More

    ಬಗೆಹರಿಯದ ಹಾಲಸ್ವಾಮಿ ಮಠದ ಉತ್ತರಾಧಿಕಾರಿ ಆಯ್ಕೆ

    ಸಾಸ್ವೆಹಳ್ಳಿ: ಹೋಬಳಿಯ ರಾಂಪುರ ಗ್ರಾಮದ ಶ್ರೀ ಹಾಲಸ್ವಾಮಿ ಬೃಹನ್ಮಠಕ್ಕೆ ಉತ್ತರಾಧಿಕಾರಿ ಹಾಗೂ ನೂತನ ವಟುವಿನ ಆಯ್ಕೆ ಕುರಿತು ಚರ್ಚಿಸಲು ಇತ್ತೀಚೆಗೆ ಶ್ರೀ ಮಠದ ಆವರಣದಲ್ಲಿ ಏರ್ಪಡಿಸಿದ್ದ ಭಕ್ತರ ಸಭೆಯಲ್ಲಿ ಗೊಂದಲ ಸೃಷ್ಟಿಯಾಗಿ, ಸ್ಪಷ್ಟ ನಿರ್ಣಯ ಕೈಗೊಳ್ಳದೆ ಮುಂದೂಡಲಾಯಿತು.

    ಸಾನ್ನಿಧ್ಯ ವಹಿಸಿದ್ದ ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಮುಂದಿನ ದಿನಗಳಲ್ಲಿ ಈ ವಿಷಯ ಕುರಿತಂತೆ ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಹೊನ್ನಾಳಿಯ ಹಿರೇಕಲ್ಮಠದಲ್ಲಿ ಮತ್ತೊಮ್ಮೆ ಸಭೆ ಕರೆಯಲಾಗುವುದು ಎಂದು ಹೇಳಿ, ಭಕ್ತರನ್ನು ಸಮಾಧಾನಪಡಿಸಿದರು.

    ಮೂರೂವರೆ ವರ್ಷಗಳ ಹಿಂದೆ (ಜುಲೈ 15, 2020) ರಾಂಪುರ ಶ್ರೀಮಠದ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಲಿಂಗೈಕ್ಯರಾದ ಕಾರಣಕ್ಕೆ ಶ್ರೀಮಠಕ್ಕೆ ನೂತನ ವಟುವಿನ ಆಯ್ಕೆ ಕುರಿತಂತೆ ಹಲವು ಬಾರಿ ಸಭೆ ನಡೆಸಲಾಗಿತ್ತು. ಒಮ್ಮೆ ಕಾಶಿ ಶ್ರೀಗಳ ಸಾನ್ನಿಧ್ಯದಲ್ಲೂ ಸಭೆ ನಡೆಸಿ ಶ್ರೀಮಠವು ಪುತ್ರವರ್ಗ ಮಠವಾದ ಕಾರಣಕ್ಕೆ ಲಿಂ. ಶ್ರೀಗಳ ಪೂರ್ವಾಶ್ರಮದ ಕುಟುಂಬದಲ್ಲಿಯೇ ನೂತನ ವಟುವಿನ ಆಯ್ಕೆ ಮಾಡಬೇಕು ಎಂದು ಮಠದ ಉತ್ಸವ ಮೂರ್ತಿ ಪಲ್ಲಕ್ಕಿಯ ಅಪ್ಪಣೆ ಪಡೆಯುವ ಮೂಲಕ ಅಂತಿಮ ನಿರ್ಣಯ ಕೈಗೊಳ್ಳಲಾಗಿತ್ತು.

    ನಂತರ ಲಿಂ. ಶ್ರೀಗಳ ಪೂರ್ವಾಶ್ರಮದ ಕುಟುಂಬದಲ್ಲಿ ವಟುಗಳ ಸಂಖ್ಯೆ ಹೆಚ್ಚಿರುವ ಕಾರಣಕ್ಕೆ ಆಯ್ಕೆ ಪ್ರಕ್ರಿಯೆ ತಡವಾಗಬಹುದು ಎಂಬ ಕಾರಣದಿಂದ, ಕಾಶಿ ಶ್ರೀಗಳು ಮಠಕ್ಕೆ ತಾತ್ಕಾಲಿಕ ಜವಾಬ್ದಾರಿಯನ್ನು ಲಿಂ. ಶ್ರೀಗಳ ಸಹೋದರ ಶ್ರೀ ಶಿವಕುಮಾರ ಹಾಲಸ್ವಾಮಿ ಅವರಿಗೆ ವಹಿಸಿ, ಇದರ ಲೆಕ್ಕಪತ್ರ ಮೇಲುಸ್ತುವಾರಿ ನೋಡಿಕೊಳ್ಳಲು ಹೊನ್ನಾಳಿ ಹಿರೇಕಲ್ಮಠದ ಶ್ರೀಗಳಿಗೆ ಜವಾಬ್ದಾರಿ ನೀಡಲಾಗಿತ್ತು.

    ಆದರೆ, ಶ್ರೀಮಠದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶ್ರೀ ಶಿವಕುಮಾರ ಹಾಲಸ್ವಾಮಿ ಬೇಡವೆಂದು ಕೆಲವು ಭಕ್ತರು ವಿರೋಧ ವ್ಯಕ್ತಪಡಿಸಿದರೆ, ಇನ್ನು ಕೆಲವರು ಶ್ರೀಗಳೇ ಮುಂದುವರಿಯಲಿ ಎಂದು ವಾದ ಮಂಡಿಸಿದರು. ಇದರಿಂದ ಸಭೆಯಲ್ಲಿ ಗೊಂದಲ ಸೃಷ್ಟಿಯಾಗಿ, ಸೂಕ್ತ ನಿರ್ಧಾರಕ್ಕೆ ಬರಲಾಗದ ಕಾರಣ ಹಿರೇಕಲ್ಮಠದ ಶ್ರೀಗಳು ಸಭೆಯನ್ನು ಮುಂದೂಡಿದರು.

    ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಹಾವೇರಿ ಮತ್ತಿತರ ಜಿಲ್ಲೆಗಳ ಭಕ್ತ ಸಮೂಹ ಸಭೆಯಲ್ಲಿ ಭಾಗವಹಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts