More

    ಆಕರ್ಷಿಸುತ್ತಿರುವ ಫಲ-ಪುಷ್ಪ ಪ್ರದರ್ಶನ; ಗಣ್ಯರ ಪ್ರತಿಕೃತಿ ರಚನೆಗೆ ಸಾರ್ವಜನಿಕರು ಫಿದಾ

    ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಯುವಸಮೂಹ

    ಹಂಪಿ: ಮಾತಂಗ ಪರ್ವತ ಮೈದಾನದಲ್ಲಿ ತೋಟಗಾರಿಕೆ ಇಲಾಖೆ ಶುಕ್ರವಾರ ಆಯೋಜಿಸಿದ್ದ ಫಲ-ಪುಷ್ಪ ಪ್ರದರ್ಶನ ಪ್ರವಾಸಿಗರು, ಸಾರ್ವಜನಿಕರನ್ನು ಆಕರ್ಷಿಸಿತು.

    ವಿವಿಧ ಪುಷ್ಪಗಳಿಂದ ಅಲಂಕೃತವಾಗಿರುವ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಗೋಪುರ, ಕಾಂತಾರ ದೈವ ಚಿತ್ರ, ಪುನೀತ್ ರಾಜಕುಮಾರ, ಗ್ರಾಮೀಣ ಸೋಗಡನ್ನು ಬೀರುವ ಗುಡಿಸಲು, ವರ್ಟಿಕಲ್ ಗಾರ್ಡನ್, ಹೂವಿನ ಅಲಂಕಾರದಲ್ಲಿ ಬಾತುಕೋಳಿ, ಒಂದು ಜಿಲ್ಲೆ, ಒಂದು ಉತ್ಪನ್ನ, ಹನಿ ನೀರಾವರಿ, ನೈಸರ್ಗಿಕ ರಂಗೋಲಿ….ಹೀಗೆ ನಾನಾ ರೀತಿಯ ರಚನೆಗಳು ಗಮನ ಸೆಳೆದವು.

    ಮುತ್ತು, ರತ್ನ, ವಜ್ರ, ವೈಢೂರ‌್ಯಗಳನ್ನು ಮಾರುವ ಸಾಲು ಮಂಟಪದ ಪ್ರತಿರೂಫ ರಾರಾಜಿಸುತ್ತಿವೆ. ಒಣ ತೆಂಗಿನ ಕಾಯಿಯಲ್ಲಿ ಮೂಡಿದ ವಿವಿಧ ಕಲಾಕೃತಿಗಳು, ಉಗ್ರನರಸಿಂಹ, ಶ್ರೀಕೃಷ್ಣದೇವರಾಯ ಮೂರ್ತಿಗಳು ಕಣ್ಣಿಗೆ ಕಟ್ಟುವಂತಿವೆ. ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮಿಜಿ, ಗದುಗಿನ ಶ್ರೀ ಪುಟ್ಟರಾಜ ಗವಾಯಿಗಳು, ತುಮಕೂರಿನ ಶ್ರೀ ಸಿದ್ದಗಂಗ ಶಿವಕುಮಾರ ಸ್ವಾಮಿಗಳ ಚಿತ್ರವನ್ನು ರಂಗೋಲಿಯಲ್ಲಿ ಅರಳಿಸಲಾಗಿದೆ.

    ವಿಜಯನಗರ ಜಿಲ್ಲೆಯಲ್ಲಿ ಬರುವ ಆರು ತಾಲೂಕುಗಳಲ್ಲಿ ಬೆಳೆಯುವ ಬೆಳೆಗಳ ಪ್ರದರ್ಶನವೂ ನಡೆಯುತ್ತಿದೆ. ಹಡಗಲಿಯ ಮಲ್ಲಿಗೆ, ಹರಪನಹಳ್ಳಿಯ ಟೊಮ್ಯಾಟೋ, ಮೆಣಸಿನಕಾಯಿ, ಹೊಸಪೇಟೆಯ ಬಾಳೆ, ಕೊಟ್ಟೂರಿನ ಈರುಳ್ಳಿ, ಕೂಡ್ಲಿಗಿಯ ಹುಣಸೆ, ಹಗರಿಬೊಮ್ಮನಹಳ್ಳಿಯ ದಾಳಿಂಬೆ ಬೆಳೆಗಳು ಪ್ರದರ್ಶನ ವಿಜಯನಗರ ಜಿಲ್ಲೆಯ ನೆಲದ ಸೊಗಡನ್ನು ಬಿತ್ತರಿಸುತ್ತಿವೆ.

    ಕೈಚಳಕದಲ್ಲಿ ಅರಳಿದ ಕೃತಿಗಳು: ಕಲ್ಲಂಗಡಿಯಲ್ಲಿ ಅರಳಿದ ವಿವಿಧ ಕಲಾಕೃತಿಗಳು ಸಹ ಆಕರ್ಷಕವಾಗಿವೆ. ಅರಳಿ ಎಲೆಯಲ್ಲಿ ದ.ರಾ.ಬೇಂದ್ರ, ಕಾಂತಾರ, ಡಾ.ಬಿ.ಆರ್.ಅಂಬೇಡ್ಕರ್, ಡಾ. ರಾಜಕುಮಾರ ಅವರ ಆಕೃತಿಗಳು ಹಾಗೂ ಭೂತಕೋಲ ನಿಸರ್ಗ ದೈವದ ಕಾಂತಾರ ಪ್ರೇಕ್ಷಕರ ಮೆಚ್ಚುಗೆಯಾದವು. ಹೂವಿನಿಂದ ಅಲಂಕರಿಸಿದ ಪುರಂದರ ದಾಸರ ಮಂಟಪ ಗಮನ ಸೆಳೆಯುತ್ತಿದೆ.

    ಮುದ ನೀಡುವ ಕಾಂತಾರ ಮಾದರಿ: ವಿವಿಧ ಪುಷ್ಪಗಳಿಂದ ಸೈಕಲ್ ಮಾದರಿಯನ್ನು ಹಾಗೂ ಗ್ರಾಮೀಣ ಸೊಗಡಿನ ಚಿತ್ರಗಳನ್ನು ನಿರ್ಮಿಸಲಾಗಿದೆ. ಇವು ಮಕ್ಕಳನ್ನು ಆಕರ್ಷಿಸುತ್ತಿವೆ. ಮಹಿಳೆಯರು, ಯುವಕರಿಗೆ ಕಾಂತಾರ ದೈವದ ಚಿತ್ರ ಇಷ್ಟವಾಗುತ್ತಿದೆ. ಇದೇ ವೇಳೆ ತೋಟಗಾರಿಕೆ ಇಲಾಖೆಯ ಬಳ್ಳಾರಿ-ವಿಜಯನಗರ ಉಪನಿರ್ದೇಶಕ ಎಸ್.ಪಿ.ಭೋಗಿ ಮತ್ತು ಸಿಬ್ಬಂದಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿರುವುದು ಕಂಡು ಬಂತು. ಯುವಕರು, ಯುವತಿಯರು, ಪ್ರವಾಸಿಗರು ತಮಗಿಷ್ಟವಾದ ಮಾದರಿಯ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವುದು ಕಂಡುಬಂತು.

    ಆಕರ್ಷಿಸುತ್ತಿರುವ ಫಲ-ಪುಷ್ಪ ಪ್ರದರ್ಶನ; ಗಣ್ಯರ ಪ್ರತಿಕೃತಿ ರಚನೆಗೆ ಸಾರ್ವಜನಿಕರು ಫಿದಾ

    ಹಂಪಿಯ ವಿರೂಪಾಕ್ಷ ದೇಗುಲ, ಭೂತಕೋಲ ನಿಸರ್ಗದೈವದ ಕಾಂತಾರ, ಡಾ.ಪುನೀತ್ ರಾಜಕುಮಾರ, ಶ್ರೀ ಸಿದ್ದೇಶ್ವರ ಸ್ವಾಮಿಜಿ, ಶ್ರೀ ಸಿದ್ದಗಂಗ ಶ್ರೀಗಳ ಪ್ರತಿಕೃತಿಗಳನ್ನು ರಂಗೋಲಿ ಹಾಗೂ ಹೂವುಗಳಿಂದ ರಚಿಸಿದ್ದು ಕಂಡು ಖುಷಿಯಾಯಿತು.
    | ಪಾರ್ವತಿ, ಮಂಜುಳಾ ಕೊಪ್ಪಳದಿಂದ ಬಂದ ಪ್ರವಾಸಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts