More

    ಸಹಜ ಸ್ಥಿತಿಗೆ ಮರಳಿದ ಹಂಪಿ

    ಮಂಜುನಾಥ ಅಯ್ಯಸ್ವಾಮಿ

    ಹಂಪಿ: ಮೂರು ದಿನಗಳ ಕಾಲ ಹಂಪಿ ಉತ್ಸವ ಹಿನ್ನೆಲೆಯಲ್ಲಿ ಲಕ್ಷಾಂತರ ಜನರಿಂದ ತುಂಬಿದ್ದ ವಿಶ್ವವಿಖ್ಯಾತ ಹಂಪಿ ಬೀದಿಗಳು ಸೋಮವಾರ ಬಿಕೋ ಎನ್ನುತ್ತಿದ್ದವು.

    ಐನೂರು ವರ್ಷಗಳ ಹಿಂದೆ ವಿಜಯನಗರ ಅರಸರು ಹಂಪಿಯಲ್ಲಿ ಮುತ್ತು ರತ್ನಗಳನ್ನು ಬೀದಿಯಲ್ಲಿ ಮಾರುತ್ತಿದ್ದರು. ಇಲ್ಲಿನ ವೈಭವವನ್ನು ಇತಿಹಾಸಕಾರರು ದಾಖಲಿಸಿದ್ದಾರೆ. ಲೇಖಕರು ಬರವಣಿಗೆಯಲ್ಲಿ ಹಂಪಿಯನ್ನು ಬಣ್ಣಿಸಿದ್ದಾರೆ. ವಿಜಯನಗರ ಗತವೈಭವ ಸಾರುವ ಹಂಪಿ ಉತ್ಸವವನ್ನು ಸರ್ಕಾರ ನಿಗದಿತ ದಿನಗಳಲ್ಲಿ ಅದ್ದೂರಿಯಿಂದ ಆಚರಿಸುತ್ತಿದೆ. ಕಳೆದ ಮೂರು ದಿನಗಳಿಂದ ಸೇರಿದ್ದ ಜನಸ್ತೋಮದಲ್ಲಿ ಸ್ಥಳೀಯರು ಸೇರಿದಂತೆ ವಿವಿಧ ಭಾಗಗಳ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದರು. ಈಗ ಕೆಲ ಪ್ರವಾಸಿಗರನ್ನು ಹೊರತುಪಡಿಸಿದರೆ ಹಂಪಿಯ ಬೀದಿಗಳು ಜನರಿಲ್ಲದೆ ಭಣಗುಡುತ್ತಿವೆ.

    ಉತ್ಸವಕ್ಕಾಗಿ ನಿರ್ಮಿಸಿದ ವೇದಿಕೆಗಳನ್ನು ತೆರವುಗೊಳಿಸುವ ಕಾರ್ಯ ಸೋಮವಾರ ಬೆಳಗಿನಿಂದ ಶುರುವಾಯಿತು. ವೇದಿಕೆಗಳಿಗೆ ಹಾಕಲಾಗಿದ್ದ ಸೌಂಡ್ ಸಿಸ್ಟಮ್ ಮತ್ತು ಲೈಟ್‌ಗಳು, ಕುರ್ಚಿಗಳನ್ನು ಸಾಗಿಸುವ ಕಾರ್ಯದಲ್ಲಿ ನೂರಾರು ಕಾರ್ಮಿಕರು ತೊಡಗಿದ್ದರು. ಉತ್ಸವದ ಅಂಗವಾಗಿ ಮಾತಂಗ ಪರ್ವತದ ಮೈದಾನದಲ್ಲಿ ಹಾಕಲಾಗಿದ್ದ ಸಿರಿಧಾನ್ಯ ಪ್ರದರ್ಶನ, ಆಹಾರ ಮೇಳ, ಪುಸ್ತಕ ಪ್ರದರ್ಶನ, ಕರಕುಶಲ ವಸ್ತು ಪ್ರದರ್ಶನ ಸೇರಿದಂತೆ ಇತರೆ ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನೂ ತೆರವುಗೊಳಿಸುವ ಕಾರ್ಯ ನಡೆಯಿತು. ಅಲ್ಲಲ್ಲಿ ಹಾಕಲಾಗಿದ್ದ ಸಣ್ಣಪುಟ್ಟ ಹೋಟೆಲ್ ಸೇರಿದಂತೆ ಮಳಿಗೆಗಳನ್ನು ತೆರವುಗೊಳಿಸುತ್ತಿದ್ದ ದೃಶ್ಯ ಹಂಪಿಯಲ್ಲಿ ಕಂಡುಬಂತು. ಉತ್ಸವ ಸಮಾರೋಪಗೊಂಡಿದ್ದರಿಂದ ವಾಹನ ಪ್ರವೇಶಕ್ಕೆ ಹೇರಲಾಗಿದ್ದ ನಿರ್ಬಂಧ ಹಾಗೂ ಏಕಮುಖ ಸಂಚಾರ ಸ್ಥಗಿತಗೊಳಿಸಿದ್ದು, ಎಂದಿನಂತೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

    ಉತ್ಸವಕ್ಕೆ ಜನಸಾಗರವೇ ಹರಿದು ಬಂದಿದ್ದರಿಂದ ಹಂಪಿ ಬೀದಿಗಳಲ್ಲಿ ಕಸದ ರಾಶಿ ತುಂಬಿತ್ತು. ಹಂಪಿ ಗ್ರಾಪಂ ಸೇರಿದಂತೆ ಕಮಲಾಪುರ, ಹೊಸಪೇಟೆ, ಮರಿಯಮ್ಮನಹಳ್ಳಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಹರಪನಹಳ್ಳಿ, ಹೂವಿನಹಡಗಲಿ ಸ್ಥಳೀಯ ಸಂಸ್ಥೆಗಳ ಪೌರಾಕಾರ್ಮಿಕರಿಂದ ಹಂಪಿ ಬೀದಿಗಳಲ್ಲಿ ಸ್ವಚ್ಛತೆ ಕಾರ್ಯ ನಡೆದಿದೆ. ಉತ್ಸವದಲ್ಲಿ ಕಾರ್ಯಕ್ರಮ ನೀಡಲು ಬಂದಿದ್ದ ಕೆಲ ಕಲಾವಿದರು ಬೆಳಗ್ಗೆಯಿಂದಲೇ ಸ್ಮಾರಕಗಳನ್ನು ವೀಕ್ಷಿಸಲು ತೆರಳಿದ್ದರು. ಭರ್ತಿಯಾಗಿದ್ದ ಲಾಡ್ಜ್‌ಗಳು ಖಾಲಿಯಾಗಿವೆ. ಉತ್ಸವದ ಸಿದ್ಧತೆಗಾಗಿ ಶ್ರಮಿಸಿದ್ದ ಅಧಿಕಾರಿಗಳು ಸೋಮವಾರ ನಿರಾಳರಾಗಿದ್ದರು. ಪ್ರವಾಸಿ ಮಾರ್ಗದರ್ಶಿಗಳು ಎಂದಿನಂತೆ ಕಾರ್ಯನಿರ್ವಹಿಸಿದರು.

    ಸಹಜ ಸ್ಥಿತಿಗೆ ಮರಳಿದ ಹಂಪಿ
    ಗಾಯತ್ರಿ ಪೀಠ ವೇದಿಕೆ ತೆರವು ಮಾಡಲಾಯಿತು.

    ಕುರ್ಚಿಗಳು ಪುಡಿ ಪುಡಿ…

    ಸಹಜ ಸ್ಥಿತಿಗೆ ಮರಳಿದ ಹಂಪಿ
    ಗಾಯತ್ರಿಪೀಠ ವೇದಿಕೆಯಲ್ಲಿ ಮುರಿದು ಬಿದ್ದಿರುವ ಕುರ್ಚಿಗಳು.

    ಗಾಯತ್ರಿ ಪೀಠದ ಪ್ರಧಾನ ವೇದಿಕೆಯಲ್ಲಿ ಮೂರು ದಿನ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಡುಗುವ ಚಳಿಯಲ್ಲೇ ಚಂದನವನದ ಸಿನಿ ತಾರೆಯರು ಸಂಗೀತದ ಮಿಂಚು ಹರಿಸಿದರು. ಗಾಯಕರು ಹಾಡುಗಳನ್ನು ಹಾಡಿ ಎಲ್ಲರ ಮನಸೂರೆಗೊಳಿಸಿದರು. ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲ ವಯೋ ಮಾನದವರು ಅವರ ಸಂಗೀತಕ್ಕೆ ಮಾರು ಹೋದರು. ಎಲ್ಲರನ್ನೂ ಮೈಮರೆತು ಕುಣಿದು ಕುಪ್ಪಳಿಸುವಂತೆ ಮಾಡಿತ್ತು. ಈ ವೇಳೆ ನೂರಾರು ಆಸನಗಳು ಮುರಿದು ಬಿದ್ದಿದ್ದು, ಸೋಮವಾರ ತೆರವು ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts