More

    ಕೇಳೋರಿಲ್ಲ ಗೂಳೂರು ನಾಡಕಚೇರಿ ಗೋಳು ; ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ನಿತ್ಯ ಅಲೆದಾಟ ಸಮಸ್ಯೆ 

    ಬಾಗೇಪಲ್ಲಿ : ಪ್ರಮಾಣ ಪತ್ರಗಳ ಮುದ್ರಣಕ್ಕೆ ಕಾಗದಗಳ ಕೊರತೆ, ಪ್ರಿಂಟರ್ ರೀಪೇರಿ ಸೇರಿದಂತೆ ತಾಂತ್ರಿಕ ಸಮಸ್ಯೆಗಳಿಂದಾಗಿ ತಾಲೂಕಿನ ಗೂಳೂರು ನಾಡಕಚೇರಿಯಲ್ಲಿ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಹಾಗೂ ಸವಲತ್ತು ಪಡೆಯಲು ಸಾರ್ವಜನಿಕರು ನಿತ್ಯ ಎಡತಾಕುವಂತಾಗಿದೆ.

    ಯುಪಿಎಸ್ ಇದ್ದೂ ಇಲ್ಲದಂತಿದ್ದು ವಿದ್ಯುತ್ ನೇರ ಸರಬರಾಜು ಆಗುವಾಗ ಮಾತ್ರ ಆನ್‌ಲೈನ್ ತಂತ್ರಾಂಶ ಕೆಲಸ ಮಾಡುತ್ತದೆ, ವಿದ್ಯುತ್ ಕೈ ಕೊಟ್ಟರೆ ಎಲ್ಲ ಕೆಲಸಗಳಿಗೆ ಸ್ಥಗಿತಗೊಳ್ಳುತ್ತಿವೆ. ಇಷ್ಟೇ ಅಲ್ಲದೆ ಡಿ ಗ್ರೂಪ್ ಸಿಬ್ಬಂದಿ ಕೊರತೆ ಕಾಡುತ್ತಿದೆ. ನಾಡಕಚೇರಿ ಸಮಸ್ಯೆಗಳ ಗೂಡಾಗಿರುವುದು ತಿಳಿದಿದ್ದರೂ ಜಿಲ್ಲಾ ಹಾಗೂ ತಾಲೂಕು ಆಡಳಿತ ಯಂತ್ರಾಂಗ ಮೌನಕ್ಕೆ ಜಾರಿದೆ.

    ಬಾಗೇಪಲ್ಲಿ ತಾಲೂಕಿನ ನಲ್ಲಪರೆಡ್ಡಿಪಲ್ಲಿ, ಗೊರ್ತಪಲ್ಲಿ, ಕೊತ್ತಕೋಟೆ, ತಿಮ್ಮಂಪಲ್ಲಿ, ಗೂಳೂರು ಹಾಗೂ ಮಾರಗಾನುಕುಂಟೆ ಗ್ರಾಮ ಪಂಚಾಯಿತಿಗಳು ಈ ನಾಡಕಚೇರಿ ವ್ಯಾಪ್ತಿಗೆ ಒಳಪಟ್ಟಿದ್ದು, ಗೂಳೂರು ಹೋಬಳಿ ಕೇಂದ್ರವೂ ಸೇರಿದಂತೆ 6 ಗ್ರಾಪಂಗಳ 80 ಹಳ್ಳಿಗಳ ನಾಗರಿಕರು ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಹಾಗೂ ಪ್ರಮಾಣ ಪತ್ರ ಪಡೆದುಕೊಳ್ಳಲು ನಾಡಕಚೇರಿಯನ್ನೇ ಆಶ್ರಯಿಸಿದ್ದಾರೆ.

    ತಾಂತ್ರಿಕ ಸಮಸ್ಯೆಗಳಿಂದಾಗಿ ಸಾಮಾಜಿಕ ಭದ್ರತಾ ಯೋಜನೆಯ ವಿಧವಾ ವೇತನ, ವೃದ್ಯಾಪ್ಯ ವೇತನ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಬೆಳೆ ದೃಡೀಕರಣ ಪತ್ರ, ಜಮೀನು ಸರ್ವೇಗಾಗಿ ಭೂ ಮಾಪನಾ ಅರ್ಜಿ ಸಲ್ಲಿಕೆ, ವಾಸಸ್ಥಳ, ವಂಶವೃಕ್ಷ, ಅತ್ಯವಶ್ಯಕ ದೃಡೀಕರಣ ಪತ್ರಗಳು ಸೇರಿ ವಿವಿಧ ಯೋಜನೆಗಳ ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಲು ನಿತ್ಯ ಅಲೆದಾಡುವಂತಾಗಿದೆ.

    ಒಂದೊಂಮ್ಮೆ ಅರ್ಜಿದಾರರು ಕಚೇರಿಯ ಸಿಬ್ಬಂದಿಯನ್ನೂ ಪ್ರಶ್ನಿಸಿದರೆ ತಾಂತ್ರಿಕ ಸಮಸ್ಯೆಗಳ ಉತ್ತರ ನೀಡಿ ಸಾಗಹಾಕುತ್ತಿದ್ದಾರೆ, ತಾಲೂಕು ಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ಹೋದರೆ ಹೋಬಳಿ ಕೇಂದ್ರದಲ್ಲೇ ಸಲ್ಲಿಸುವಂತೆ ಹೇಳು ವಾಪಸ್ ನೀಡುತ್ತಿದ್ದಾರೆ, ಇಲ್ಲಿಗೆ ಬಂದರೆ ಮತ್ತದೇ ಅಲೆದಾಟವೇ ಹೊರತು ಇಲ್ಲಿನ ಸಮಸ್ಯೆ ಪರಿಹರಿಸಲು ಯಾರೊಬ್ಬರೂ ಮನಸ್ಸು ಮಾಡುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.

    ಶಾಲಾ-ಕಾಲೇಜುಗಳು ಪ್ರಾರಂಭವಾಗಿದ್ದು ಮಕ್ಕಳ ವಿಧ್ಯಾಭ್ಯಾಸದ ದಾಖಲಾತಿಗಾಗಿ ಆಗತ್ಯವಿರುವ ಪ್ರಮಾಣಪತ್ರ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ತಿಂಗಳ ಹಿಂದೆಯೇ ಹಲವು ಸೌಲಭ್ಯಗಳಿಗಾಗಿ ಅರ್ಜಿಗಳು ಸಲ್ಲಿಸಿದ್ದರೂ ಯುಪಿಎಸ್ ಇಲ್ಲ, ಪ್ರಿಂಟರ್ ಕೆಲಸ ಮಾಡುತ್ತಿಲ್ಲ ಎಂದು ಹೇಳಿ ದಾಖಲೆ ಓದಗಿಸಿಕೊಡುವಲ್ಲಿ ಗೂಳೂರು ನಾಡಕಚೇರಿ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ.
    ತಿಪ್ಪಣ್ಣ, ದಲಿತ ಹೋರಾಟ ಸಮಿತಿ ಗೌರವಾಧ್ಯಕ್ಷರು, ನಲ್ಲಪರೆಡ್ಡಿಪಲ್ಲಿ ಗ್ರಾಮ.

    ಬಾಗೇಪಲ್ಲಿ ತಾಲೂಕಿನ ಎಲ್ಲ ನಾಡ ಕಚೇರಿಗಳಲ್ಲಿ ಯುಪಿಎಸ್ ಸೇರಿ ಇತರೆ ತಾಂತ್ರಿಕ ಸಮಸ್ಯೆಗಳಿವೆ. ಸಮಸ್ಯೆಗಳ ಪರಿಹಾರಕ್ಕಾಗಿ ವಿಶೇಷ ಅನುದಾನ ಬಿಡುಗಡೆ ಮಾಡಿಕೊಡಬೇಕಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಶೀಘ್ರದಲ್ಲಿ ಬಗೆಹರಿಸುತ್ತೇವೆ.
    ಡಿ.ಎ. ದಿವಾಕರ್, ತಹಸೀಲ್ದಾರ್, ಬಾಗೇಪಲ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts