More

    ಹೊಸವರ್ಷಾಚರಣೆ ಆಸೆಯಿಟ್ಟುಕೊಂಡಿದ್ದವರಿಗೆ ಸರ್ಕಾರದ ಶಾಕ್​: ಮಾರ್ಗಸೂಚಿಯಲ್ಲಿ ಕಠಿಣ ನಿಯಮಗಳು

    ಬೆಂಗಳೂರು: ಕೋವಿಡ್ ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆ ತಡೆಯಲು ಕ್ರಿಸ್​ಮಸ್​ ಹಾಗೂ ಹೊಸ ವರ್ಷ ಆಚರಣೆ ಸಂದರ್ಭ ಜನರು ಪಾಲಿಸಬೇಕಾದ ಎಚ್ಚರಿಕೆ ಕ್ರಮಗಳ ಕುರಿತು ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಡಿ.30ರಿಂದ 2021ರ ಜ.2ರವರೆಗೆ ಕ್ಲಬ್, ಪಬ್, ರೆಸ್ಟೋರೆಂಟ್ ಸೇರಿ ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ, ವಸತಿ ಸಮುಚ್ಚಯಗಳಲ್ಲಿ ಹಾಗೂ ಜನ ಸೇರುವ ಸ್ಥಳಗಳಲ್ಲಿ ಸಾಮೂಹಿಕ ಕೂಟಗಳನ್ನು ನಿಷೇಧಿಸಿ ಆದೇಶ ಹೊರಡಿ ಸಿದೆ. ಆಚರಣೆಯಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸಲು ಅವಕಾಶ ನೀಡಲಾಗಿದ್ದು, ಕರೊನಾ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಕ್ರಿಸ್​ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಯನ್ನು ಸರಳ ಮತ್ತು ಅರ್ಥಗರ್ಭಿತವಾಗಿ ಆಚರಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

    ಪ್ರಮುಖ ಅಂಶಗಳು

    • ಕ್ರಿಸ್​ಮಸ್​ ಆಚರಣೆ ಸಂದರ್ಭ ಚರ್ಚ್​ಗಳಲ್ಲಿ ಒಮ್ಮೆಲೆ ಹೆಚ್ಚು ಜನರು ಸೇರದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಗೂ ಕಡ್ಡಾಯ ಮಾಸ್ಕ್ ಧರಿಸುವ ಕುರಿತು ಮೇಲ್ವಿಚಾರಕರು/ ಆಯೋಜಕರು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಹಸ್ತಲಾಘನ ಮತ್ತು ಆಲಿಂಗನಕ್ಕೆ ಅವಕಾಶ ಇರುವುದಿಲ್ಲ.
    • ಹೊಸ ವರ್ಷಾಚರಣೆ ಸಂಬಂಧ ಸಾರ್ವಜನಿಕ ಸ್ಥಳಗಳಲ್ಲಿ, ಮುಖ್ಯ ರಸ್ತೆಗಳಲ್ಲಿ ಸಾಮಾಜಿಕ ಅಂತರವಿಲ್ಲದೆಯೇ ಹೆಚ್ಚು ಜನರು ಸೇರುವಿಕೆ ಹಾಗೂ ಸಂಭ್ರಮಾಚರಣೆ ನಿಷೇಧಿಸಲಾಗಿದೆ. ಪ್ರತಿನಿತ್ಯದ ಸಾಮಾನ್ಯ ಕಾರ್ಯಚಟುವಟಿಕೆ ಕೈಗೊಳ್ಳಲು ಅವಕಾಶ ನೀಡಲಾಗಿದೆ.
    • ಆಯ್ದ ರಸ್ತೆಗಳಿಗೆ ಸ್ಥಳೀಯ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ಹೆಚ್ಚಿನ ನಿರ್ಬಂಧ ವಿಧಿಸಬಹುದಾಗಿದೆ. 65 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೇ ಇರತಕ್ಕದ್ದು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
    • ಹೋಟೆಲ್, ಮಾಲ್​ಗಳು, ಪಬ್, ರೆಸ್ಟೋರೆಂಟ್ ಸೇರಿ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸೋಂಕು ನಿವಾರಕ ದ್ರಾವಣದ ವ್ಯವಸ್ಥೆ ಇರಬೇಕು. ಇವುಗಳ ಅಳವಡಿಕೆ ಜತೆಗೆ ಮಾಲೀಕರು ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು.

    ಕರೊನಾ ಚೇತರಿಕೆ ಪ್ರಮಾಣ ಏರಿಕೆ

    ರಾಜ್ಯದಲ್ಲಿ ಗುರುವಾರ 1,497 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಸಂಖ್ಯೆ 8.78ಲಕ್ಷಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 15,205ಕ್ಕೆ ಇಳಿಕೆಯಾಗಿದೆ. ಹೊಸದಾಗಿ 1,236 ಸೋಂಕು ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 9.05 ಲಕ್ಷಕ್ಕೆರಿದೆ. ಚಿಕಿತ್ಸೆ ಫಲಿಸದೆ 10 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 11,981 ತಲುಪಿದೆ. ಸೋಂಕಿತರಲ್ಲಿ 229 ಮಂದಿ ಗಂಭೀರ ಸಮಸ್ಯೆಯಿಂದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts