More

    ಅಧ್ಯಕ್ಷ, ಮುಖ್ಯಾಧಿಕಾರಿ ಕೊಠಡಿಗೆ ಮುತ್ತಿಗೆ

    ಗುಳೇದಗುಡ್ಡ: ಕಳೆದ 15 ದಿನಗಳಿಂದ ಬಾಕಿ ವೇತನ ನೀಡುವಂತೆ ಆಗ್ರಹಿಸಿ ಪುರಸಭೆ ಎದುರು ಸತ್ಯಾಗ್ರಹ ನಡೆಸುತ್ತಿರುವ ಹೊರಗುತ್ತಿಗೆ ಸ್ವಚ್ಛತಾ ನಿರ್ವಹಣೆ ಮಾಡುವ ಪೌರಕಾರ್ಮಿಕರು ಬುಧವಾರ ಅಧ್ಯಕ್ಷ ಹಾಗೂ ಪುರಸಭೆ ಮುಖ್ಯಾಧಿಕಾರಿ ಕೊಠಡಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

    ನೂತನ ಅಧ್ಯಕ್ಷೆ ಶಿಲ್ಪಾ ಹಳ್ಳಿ ಅವರ ಕೊಠಡಿಗೆ ಮುತ್ತಿಗೆ ಹಾಕಿದ ಹೊರಗುತ್ತಿಗೆ ಕಾರ್ಮಿಕರು, ಹೊರಗುತ್ತಿಗೆ ಸ್ವಚ್ಛತಾ ನಿರ್ವಹಣೆ ಮಾಡಿದ ಪೌರ ಕಾರ್ಮಿಕರಿಗೆ ಕಳೆದ 11 ತಿಂಗಳಿಂದ ವೇತನ ನೀಡಿಲ್ಲ. ನಮಗೆ ವೇತನ ಇಲ್ಲದೇ ಜೀವನ ನಡೆಸುವುದು ಕಠಿಣವಾಗಿದೆ. ನಮ್ಮ ಪರಿಸ್ಥಿತಿ ಕೆಟ್ಟದಾಗಿದೆ. ಹಣವಿಲ್ಲದೆ ಈ ಬಾರಿ ದೀಪಾವಳಿ ಹಬ್ಬವನ್ನು ಆಚರಿಸಿಲ್ಲ. ಬಾಕಿ ವೇತನ ನೀಡುವಂತೆ ಒತ್ತಾಯಿಸಿದರು.

    ಅಧ್ಯಕ್ಷೆ ಪ್ರತಿಕ್ರಿಯಿಸಿ, 11 ತಿಂಗಳಿನ ಬಾಕಿ ವೇತನ ನೀಡಲಾಗುವುದು. ಧರಣಿ ಹಿಂಪಡೆದು, ಗುರುವಾರದಿಂದಲೇ ಕೆಲಸಕ್ಕೆ ಹಾಜರಾಗಿ ಎಂದು ಸೂಚಿಸಿದರು. ಇದಕ್ಕೆ ಒಪ್ಪಿಗೆ ಸೂಚಿಸಿ ಕಳೆದ 15 ದಿನಗಳಿಂದ ನಡೆಸುತ್ತಿದ್ದ ಧರಣಿಯನ್ನು ಹೊರಗುತ್ತಿಗೆ ಕಾರ್ಮಿಕರು ಕೈಬಿಟ್ಟರು.
    ಇದಕ್ಕೂ ಮೊದಲು ಮುಖ್ಯಾಧಿಕಾರಿ ಕೊಠಡಿಗೆ ಮುತ್ತಿಗೆ ಹಾಕಿ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

    ನಿಯಮಬಾಹಿರವಾಗಿ ನಿಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಈಗೀನ ಪುರಸಭೆಯ ಆರ್ಥಿಕ ಪರಿಸ್ಥಿತಿ ನೋಡಿದರೆ ನಿಮಗೆ ವೇತನ ನೀಡುವುದು ಕಷ್ಟ. ಆದರೂ ನಾನು ಸದಸ್ಯರ ಸಭೆಯಲ್ಲಿ ಈ ವಿಷಯವಿಟ್ಟು ಪುರಸಭೆ ಆಡಳಿತ ಮಂಡಳಿ ನಿರ್ಣಯದಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಮುಖ್ಯಾಧಿಕಾರಿ ಜ್ಯೋತಿಗಿರೀಶ ಭರವಸೆ ನೀಡಿದರು.

    ಪ್ರತಿಭಟನಾಕಾರಾದ ಭೀಮಶಿ ನಡುವಿನಮನಿ, ಮುತ್ತಪ್ಪ ಹೆಬ್ಬಳ್ಳಿ, ಸರಸ್ವತಿ ಶಿಕ್ಕಲಗಾರ, ದುರ್ಗವ್ವ ಶಿಕ್ಕಲಗಾರ, ಉಮೇಶ ಮಾದರ, ಮಂಜುನಾಥ ನಡುವಿನಮನಿ, ರಾಜಪ್ಪ ಬದಾಮಿ, ಪ್ರದೀಪ ಕೊತ್ತಂಬರಿ, ಅನೀಲ ಕೊತ್ತಂಬರಿ, ನಾಗಪ್ಪ ಮಾದರ, ಹನುಮಂತ ಮಾದರ, ಸುವರ್ಣ ದೇವರಮನಿ, ಮೀನಾಕ್ಷಿ ಹೆಬ್ಬಳ್ಳಿ, ಶಿಲ್ಪಾ ಶಿಕ್ಕಲಗಾರ, ಅಕ್ಕಮ್ಮ ಶಿಕ್ಕಲಗಾರ, ರೇಣುಕಾ ಮಾದರ, ಮಂಜುಳಾ ಹಚ್ಚಿನಮನಿ ಮತ್ತಿತರರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts