More

    ನಿರ್ಲಕ್ಷಿತ ನೀರು ಊರಿಗೆ ಆಸರೆ

    ಕುಂದಾಪುರ: ಶಿಲೆಕಲ್ಲು ಕ್ವಾರಿಯಲ್ಲಿ ನಿಂತ ಅಗಾಧ ಪ್ರಮಾಣದ ನೀರು ಬಳಸಿಕೊಳ್ಳುವ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಹಕ್ಲಾಡಿ ಗ್ರಾಮ ಪಂಚಾಯಿತಿ ಉತ್ತರ ಕಂಡುಕೊಂಡಿದೆ.

    ಬಗ್ವಾಡಿಯಲ್ಲಿ ಎರಡು ಹಾಗೂ ಕೊಳೂರಿನಲ್ಲಿ ಒಂದು ಬೃಹತ್ ಶಿಲೆಕಲ್ಲು ಹೊಂಡವಿದ್ದು, ಪ್ರಸಕ್ತ ಬಗ್ವಾಡಿಯ ಒಂದು ಶಿಲೆಕಲ್ಲು ಕ್ವಾರಿ ಹೊಂಡದ ನೀರು ಬಳಸಿ ಹೆಚ್ಚಿನ ಸಮಸ್ಯೆ ಎದುರಿಸುತ್ತಿರುವ ಬಾರಂದಾಡಿ, ಬಟ್ಟೆಕುದ್ರು, ಯಳೂರು, ತೊಪ್ಲು ಪ್ರದೇಶಕ್ಕೆ ಪೂರೈಸಲಾಗುತ್ತಿದೆ. ಮುಂದಿನ ದಿನದಲ್ಲಿ ಬಗ್ವಾಡಿ ಕ್ವಾರಿ, ಮತ್ತೊಂದು ಕಲ್ಲು ಕ್ವಾರಿ ಹೊಂಡ ಹಾಗೂ ಕೊಳೂರು ಶಿಲೆಕಲ್ಲು ಹೊಂಡದಿಂದ ನೀರು ತೆಗೆದು ಟ್ಯಾಂಕ್‌ಗಳಿಗೆ ಹಾಯಿಸಿ ಗ್ರಾಮದ ಎಲ್ಲ ಮನೆಗಳಿಗೂ 24 ಗಂಟೆ ನೀರು ಪೂರೈಸುವ ಗುರಿ ಇರಿಸಲಾಗಿದೆ.

    ಶಿಲೆಕಲ್ಲು ಕ್ವಾರಿಯಲ್ಲಿ ವ್ಯರ್ಥವಾಗುತ್ತಿದ್ದ ನೀರಿನ ಮಹತ್ವ ತೆರೆದಿಟ್ಟಿದ್ದು ವಿಜಯವಾಣಿ ಪತ್ರಿಕೆ. ಕುಂದಾಪುರದಲ್ಲಿ ಗಾಯತ್ರಿ ನಾಯ್ಕ ತಹಸೀಲ್ದಾರ್ ಆಗಿದ್ದಾಗ ಬಗ್ವಾಡಿ ಶಿಲೆಕಲ್ಲು ಕ್ವಾರಿ ಸಮಸ್ಯೆ, ಮನೆಗಳಿಗೆ ಆದ ಹಾನಿ ಕುರಿತು ವರದಿ ಮಾಡಲಾಗಿತ್ತು. ಅದಾದ ಬಳಿಕ ತಹಸೀಲ್ದಾರ್‌ಅಕ್ರಮ ಕ್ವಾರಿಗೆ ದಾಳಿ ನಡೆಸಿ ಮುಚ್ಚಿಸಿದ್ದರು. ಅಷ್ಟರಲ್ಲಿ ದೊಡ್ಡ ಹೊಂಡ ನಿರ್ಮಾಣವಾಗಿ ಅಗಾಧ ಪ್ರಮಾಣದ ನೀರು ಸಂಗ್ರಹವಾಗಿತ್ತು.

    ಗ್ರಾಮದ ಕೊಳೂರು ಹಾಗೂ ಬಗ್ವಾಡಿ ಕ್ವಾರಿಗಳಲ್ಲೂ ನೀರಿನ ಸಂಗ್ರಹವಿದ್ದು, ಇದನ್ನು ಕುಡಿಯುವ ನೀರಾಗಿ ಪರಿವರ್ತಿಸಲು ಸಾಧ್ಯ ಎಂದು ಗಮನ ಸೆಳೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಜಿಪಂ ಸಿಇಒ ಪ್ರಭಾಕರ ಶರ್ಮ ಸ್ಥಳ ಪರಿಶೀಲಿಸಿದ್ದರು. ಅಂದಿನ ಜಿಲ್ಲಾಧಿಕಾರಿ ಎಂ.ಟಿ.ರೇಜು ಕೂಡ ಕ್ವಾರಿ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸಲು ಗ್ರೀನ್‌ಸಿಗ್ನಲ್ ಕೊಟ್ಟಿದ್ದರು. ಹಕ್ಲಾಡಿ ಗ್ರಾಪಂ ನೀರಿನ ಮಾದರಿ ಪರೀಕ್ಷೆಗೆ ಮೈಸೂರಿಗೆ ಕಳುಹಿಸಿದ್ದು, ಕುಡಿಯಲು ಯೋಗ್ಯ ಎಂಬ ವರದಿ ಸಿಕ್ಕಿತ್ತು. ಪ್ರಸ್ತುತ 25 ಲಕ್ಷ ರೂ. ವೆಚ್ಚದಲ್ಲಿ ಪೈಪ್‌ಲೈನ್, ವಾಟರ್ ಕ್ಯೂರಿಂಗ್ ಮೂಲಕ ಹಕ್ಲಾಡಿ ನೀರಿನ ಟ್ಯಾಂಕ್‌ಗೆ ಪೂರೈಸಿ ವಿತರಿಸುವ ಕೆಲಸ ನಡೆಯುತ್ತಿದೆ.

    70 ಲಕ್ಷ ರೂ. ವೆಚ್ಚದಲ್ಲಿ ಬಗ್ವಾಡಿ ಕಲ್ಲು ಕ್ವಾರಿಯಿಂದ ಹಕ್ಲಾಡಿ ಗುಡ್ಡೆಯಲ್ಲಿರುವ ನೀರಿನ ಟ್ಯಾಂಕ್ ತನಕ ಪೈಪ್‌ಲೈನ್ ಮಾಡಿ, ಅಲ್ಲಿಂದ ಟ್ಯಾಂಕ್‌ಗೆ ನೀರು ಪೂರೈಸಲು ಕೇಂದ್ರ ಸರ್ಕಾರದ ಜೀವಜಲ ಯೋಜನೆಗೆ ಕ್ರಿಯಾಯೋಜನೆ ಕಳುಹಿಸಲಾಗಿದೆ. ಈ ಯೋಜನೆ ಕಾರ‌್ಯರೂಪಕ್ಕೆ ಬಂದರೆ ಇಡೀ ಹಕ್ಲಾಡಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಆಗಲಿದೆ.
    ಸುಭಾಸ್ ಶೆಟ್ಟಿ ಹೊಳ್ಮಗೆ, ಉಪಾಧ್ಯಕ್ಷ, ಗ್ರಾಪಂ ಹಕ್ಲಾಡಿ

    ಒಂದೇ ಶಿಲೆಕಲ್ಲು ಕ್ವಾರಿಯಿಂದ ಹಕ್ಲಾಡಿ ಗ್ರಾಮಕ್ಕೆ ಸಾಕಾಗುವಷ್ಟು ನೀರಿದ್ದು, ಕೇಂದ್ರ ಸರ್ಕಾರದ ಜೀವಜಲ ಯೋಜನೆಯಲ್ಲಿ 70 ಲಕ್ಷ ರೂ. ಕ್ರಿಯಾಯೋಜನೆ ಮಾಡಿ ಇಂಜಿನಿಯರ್ ಕಳುಹಿಸಿದ್ದಾರೆ. ಬಗ್ವಾಡಿಯಿಂದ ಪೈಪ್‌ಲೈನ್ ಮೂಲಕ ಕಳೂರು, ಬಾಳೆಮನೆ, ಹಕ್ಲಾಡಿ ಗುಡ್ಡೆಯಲ್ಲಿರುವ ಟ್ಯಾಂಕಿಗೆ ನೀರು ಪೂರೈಕೆ ಮಾಡಿ ನಂತರ ಮನೆಮನೆಗೆ ವಿತರಣೆ ಮಾಡಲಾಗುತ್ತದೆ. ಶಿಲೆಕಲ್ಲು ಕ್ವಾರಿ ನೀರು ಗುಣಮಟ್ಟದಿಂದ ಕೂಡಿದೆ.
    ಚಂದ್ರ ಬಿಲ್ಲವ ವಂಡ್ಸೆ, ಗ್ರಾಪಂ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts