More

    ಕ್ಷೌರಿಕರ ನೆತ್ತಿ ಮೇಲೆ ಕರೊನಾ ಕತ್ತಿ!

    ಬೆಳಗಾವಿ : ಕ್ಷೌರ ಮಾಡುವುದನ್ನೇ ಕಸುಬು ಮಾಡಿಕೊಂಡು ಅನ್ನ, ಆಶ್ರಯ ನಿಭಾಯಿಸುತ್ತಿದ್ದ ಕ್ಷೌರಿಕರು ಕರೊನಾ ತಂದಿಟ್ಟ ಸಮಸ್ಯೆಯಿಂದ ಅಕ್ಷರಶಃ ನಲುಗಿ ಹೋಗಿದ್ದಾರೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಅಂದಿನದ್ದು ಅಂದೇ ದುಡಿದು ತಿನ್ನುತ್ತಿದ್ದ ಕ್ಷೌರಿಕರು ನಾಳೆಗಿಂತ ಇಂದು ಕಳೆಯುವುದರ ಬಗ್ಗೆಯೇ ಹೆಚ್ಚು ಚಿಂತಿತರಾಗಿದ್ದಾರೆ.

    ಬೆಲೆ ಹೆಚ್ಚಳದಿಂದ ಗಾಯದ ಮೇಲೆ ಬರೆ: ಸರ್ಕಾರ ಉಚಿತವಾಗಿ ಅಕ್ಕಿ, ಗೋಧಿ, ಅಡುಗೆ ಗ್ಯಾಸ್ ಕೊಡುತ್ತಿದೆ. ಆದರೆ ಅಡುಗೆ ಮಾಡಲು ಬೇಕಾದ ಪೂರಕ ಸಾಮಗ್ರಿ ಖರೀದಿಸಲು ಕ್ಷೌರಿಕರು ತುಟ್ಟಿಯಾಗಿದ್ದಾರೆ. ಲಾಕ್‌ಡೌನ್‌ನಿಂದಾಗಿ 20 ದಿನಗಳಿಂದ ಆದಾಯ ಇಲ್ಲದಿರುವ ಕಾರಣ ಬೆಲೆ ಹೆಚ್ಚಳದಿಂದ ದಿನಸಿ ವಸ್ತುಗಳು, ತರಕಾರಿ ಖರೀದಿಸಲು ಸಾಧ್ಯವಾಗುತ್ತಿಲ್ಲ. ಅಕ್ಕಿ ಗಂಜಿ ಕುಡಿದು ದಿನ ಕಳೆಯುವ ಪರಿಸ್ಥಿತಿ ಎದುರಾಗಿದ್ದು, ಕ್ಷೌರ ಮಾಡಲು ಮನೆ ಮನೆಗೆ ಹೋದರೆ ಜನರು ಕರೊನಾ ವೈರಸ್ ಹಾವಳಿ ಮುಗಿದ ಬಳಿಕ ಬರುವಂತೆ ವಾಪಸ್ ಕಳುಹಿಸುತಿದ್ದಾರೆ. ಹಾಗಾಗಿ ಅನ್ನಕ್ಕೂ ಕಲ್ಲು ಬಿದ್ದ ದುಸ್ಥಿತಿಯನ್ನು ಕ್ಷೌರಿಕರು ಎದುರಿಸುವಂತಾಗಿದೆ.

    ಬೀದಿಗೆ ಬಿದ್ದ ಕಾರ್ಮಿಕರು: ರಾಜ್ಯದಲ್ಲಿ ಮಹಾನಗರಗಳನ್ನು ಹೊರತುಪಡಿಸಿ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕ್ಷೌರಿಕ ವೃತ್ತಿ ನಂಬಿಕೊಂಡು ಸುಮಾರು 5 ಲಕ್ಷ ಕುಟುಂಬಗಳು ಬದುಕು ಸಾಗಿಸುತ್ತಿವೆ. ಅದರಲ್ಲಿ ಶೇ.60 ರಷ್ಟು ಕುಟುಂಬಗಳು ಪರ್ಯಾಯ ಉದ್ಯೋಗ ಹೊಂದಿಲ್ಲ. ನಿತ್ಯ ಬರುವ ಆದಾಯದ ಮೇಲೆ ಬದುಕು ಸಾಗಿಸುತ್ತಿವೆ. ಆರ್ಥಿಕವಾಗಿ ಸುಭದ್ರವಾಗಿರುವ ಕೆಲವರು ದಿನಗೂಲಿ ಆಧಾರದ ಮೇಲೆ ಕಾರ್ಮಿಕರನ್ನು ಇಟ್ಟುಕೊಂಡು ವೃತ್ತಿ ನಡೆಸುತ್ತಿದ್ದಾರೆ. ಕರೊನಾ ಕರಿಛಾಯೆಯಿಂದಾಗಿ ಆ ಕಾರ್ಮಿಕರು ಕೂಡ ಉದ್ಯೋಗ ಇಲ್ಲದೆ ಬೀದಿಗೆ ಬಿದ್ದಿದ್ದಾರೆ.

    ಕನಿಷ್ಠ ಆದಾಯಕ್ಕೂ ಕೊಕ್ಕೆ: ಲಾಕ್‌ಡೌನ್ ಘೋಷಣೆ ಮುನ್ನ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪ್ರತಿ ನಿತ್ಯ ಕನಿಷ್ಠ 350 ರಿಂದ 900 ರೂ. ವರೆಗೆ ಆದಾಯ ಬರುತ್ತಿತ್ತು. ಭಾನುವಾರ ಮತ್ತು ಬುಧವಾರ 1500 ರೂ. ವರೆಗೆ ಆದಾಯ ಗಳಿಕೆ ಆಗುತ್ತಿತ್ತು. ಈಗ ಲಾಕ್‌ಡೌನ್‌ನಿಂದ ಆದಾಯ ಇಲ್ಲದಂತಾಗಿದೆ. ಹೊಟ್ಟೆ ಪಾಡಿಗಾಗಿ ನಾಲ್ಕೈದು ದಿನಗಳಿಂದ ಮನೆ ಮನೆಗೆ ತೆರಳಿ ಕಟಿಂಗ್, ಶೇವಿಂಗ್ ಮಾಡಿ 100 ರಿಂದ 200 ರೂ. ವರೆಗೆ ಗಳಿಸುತ್ತಿದ್ದೇವೆ. ಕೆಲ ಹಳ್ಳಿಗಳಲ್ಲಿನ ಜನರು ಕರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಭೀತಿಯಿಂದ ಕ್ಷೌರ ಮಾಡಿಸಿಕೊಳ್ಳುತ್ತಿಲ್ಲ ಎಂದು ಕ್ಷೌರಿಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ವಲಸೆ ಬಂದವರ ಬದುಕು ಬೀದಿಗೆ: ಬೆಂಗಳೂರು, ಮೈಸೂರು, ಬಳ್ಳಾರಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹುಬ್ಬಳ್ಳಿ ಸೇರಿ ವಿವಿಧ ಕಡೆ ನಗರ ಪ್ರದೇಶಗಳಲ್ಲಿ ಕ್ಷೌರಿಕ ವೃತ್ತಿಗಾಗಿ ಕೆಲ ಅಂಗಡಿಗಳ ಮಾಲೀಕರು ಬೇರೆ ಬೇರೆ ರಾಜ್ಯಗಳಿಂದ ದಿನಗೂಲಿ ಆಧಾರದ ಮೇಲೆ ಕರೆದುಕೊಂಡು ಬಂದಿದ್ದಾರೆ.

    ಇದೀಗ ಲಾಕ್‌ಡೌನ್‌ನಿಂದ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದರಿಂದ ಮಾಲೀಕರು ಕೂಲಿ ನೀಡುತ್ತಿಲ್ಲ. ಪರಿಣಾಮ ದಾನಿಗಳು ನಿತ್ಯ ನೀಡುತ್ತಿರುವ ಆಹಾರದ ಮೇಲೆ ದಿನ ಕಳೆಯುತ್ತಿದ್ದೇವೆ ಎಂದು ವಲಸೆ ಬಂದಿರುವ ಕ್ಷೌರಿಕರು ದುಃಖ ತೋಡಿಕೊಳ್ಳುತ್ತಾರೆ.

    ರಾಜ್ಯದಲ್ಲಿ ಸುಮಾರು 5 ಲಕ್ಷ ಜನರು ಕ್ಷೌರಿಕ ವೃತ್ತಿ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇದೀಗ ಲಾಕ್‌ಡೌನ್‌ನಿಂದ ಕ್ಷೌರಿಕ ವೃತ್ತಿ ಸಂಪೂರ್ಣ ನಿಂತು ಹೋಗಿರುವುದರಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಪರ್ಯಾಯ ಉದ್ಯೋಗ ಇಲ್ಲದೆ ನಾವೆಲ್ಲ ಸಮಸ್ಯೆ ಎದುರಿಸುತ್ತಿದ್ದೇವೆ. ಸರ್ಕಾರವು ಕ್ಷೌರಿಕ ಕುಟುಂಬಗಳಿಗೆ ಸರ್ಕಾರ ವಿಶೇಷ ಅನುದಾನ ನೀಡಬೇಕು. ಕಟ್ಟಡ ಕಾರ್ಮಿಕರಿಗೆ ನೀಡುವ ವಿಶೇಷ ಅನುದಾನ ಮಾದರಿಯಲ್ಲಿ ಅಸಂಘಟಿತ ವಲಯದಲ್ಲಿರುವ ಕ್ಷೌರಿಕರಿಗೂ ಸಹಾಯಧನ ನೀಡಬೇಕು.
    | ಸುರೇಶ ಹಡಪದ, ಅಧ್ಯಕ್ಷರು, ಬೆಳಗಾವಿ ಜಿಲ್ಲಾ ಪಡಪದ (ಕ್ಷೌರಿಕ) ಸಮಾಜ

    ಸಾಲಕ್ಕೆ ಬಡ್ಡಿ ಕಟ್ಟುವ ಚಿಂತೆ

    ಈಗಾಗಲೇ ಮಕ್ಕಳ ಮದುವೆ, ವಿದ್ಯಾಭ್ಯಾಸ ಹಾಗೂ ಕುಟುಂಬ ನಿರ್ವಹಣೆಗಾಗಿ ಖಾಸಗಿ ಪೈನಾನ್ಸ್ ಗಳಲ್ಲಿ ಸಾಲ ಪಡೆದುಕೊಳ್ಳಲಾಗಿದ್ದು, ನಿತ್ಯ ಫಿಗ್ಮಿ ಮೂಲಕ 150 ರಿಂದ 200 ರೂ. ಕಟ್ಟಿಕೊಂಡು ಬರಲಾಗುತಿತ್ತು. ಇದೀಗ ಲಾಕ್‌ಡೌನ್‌ನಿಂದ ಆದಾಯವೇ ಇಲ್ಲದಂತಾಗಿದ್ದು, ಸಾಲದ ಬಡ್ಡಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಲಾಕ್‌ಡೌನ್ ಬಳಿಕ ಸಾಲ ಮರುಪಾವತಿ ಜತೆಗೆ ಬಡ್ಡಿ ಕಟ್ಟುವ ಚಿಂತೆ ಕಾಡಲಾರಂಭಿಸಿದೆ. ವೃತ್ತಿ ನಂಬಿಕೊಂಡು ಬದುಕು ಸಾಗಿಸುತ್ತಿರುವ ನಮಗೆಲ್ಲ ಪರ್ಯಾಯ ಆದಾಯ ತರುವ ಮೂಲಗಳಿಲ್ಲ. ಸರ್ಕಾರವೇ ನಮಗೆ ಪ್ರೋತ್ಸಾಹಧನ ಘೋಷಣೆ ಮಾಡಬೇಕು ಎಂದು ರಾಮದುರ್ಗ, ಸವದತ್ತಿ, ಮೂಡಲಗಿ, ರಾಯಬಾಗ ತಾಲೂಕಿನ ಬಡ ಕ್ಷೌರಿಕರು ಮನವಿ ಮಾಡಿದ್ದಾರೆ.

    ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts