More

    ಭಾರತದ ಪೌರತ್ವ ಕೊಡುತ್ತೇವೆಂದರೆ ಅರ್ಧಕ್ಕರ್ಧ ಬಾಂಗ್ಲಾದೇಶ ಖಾಲಿಯಾಗುತ್ತದೆ: ಸಿಎಎ ವಿರೋಧಿಗಳ ಬಗ್ಗೆ ಸಿಡಿಮಿಡಿಗೊಂಡ ಸಚಿವ ಕಿಶನ್​ ರೆಡ್ಡಿ

    ನವದೆಹಲಿ: ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಿಂದ 2014ರ ಡಿಸೆಂಬರ್​ 31 ಹಾಗೂ ಅದಕ್ಕೂ ಮೊದಲು ಆಗಮಿಸಿರುವ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕ್ರಮವನ್ನು ಕಾಂಗ್ರೆಸ್​ ಸೇರಿ ಹಲವು ಪ್ರತಿಪಕ್ಷಗಳು ವಿರೋಧಿಸುತ್ತಿವೆ.

    ಅದಕ್ಕೆ ಪ್ರತಿಯಾಗಿ ಸಿಎಎಯನ್ನು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿ ಕಾಯ್ದೆಯಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಭಾರತೀಯ ಮುಸ್ಲಿಮರಿಗೆ ಏನೂ ಸಮಸ್ಯೆಯಾಗುವುದಿಲ್ಲ ಎಂದು ಸಾರಿಸಾರಿ ಹೇಳುತ್ತಿದೆ.

    ಇತ್ತೀಚೆಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಕೂಡ ಸಿಎಎ ವಿರೋಧಿಸಿ ಮಾತನಾಡಿದ್ದರು. ಇದು ಕೇಂದ್ರ ಸರ್ಕಾರದ ತಪ್ಪು ನಿರ್ಧಾರ ಎಂದು ಹೇಳಿದ್ದರು.

    ಈಗ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಜಿ.ಕಿಶನ್​ ರೆಡ್ಡಿ ಅವರು ಸಿಎಎ ವಿರೋಧಿಸುತ್ತಿರುವ ಪ್ರತಿಪಕ್ಷಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಒಂದೊಮ್ಮೆ ಬಾಂಗ್ಲಾದೇಶದಿಂದ ಯಾರೇ ಬಂದರೂ ಭಾರತದ ಪೌರತ್ವ ಕೊಡುತ್ತೇವೆ ಎಂದು ಹೇಳಿದರೆ ಇಡೀ ದೇಶದಲ್ಲಿ ಅರ್ಧದಷ್ಟು ಜನರು ಇಲ್ಲಿಗೇ ಬರುತ್ತಾರೆ. ಅವರ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ? ರಾಹುಲ್​ ಗಾಂಧಿಯವರಾ ಅಥವಾ ಕೆ.ಚಂದ್ರಶೇಖರ್​ ರಾವ್​ ಅವರಾ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

    ಹೈದರಾಬಾದ್​ನಲ್ಲಿ ನಡೆದ ಸಂತ ರವಿದಾಸ್ ಜಯಂತಿ ಆಚರಣೆಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ವಾಸವಾಗಿರುವ ಮುಸ್ಲಿಮರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಹೇಗೆ ಸಮಸ್ಯೆಯಾಗುತ್ತದೆ ಎಂಬುದನ್ನು ಕೆಸಿಆರ್ ಸ್ಪಷ್ಟಪಡಿಸಲಿ. ಸಿಎಎ ಇಲ್ಲಿನವರ ವಿರೋಧಿ ಎಂದು ಸಾಬೀತುಪಡಿಸಿಬಿಡಲಿ ಎಂದು ಸವಾಲು ಹಾಕಿದರು.

    ಒಳನುಸುಳುಕೋರರಿಗೆಲ್ಲ ಭಾರತದ ಪೌರತ್ವ ಕೊಡಬೇಕು ಎಂದು ಪ್ರತಿಪಕ್ಷಗಳು ಬಯಸುತ್ತವೆ. ಈ ದೇಶದ 130 ಕೋಟಿ ಜನರಲ್ಲಿ ಒಬ್ಬೇಒಬ್ಬರಿಗೂ ಸಿಎಎಯಿಂದ ತೊಂದರೆಯಾಗುತ್ತದೆ ಎಂದರೂ ಅದನ್ನು ಮರುಪರಿಶೀಲನೆಗೆ ಒಳಪಡಿಸಲು ಕೇಂದ್ರ ಸರ್ಕಾರ ಸಿದ್ಧ. ಆದರೆ ಪಾಕಿಸ್ತಾನ, ಬಾಂಗ್ಲಾದೇಶದ ಮುಸ್ಲಿಮರಿಗೆ ಸಮಸ್ಯೆಯಾಗುತ್ತದೆ ಎಂದೆಲ್ಲ ಹಿಂಪಡೆಯಲಾಗದು ಎಂದು ಹೇಳಿದರು.

    ತೆಲಂಗಾಣದ ಟಿಆರ್​​ಎಸ್​ ಪಕ್ಷವನ್ನು ಅಸಾದುದ್ದೀನ್​ ಓವೈಸಿಯ ಎಐಎಂಐಎಂದ ಮಿತ್ರ ಪಕ್ಷ ಎಂದು ಉಲ್ಲೇಖಿಸಿದ ಅವರು, ಟಿಆರ್​ಸ್​ ಮತಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು. (ಏಜೆನ್ಸೀಸ್​)

    ಪೌರತ್ವ ತಿದ್ದುಪಡಿ ಕಾಯ್ದೆ, ತೆಲಂಗಾಣ, ಕೆ.ಚಂದ್ರಶೇಖರ್​ ರಾವ್​, ಕೇಂದ್ರ ಗೃಹಖಾತೆ ರಾಜ್ಯ ಸಚಿವ, ಕಿಶನ್​ ರೆಡ್ಡಿ, Union Minister of State, Home Affairs, G Kishan Reddy, Citizenship Amendment Act,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts