಿ ಮಾಡುತ್ತಿಲ್ಲ. ಸಾರ್ವಜನಿಕರ ಅರ್ಜಿಗಳಿಗೆ ಸಹಿ ಆಗುತ್ತಿಲ್ಲ. ಇ-ಸ್ವತ್ತು, ಲೈಸೆನ್ಸ್, ಹಕ್ಕುಪತ್ರಗಳ ಖಾತೆ ಬದಲಾವಣೆ ಇತರ ಕೆಲಸಗಳಿಗೆ ಅಡ್ಡಿ ಆಗುತ್ತಿದೆ ಎಂದು ಮೇಲಧಿಕಾರಿಗಳಿಗೆ ಪಂಚಾಯಿತಿ ಸದಸ್ಯರು ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
    ನನ್ನ ಮಾತಿಗಿಲ್ಲ ಕಿಂಚಿತ್ತೂ ಬೆಲೆ:
    ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ನಾನು ಗ್ರಾಮದ ಅಭಿವೃದ್ಧಿ ವಿಚಾರವಾಗಿ ಸಾಕಷ್ಟು ಆಸೆ ಇಟ್ಟುಕೊಂಡಿದ್ದೆ. ನನ್ನ ಮಾತಿಗೆ ಕಿಂಚಿತ್ತು ಬೆಲೆ ಇಲ್ಲ. ನಾನು ಅಧ್ಯಕ್ಷರಾದರೂ ಪಂಚಾಯಿತಿಯಲ್ಲಿ ಕೆಲವೇ ಸದಸ್ಯರ ಮಾತಿಗೆ ಮನ್ನಣೆ ನೀಡಲಾಗುತ್ತಿದೆ ಎಂದು ಅಧ್ಯಕ್ಷೆ ಎಲ್.ಸುಜಾತಾ ಹೇಳಿದರು. ಎಂಎನ್‌ಆರ್‌ಐಜಿ ಕಾಮಗಾರಿ 3 ವರ್ಷಗಳಿಂದ ನಿಂತಿದೆ. 20 ಲಕ್ಷ ರೂ. ಅನುದಾನದ ಶಾಲಾ ಕಾಂಪೌಂಡ್ ಮಾಡಿಸಿಕೊಡಿ ಎಂದು ಹೇಳಿದ್ದೆ ನನ್ನ ತಪ್ಪಾಗಿದೆ. ಹಲವು ಕಾಮಗಾರಿಗಳು ನನ್ನ ಗಮನಕ್ಕೆ ತಾರದೆ ನಡೆಯುತ್ತಿದ್ದು ನನ್ನ ಸಹಿ ಇಲ್ಲದೆ ಹಣ ಗುತ್ತಿಗೆದಾರರಿಗೆ ನೀಡಲಾಗುತ್ತಿದೆ. ಇದನ್ನು ಪ್ರಶ್ನಿಸಿದರೆ ಪಿಡಿಒ ಹಾರಿಕೆ ಉತ್ತರ ನೀಡುತ್ತಾರೆ. ಅಧ್ಯಕ್ಷರಾಗಿ ಸ್ಥಾನದಲ್ಲಿದ್ದರೂ ನನ್ನ ಗಮನಕ್ಕೆ ಯಾವುದೇ ವಿಷಯವನ್ನು ತಾರದೆ ಕೆಲಸವನ್ನು ಮಾಡುತ್ತಿದ್ದಾರೆ. ಪ್ರತಿ ತಿಂಗಳು ಸಾಮಾನ್ಯ ಸಭೆಯಲ್ಲಿ ಇದೇ ವಿಷಯ ಚರ್ಚೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿಗೆ ಸಂಬಂಧಿಸಿದ ದಾಖಲೆ ಕೇಳಿದರೆ ಹಾರಿಕೆಯ ಮತ್ತು ಉಡಾಫೆ ಉತ್ತರ ನೀಡುತ್ತಾರೆ. ಈ ಬಗ್ಗೆ ಸಿಎಸ್ ಅವರ ಗಮನಕ್ಕೂ ತಂದಿದ್ದೇನೆ. ಹೀಗಾಗಿಯೇ ನಾನು ಪಂಚಾಯಿತಿಗೆ ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
    ಗೈರು ಹಾಜರಾತಿ ಬಗ್ಗೆ ಅಧ್ಯಕ್ಷೆ ಯಾವುದೇ ಲಿಖಿತ ಮಾಹಿತಿ ನೀಡಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬೋರ್‌ವೆಲ್ಗಳಲ್ಲಿ ನೀರು ಕಡಿಮೆ ಆಗುತ್ತಿದ್ದು ದುರಸ್ತಿ ಮಾಡಿಸಲು ಹಾಗೂ ಮೋಟಾರ್ ಖರೀದಿಸಲು, ಎಸ್‌ಎಲ್ಡಬ್ಲುೃಎಂ ಘಟಕದಲ್ಲಿ ಹಸಿ ಕಸ ಸಂಗ್ರಹಣೆಗೆ ತೊಟ್ಟಿ ನಿರ್ಮಾಣಕ್ಕೆ, ಪಂಚಾಯಿತಿ ಕಾರ್ಯನಿರ್ವಹಣೆಗೆ ಇಂಟರ್ನೆಟ್ ಅವಶ್ಯಕತೆ ಇದ್ದು ಬಿಎಸ್ ಎನ್‌ಎಲ್ಗೆ ಬಿಲ್ ಪಾವತಿಗೆ ಸಮಸ್ಯೆ ಆಗುತ್ತಿದೆ ಎನ್ನುತ್ತಾರೆ ಪಿಡಿಒ ರುದ್ರಸ್ವಾಮಿ.
    ಕೋಹಳ್ಳಿ ಗ್ರಾಪಂ ಅಧ್ಯಕ್ಷರು ಪಂಚಾಯಿತಿಗೆ ಸರಿಯಾಗಿ ಬರುತ್ತಿಲ್ಲ. ಯಾವುದೇ ಕೆಲಸಗಳಿಗೆ ಸ್ಪಂದಿಸುತ್ತಿಲ್ಲ ಎಂಬ ದೂರು ಬಂದಿತ್ತು. ದೂರಿನಂತೆ ಪಂಚಾಯಿತಿಗೆ ಹೋಗಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಅಧ್ಯಕ್ಷರು ನನಗೆ ಕೆಲವು ಸಮಸ್ಯೆಗಳಿವೆ. ಅದನ್ನು ಬಗೆಹರಿಸಿಕೊಡಿ ಆಗ ಪಂಚಾಯಿತಿಗೆ ಬರುತ್ತೇನೆ ಎಂದು ತಿಳಿಸಿದ್ದರು. ಅವರ ಸಮಸ್ಯೆಗಳನ್ನು ಬಗೆಹರಿಸಿಕೊಡಲಾಗಿದೆ. ಆದರೂ ಪಂಚಾಯಿತಿಗೆ ಬರುತ್ತಿಲ್ಲ. ಈ ವಿಷಯದ ಬಗ್ಗೆ ಸಮಗ್ರವಾಗಿ ಜಿಲ್ಲಾ ಪಂಚಾಯಿತಿ ಸಿಇಒಗೆ ವರದಿ ನೀಡಲಾಗಿದೆ ಎಂದರು ಶಿವಮೊಗ್ಗ ತಾಪಂ ಇಒ ಅವಿನಾಶ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts