More

    ಓದದಿದ್ದರೂ ರಂಗಕಲೆಗೆ ಡಾಕ್ಟರೇಟ್

    ಹಂಪಿ : (ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆ)

    ಸಮಾಜದಲ್ಲಿ ಮಹಿಳೆಯರು ಪುರುಷರಷ್ಟೇ ಪ್ರಮುಖರಾಗಿದ್ದು, ಮಹಿಳಾ ವಿಚಾರಗೋಷ್ಠಿ ಏರ್ಪಡಿಸಿದ್ದು ಸಕಾಲಿಕವಾಗಿದೆ ಎಂದು ರಂಗಭೂಮಿ ಕಲಾವಿದೆ ಡಾ.ಕೆ.ನಾಗರತ್ನಮ್ಮ ಹೇಳಿದರು.

    ಹಂಪಿ ಉತ್ಸವದಲ್ಲಿ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಶನಿವಾರ ಮಾತನಾಡಿದರು. ಮಹಿಳಾ ಗೋಷ್ಠಿಗೆ ಕಾಲೇಜು ವಿದ್ಯಾರ್ಥಿಗಳನ್ನು ಆಹ್ವಾನಿಸಿದ್ದರೆ ಚೆನ್ನಾಗಿತ್ತು. ನಾನು ಓದು, ಬರಹ ಕಲಿತಿಲ್ಲ. ಆದರೆ, ರಂಗಭೂಮಿಯಲ್ಲಿನ ಸಾಧನೆಗೆ ಗೌರವ ಡಾಕ್ಟರೇಟ್ ನೀಡಿದ್ದಾರೆ. ನನ್ನ ಜೀವನ ಚರಿತ್ರೆ ಬರೆದಿದ್ದು ಬಿಟ್ಟರೆ ಬೇರೆ ಸಾಹಿತ್ಯ ಕೃಷಿ ಮಾಡಿಲ್ಲ. ಕಲೆಯಲ್ಲೇ ಜೀವನ ಕಳೆದಿದ್ದೇನೆ ಎಂದರು.

    ಕಾರ್ಯಕ್ರಮದ ನೋಡಲ್ ಅಧಿಕಾರಿ ನಾಗರಾಜ ಹವಾಲ್ದಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಉತ್ಸವದಲ್ಲಿ ಮೊದಲಿಗೆ ಮಹಿಳಾ ವಿಚಾರ ಗೋಷ್ಠಿ ನಿಗದಿ ಮಾಡಿರಲಿಲ್ಲ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಮಹಿಳೆಯರಿಗೆ ಆದ್ಯತೆ ಕಲ್ಪಿಸುವ ನಿಟ್ಟಿನಲ್ಲಿ ಮಹಿಳಾ ವಿಚಾರ ಸಂಕಿರಣ ಹಾಗೂ ಕವಿಗೋಷ್ಠಿ ಆಯೋಜಿಸಲಾಗಿದೆ ಎಂದರು. ಸಾಹಿತಿ ಎನ್.ಡಿ.ವೆಂಕಮ್ಮ ಅಧ್ಯಕ್ಷತೆ ವಹಿಸಿದ್ದರು. ಚಿಂತಕಿ ಬಿ.ಎನ್.ಸುಜಾತಾ, ಸಾಹಿತಿ ಎಚ್. ಸೌಭಾಗ್ಯಲಕ್ಷ್ಮೀ, ಡಾ.ನಿರ್ಮಲಾ ಶಿವನಗುತ್ತಿ, ಡಾ.ನಾಗಪುಷ್ಪಲತಾ ವಿವಿಧ ವಿಷಯಗಳ ಕುರಿತು ಪ್ರಬಂಧ ಮಂಡಿಸಿದರು.

    ಶಿಕ್ಷಣ ತಜ್ಞರಾಗಿದ್ದ ವಚನಗಾರ್ತಿಯರು

    ಸಾಹಿತಿ ಸುಧಾ ಚಿದಾನಂದಗೌಡ ಅವರು ಶಿಕ್ಷಣದ ಬೆಳಕಿನಲ್ಲಿ ಮಹಿಳೆ ಕುರಿತು ವಿಚಾರ ಮಂಡಿಸಿದರು. ಸೂರ್ಯ ಉದಯಿಸುವ ಮುನ್ನವೇ ಮಹಿಳೆಯರು ಎದ್ದು ಕೆಲಸ ಆರಂಭಿಸುತ್ತಾರೆ. 19ನೇ ಶತಮಾನದವರೆಗೆ ಮಹಿಳೆಯರು ಕತ್ತಲಲ್ಲಿ ಇದ್ದರು. ಮಹಿಳೆಯರನ್ನು ಭೋಗದ ವಸ್ತುವಾಗಿ ಪುರುಷ ಸಮಾಜ ಬಳಸಿಕೊಂಡಿದೆ. ಆದರೆ, 12ನೇ ಶತಮಾನದಲ್ಲಿ ವಚನ ಚಳವಳಿ ಮೂಲಕ ಮಹಿಳೆಯರು ಶಿಕ್ಷಣವಂತರಾದರು. ವ್ಯಕ್ತಿಗತ ತೊಳಲಾಟಗಳು, ಸಮಾಜದ ಅಂಕುಡೊಂಕುಗಳು, ಸಮಸ್ಯೆಗಳಿಗೆ ವಚನಗಳ ಮೂಲಕ ಪರಿಹಾರ ನೀಡಿದರು. ಅವರೆಲ್ಲ ಶಿಕ್ಷಣ ತಜ್ಞರಾಗಿದ್ದು, ಕೆಲ ವಚನಗಾರ್ತಿಯರ ವಚನಗಳು ಇಂದಿಗೂ ಲಭ್ಯವಾಗಿಲ್ಲ. ವಚನಗಾರ್ತಿಯರು ನಿಜವಾದ ಬೆಳಕಿನ ಕಿರಣಗಳಾಗಿದ್ದು, ಸ್ವಾತಂತ್ರೃ ನಂತರ ಸಾವಿತ್ರಿಬಾಯಿ ಫುಲೆ ಅವರು ಮಹಿಳಾ ಶಿಕ್ಷಣಕ್ಕಾಗಿ ಶ್ರಮಿಸಿದರು. ಜ್ಯೋತಿ ಬಾ ಫುಲೆ ಸಹ ಮಹಿಳಾ ಶಿಕ್ಷಣಕ್ಕಾಗಿ ಶ್ರಮಿಸಿದರು ಎಂದು ಅಭಿಪ್ರಾಯಪಟ್ಟರು.

    ವಿಜಯನಗರ ಕಾಲದಲ್ಲಿ ಪುರುಷರಷ್ಟೇ ಸಮಾನ ಸ್ಥಾನ

    ಸಂಸ್ಕೃತಿ ಕಾಪಿಟ್ಟ ಮಹಿಳೆಯರು ಕುರಿತು ಸಾಹಿತಿ ಎ.ಎಂ.ಜಯಶ್ರೀ ವಿಚಾರ ಮಂಡಿಸಿ, ಪರಕೀಯರ ದಾಳಿಯಿಂದ ನಮ್ಮ ಸಂಸ್ಕೃತಿ ಹಾಳಾಗುತ್ತಿದ್ದ ಸಮಯದಲ್ಲಿ ಅದನ್ನು ಎತ್ತಿ ಹಿಡಿದು ಜಗತ್ತಿಗೆ ಸಾರಿದ ಕೀರ್ತಿ ವಿಜಯನಗರ ಸಾಮ್ರಾಜ್ಯಕ್ಕೆ ಸಲ್ಲುತ್ತದೆ. ಬಿಷ್ಟಪ್ಪಯ್ಯ ಗೋಪುರ ನಿರ್ಮಾಣ ವೇಳೆ ಅವರ ಗರ್ಭಿಣಿ ಹೆಂಡತಿಯನ್ನು ಬಲಿ ನೀಡಲಾಗಿದೆ. ವಿಜಯನಗರದ ಮಹಿಳೆಯರು ತೋರಿದ ಆ ಗಟ್ಟಿತನ ಇಂದಿಗೂ ಮುಂದುವರೆದಿದೆ ಎಂದರು. ಸಂಸ್ಕೃತಿಯ ಪ್ರಧಾನ ಲಕ್ಷಣ ಇತರರಿಗೆ ಸಂತೋಷ ಕೊಡುವುದು ಹಾಗೂ ಪರರ ಹಿತ ಕಾಯುವುದು ಆಗಿದೆ. ದಕ್ಷತೆ, ಸತ್ಯ ಸಂಧತೆ, ಪಾಂಡಿತ್ಯ, ಪ್ರತಿಭೆ ಹೀಗೆ ಅನೇಕ ಒಳಿತುಗಳ ಮ್ಮಿಶ್ರಣ ನಮ್ಮ ಸಂಸ್ಕೃತಿಯಾಗಿದ್ದು, ಸದಾ ಕಾಲ ಬೆಳವಣಿಗೆ ಮತ್ತು ಬದಲಾವಣೆಗೆ ತೆರೆದುಕೊಳ್ಳುತ್ತದೆ. ಸಂಸ್ಕೃತಿಯನ್ನು ಸಂಪೂರ್ಣವಾಗಿ ವ್ಯಾಖ್ಯಾನಿಸಲು ಅಸಾಧ್ಯ. ವಿದ್ಯಾಭ್ಯಾಸ ಮಾಡಿ ಪಾಂಡಿತ್ಯ ಪಡೆದರೆ ಸಂಸ್ಕೃತಿ ಬರುವುದಿಲ್ಲ. ಶರಣ ಚಳವಳಿ ಮಹಿಳೆಯರಿಗೆ ಸಮಾನ ಸ್ಥಾನ ಪ್ರತಿಪಾದಿಸಿತು. ವಿಜಯನಗರ ಅರಸರ ಕಾಲದಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಸ್ಥಾನಮಾನ ನೀಡಲಾಗಿತ್ತು ಎಂದು ಪ್ರತಿಪಾದಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts